×
Ad

​ಟಿಎಂಸಿ ಸಂಸದನ ಪತ್ನಿಗೆ ದೆಹಲಿ ನ್ಯಾಯಾಲಯ ಸಮನ್ಸ್

Update: 2021-09-19 10:04 IST

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಅಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯವರ ಪತ್ನಿ ರುಜಿರಾ ಅವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ರುಜಿರಾ ನಿರಾಕರಿಸಿದ್ದರೆ ಎಂದು ಕಾನೂನು ಜಾರಿ ನಿರ್ದೇಶನಾಲಯ ದೂರು ನೀಡಿದ ಹಿನ್ನೆಲೆಯಲ್ಲಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ಪಂಕಜ್ ಶರ್ಮಾ, ಸೆಪ್ಟೆಂಬರ್ 30ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ರುಜಿರಾಗೆ ಸಮನ್ಸ್ ನೀಡಿದ್ದಾರೆ.

ಪದೇ ಪದೇ ಸಮನ್ಸ್ ನೀಡಿದ ಹೊರತಾಗಿಯೂ ರುಜಿರಾ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದಾರೆ ಎಂದು ನಿರ್ದೇಶನಾಲಯ ದೂರು ನೀಡಿತ್ತು.

ಏತನ್ಮಧ್ಯೆ ಬ್ಯಾನರ್ಜಿ ದಂಪತಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿದ್ದಾರೆ. ತಾವು ಕೊಲ್ಕತ್ತಾ ನಿವಾಸಿಗಳಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ವಿಚಾರಣೆಗೆ ಕೈಜೋಡಿಸಬೇಕಾಗಿಲ್ಲ ಎಂದು ದಂಪತಿ ಅರ್ಜಿಯಲ್ಲಿ ಹೇಳಿದ್ದಾರೆ.

ಸೆಪ್ಟೆಂಬರ್ 10ರಂದು ನೀಡಿರುವ ಸಮನ್ಸ್‌ನ ಕ್ರಮಬದ್ಧತೆಯನ್ನು ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದು, ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡದಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಬೇಕು ಎಂದು ಕೋರಿದ್ದಾರೆ. 33 ವರ್ಷ ವಯಸ್ಸಿನ ಬ್ಯಾನರ್ಜಿ, ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಪರಾಧ ದಂಡಸಂಹಿತೆ ಸೆಕ್ಷನ್ 160ರ ಅಡಿಯಲ್ಲಿ ಮಹಿಳೆಗೆ ಸಾಕಷ್ಟು ಕಾನೂನಾತ್ಮಕ ರಕ್ಷಣೆ ಇದ್ದು, ಇದರ ಅನ್ವಯ ಮಹಿಳೆಯರು ತಾವು ವಾಸಿಸುವ ಪ್ರದೇಶದಿಂದ ಹೊರತಾಗಿ ಬೇರೆಲ್ಲೂ ವಿಚಾರಣೆಗೆ ಹಾಜರಾಗಬೇಕಿಲ್ಲ ಎಂದು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News