ಕಳೆದ 5 ತಿಂಗಳುಗಳ ವಿದ್ಯಮಾನಗಳಿಂದ ವೇದನೆಯಾಗಿದೆ: ಸೋನಿಯಾ ಗಾಂಧಿಗೆ ಅಮರೀಂದರ್ ಸಿಂಗ್ ಪತ್ರ

Update: 2021-09-19 19:08 GMT

ಚಂಡಿಗಢ: ಅಮರೀಂದರ್ ಸಿಂಗ್ ಅವರು ಪಂಜಾಬ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ತಾಸುಗಳ ಮೊದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಕಳೆದ ಐದು ತಿಂಗಳುಗಳಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಂದ ತಾನು ರೋಸಿ ಹೋಗಿರುವುದಾಗಿ ತಿಳಿಸಿದ್ದಾರೆ.

ಜುಲೈನಲ್ಲಿ ಪಂಜಾಬ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆಯಾದ ನವಜೋತ್ಸಿಂಗ್ ಸಿದು ಜೊತೆಗಿನ ತೀವ್ರ ಆಂತರಿಕ ಕಲಹದ ಬಳಿಕ ಅಮರೀಂದರ್ಸಿಂಗ್ ಶುಕ್ರವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಹಲವಾರು ಭೌಗೋಳಿಕ-ರಾಜಕೀಯ ಹಾಗೂ ಇತರ ಆಂತರಿಕ ಭದ್ರತಾ ಆತಂಕಗಳಿಂದ ಕೂಡಿದ ರಾಜ್ಯವಾದ ಪಂಜಾಬ್ನ ಮುಖ್ಯಮಂತ್ರಿಯಾಗಿ ತಾನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವುದಾಗಿಯೂ ಅವರು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಯಾವುದೇ ವಿಷಯದಲ್ಲಿ ರಾಜೀಮಾಡಿಕೊಳ್ಳದೆ ತಾನು ಈ ವಿಷಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಲು ಯತ್ನಿಸಿರುವುದಾಗಿಯೂಅವರು ಹೇಳಿದ್ದಾರೆ. ‘‘ ನನ್ನ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಶಾಂತಿ ಹಾಗೂ ಕೋಮುಸೌಹಾರ್ದತೆ ನೆಲೆಸಿದ್ದುದು ನನಗೆ ಸಂತಸತಂದಿದೆ’’ ಎಂದವರು ಹೇಳಿದ್ದಾರೆ.

ಆದರೆ ಕಷ್ಟಪಟ್ಟು ಗಳಿಸಲಾದ ಈ ಶಾಂತಿ ಹಾಗೂ ಅಭಿವೃದ್ಧಿಗೆ ಇತ್ತೀಚಿನ ರಾಜಕೀಯ ಬಿಕ್ಕಟ್ಟಿನಿಂದ ಯಾವುದೇ ಧಕ್ಕೆಯಾಗಬಾರೆಂದು ತಾನು ಆಶಿಸುವುದಾಗಿ ಅವರು ಹೇಳಿದ್ದಾರೆ.

ಕಾಂಗ್ರೆಸ್ ನ ಪ್ರಬುದ್ಧ ಹಾಗೂ ಪರಿಣಾಮಕಾರಿ ಸಾರ್ವಜನಿಕ ನೀತಿಗಳ ಬಗ್ಗೆ ಪಂಜಾಬ್ನ ಜನತೆ ಬಹಳಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ ಎಂದವರು ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News