ಮಹಾರಾಷ್ಟ್ರ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಪೊಲೀಸ್ ವಶಕ್ಕೆ

Update: 2021-09-20 14:39 GMT

ಹೊಸದಿಲ್ಲಿ: ಕೊಲ್ಲಾಪುರಕ್ಕೆ ತೆರಳುತ್ತಿದ್ದ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ  ಕಿರಿಟ್ ಸೋಮಯ್ಯ ಅವರನ್ನು ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರಾಡ್ ರೈಲ್ವೆ ನಿಲ್ದಾಣದಲ್ಲಿ ತಡೆದ ಪೊಲೀಸರು ಅವರನ್ನು ಕರಾಡ್ ಸರ್ಕ್ಯೂಟ್ ಹೌಸಿನಲ್ಲಿರಿಸಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಎನ್‍ಸಿಪಿ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಸೋಮಯ್ಯ ಅವರು ಸೆಪ್ಟೆಂಬರ್ 14ರಂದು ಹೊರಿಸಿದ್ದರು. ಅಕ್ರಮ ಹಣ ವರ್ಗಾವಣೆ ಹಾಗೂ ಬೇನಾಮಿ ಸಂಸ್ಥೆಗಳನ್ನು ಸಚಿವರು ಹೊಂದಿದ್ದಾರೆಂದು ಸೋಮಯ್ಯ ಮಾಡಿದ ಆರೋಪವನ್ನು ಸಚಿವರು ನಿರಾಕರಿಸಿದ್ದರಲ್ಲದೆ ರೂ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದರು.

ಕೊಲ್ಲಾಪುರದ ಕಲೆಕ್ಟರ್ ರಾಹುಲ್ ರೇಖೇವಾರ್ ಅವರು  ತಮ್ಮನ್ನು ಕೊಲ್ಲಾಪುರ ಪ್ರವೇಶಿಸದಂತೆ ಸೆಕ್ಷನ್ 144 ಅನ್ವಯ ನಿರ್ಬಂಧಿಸಿದ್ದಾರೆ  ಹಾಗೂ  ತಾವು ಜಿಲ್ಲೆ ಪ್ರವೇಶಿಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಕಾರಣ ನೀಡಿದ್ದಾರೆದು ಕಿರಿಟ್ ಸೋಮಯ್ಯ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಭ್ರಷ್ಟ ಸಚಿವರ ನಿಜ ಬಣ್ಣವನ್ನು ಬಯಲು ಮಾಡಿದ ಸೋಮಯ್ಯ ಅವರನ್ನು ಹತ್ತಿಕ್ಕಲು ಮಹಾರಾಷ್ಟ್ರ ಸರಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News