ಚರಣ್‌ಜಿತ್ ಸಿಂಗ್ ಚನ್ನಿ ಪಂಜಾಬ್‌ನ ನೂತನ ಮುಖ್ಯಮಂತ್ರಿ

Update: 2021-09-19 19:10 GMT
photo: facebook

ಚಂಡೀಗಢ, ಸೆ.19: ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ಖ್ ಸಮುದಾಯದ ನಾಯಕ ಚರಣ್‌ ಜಿತ್‌ ಛನ್ನಿ ಅವರನ್ನು ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ರವಿವಾರ ಘೋಷಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಭುಗಿಲೆದ್ದಿದ್ದ ಅಂತಕಲಹದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಅಮರೀಂದರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿದ್ದಾರೆ.

‘‘ಪಂಜಾಬ್ ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಚರಣ್‌ ಜಿತ್‌ ಛನ್ನಿ ಅವರನ್ನು ಅವಿರೋಧವಾಗಿ ಆಯ್ಕೆಯ ಮಾಡಲಾಗಿದೆ ಎಂದು ಘೋಷಿಸಲು ನನಗೆ ಅಪಾರ ಸಂತಸವಾಗುತ್ತಿದೆ’’ ಎಂದು ರಾವತ್ ಟ್ವೀಟಿಸಿದ್ದಾರೆ.

58 ವರ್ಷ ವಯಸ್ಸಿನ ಛನ್ನಿ ಅವರು ಹಿಂದಿನ ಕ್ಯಾ. ಅಮರೀಂದರ್ ಸಿಂಗ್ ನೇತೃತ್ವದ ಸರಕಾರದಲ್ಲಿ ಛನ್ನಿ ಅವರು ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು.ಅಮರೀಂದರ್ ಸಿಂಗ್ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರಲ್ಲೂ ಛನ್ನಿ ಕೂಡಾ ಒಬ್ಬರಾಗಿದ್ದರು.2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಅಮರೀಂದರ್ ಸಿಂಗ್ ವಿಫಲರಾಗಿದ್ದರೆಂದು ಅವರು ಟೀಕಿಸಿದ್ದರು.

ಭಿನ್ನಮತದಿಂದ ಜರ್ಝರಿತವಾಗಿರುವ ಕಾಂಗ್ರೆಸ್ ಪಕ್ಷವು ಮುಂದಿನ ಐದು ತಿಂಗಳೊಳಗೆ ಪಂಜಾಬ್ ವಿಧಾನಸಭೆಗೆ ಚುನಾವಣೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಛನ್ನಿ ಅವ ಆಯ್ಕೆಯು ಹೆಚ್ಚಿನ ಮಹತ್ವ ಪಡೆದಿದೆ.

ಪಂಜಾಬ್ ನಲ್ಲಿ ಒಂದು ವೇಳೆ ತಾನು ಅಧಿಕಾರಕ್ಕೆ ಬಂದಲ್ಲಿ, ದಲಿತ ಮುಖ್ಯಮಂತ್ರಿಯನ್ನು ನೇಮಿಸುವುದಾಗಿ ಬಿಜೆಪಿ ಈ ಮೊದಲು ಘೋಷಿಸಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಚುನಾವಣಾ ಮೈತ್ರಿಯೇರ್ಪಡಿಸಿಕೊಳ್ಳುವುದಾಗಿ ಪ್ರಮುಖ ಪ್ರತಿಪಕ್ಷವಾದ ಶಿರೋಮಣಿ ಅಕಾಲಿ ದಳ ಈಗಾಗಲೇ ಘೋಷಿಸಿದೆ ಹಾಗೂ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸುವುದಾಗಿ ಅದು ತಿಳಿಸಿದೆ.

ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಛನ್ನಿ ಅವರು ರಾಜ್ಯಪಾಲರನ್ನು ಬೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದರೆಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ರಾವತ್ ಹಾಗೂ ಪಕ್ಷದ ಕೇಂದ್ರೀಯ ವೀಕ್ಷಕರಾದ ಅಜಯ್ ಮಕಾನ್ ಹಾಗೂ ಹರೀಶ್‌ ಚೌಧುರಿ ಅವರ ಜೊತೆಗಿದ್ದರು.

ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಚರಣ್ಜಿತ್ ಸಿಂಗ್ ಛನ್ನಿ ಅವರಿಗೆ ನಿರ್ಗಮನ ಮುಖ್ಯಮಂತ್ರಿ ಶುಭ ಹಾರೈಸಿದ್ದಾರೆ. ಗಡಿ ರಾಜ್ಯವಾದ ಪಂಜಾಬ್ನ್ನು ಸುರಕ್ಷಿತವಾಗಿರಿಸಲು ಛನ್ನಿ ಸಮರ್ಥರಾಗಲಿದ್ದಾರೆಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ‘‘ ಛನ್ನಿ ಅವರು ಗಡಿರಾಜ್ಯವಾದ ಪಂಜಾಬನ್ನು ಸುರಕ್ಷಿತವಾಗಿಡುವರು ಹಾಗೂ ಗಡಿಯಾಚೆಯಿಂದ ಹೆಚ್ಚುತ್ತಿರುವ ಭದ್ರತಾ ಬೆದರಿಕೆಯಿಂದ ನಮ್ಮ ಜನತೆಯನ್ನು ರಕ್ಷಿಸುವರೆಂದು ತಾನು ಆಶಿಸುವೆ ’’ ಎಂದವರು ಹೇಳಿದ್ದಾರೆ.

ಅಮರೀಂದರ್ ರಾಜೀನಾಮೆ ಬೆನ್ನಲ್ಲೇ ಪಂಜಾಬ್ನ ಇನ್ನೋರ್ವ ಕಾಂಗ್ರೆಸ್ ನಾಯಕ ಸುಖ್ಜೀಂದರ್ ಸಿಂಗ್ ರಾಂಧವಾ ಅವರು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದರು. ಆದಾಗ್ಯೂ ಛನ್ನಿ ಅವರು ಹೆಸರು ಘೋಷಣೆಯಾದ ಬೆನ್ನಲ್ಲೇ ರಾಂಧಾವ ಹೇಳಿಕೆಯೊಂದನ್ನು ನೀಡಿ, ಪಕ್ಷದ ಹೈಕಮಾಂಡ್ನ ನಿರ್ಧಾರವನ್ನು ನಾವು ಸ್ವಾಗತಿಸುತ್ತೇನೆ ಎಂದರು. ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಅವರಿಗೆ ಆಪ್ತರೆಂದು ಪರಿಗಣಿಸಲಾಗಿರುವ ಇನ್ನೋರ್ವ ಹಿರಿಯ ನಾಯಕ ಬ್ರಹ್ಮ ಮಹೀಂದ್ರ ಕೂಡಾ ಛನ್ನಿ ಅವರ ನೇಮಕವನ್ನು ಸ್ವಾಗತಿಸಿದ್ದಾರೆ.

ಅಮರೀಂದರ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್ ವರಿಷ್ಠರು ಬಿರುಸಿನ ಮಾತುಕತೆಗಳನ್ನು ನಡೆಸಿದ್ದರು. ಕಾಂಗ್ರೆಸ್ ಹೈಕಮಾಂಡ್ನ ಪ್ರತಿನಿಧಿಗಳಾದ ಹರೀಶ್ ರಾವತ್, ಅಜಯ್ ಮಾಕನ್ ಹಾಗೂ ಹರೀಶ್ ಚೌಧುರಿ ಚಂಡೀಗಢದ ಹೊಟೇಲ್ ಒಂದರಲ್ಲಿ ಮೊಕ್ಕಾಂ ಹೂಡಿದ್ದು, ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು.

ಮುಂದಿನ ವಿಧಾನಸಭಾ ಚುನಾವಣೆಗೆ ದಲಿತ ಮತಗಳ ಒಲೈಕೆಗೆ ಯತ್ನ?

ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿರುವ ಶಿರೋಮಣಿ ಅಕಾಲಿದಳವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಜೊತೆ ಕೈಜೋಡಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಮತಗಳು ತನಗೆ ತಪ್ಪುವುದನ್ನು ತಡೆಯಲು ಕಾಂಗ್ರೆಸ್ ದಲಿತ ಸಮುದಾಯದ ಛನ್ನಾ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಸ್ಥಾಕ್ಕೆ ಆಯ್ಕೆಯಾಗಿರುವ ಛನ್ನಿ ಅವರು ಕೂಡಾ ವಿವಾದಗಳಿಂದ ಹೊರತಾಗಿಲ್ಲ. 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಛನ್ನಿ ಅವರು ಮೊಬೈಲ್ನಲ್ಲಿ ಅನುಚಿತವಾದ ಸಂದೇಶಗಳನ್ನು ಕಳುಹಿಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು. ಆದಾಗ್ಯೂ ಆ ಬಗ್ಗೆ ಐಎಎಸ್ ಅಧಿಕಾರಿಣಿ ಯಾವುದೇ ದೂರು ನೀಡಿರಲಿಲ್ಲ. ಆದರೆ ಮೇ ತಿಂಗಳಲ್ಲಿ ಪಂಜಾಬ್ ಮಹಿಳಾ ಆಯೋಗವು ಈ ಬಗ್ಗೆ ಪಂಜಾಬ್ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಅದರ ಪ್ರತಿಕ್ರಿಯೆ ಕೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News