ಜೋರ್ಡಾನ್ ಗೆ ಭೇಟಿ ನೀಡಿದ ಸಿರಿಯಾ ರಕ್ಷಣಾ ಸಚಿವ

Update: 2021-09-20 16:16 GMT

ಅಮ್ಮಾನ್, ಸೆ.20: ಸುಮಾರು 10 ವರ್ಷದ ಬಳಿಕ ಸಿರಿಯಾದ ರಕ್ಷಣಾ ಸಚಿವರು ಜೋರ್ಡಾನ್ ಗೆ ಭೇಟಿ ನೀಡಿದ್ದು, ಗಡಿಪ್ರದೇಶದಲ್ಲಿನ ಭದ್ರತೆ ಮತ್ತು ಸ್ಥಿರತೆಯ ಕುರಿತು ಅಲ್ಲಿನ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  
ದಕ್ಷಿಣಪ್ರಾಂತ್ಯದಲ್ಲಿ ಸಿರಿಯಾ ಬಂಡುಕೋರರ ನಿಯಂತ್ರಣದಲ್ಲಿದ್ದ ಕಟ್ಟಕಡೆಯ ಪ್ರದೇಶವಾದ ಡೆರಾವನ್ನು ಮರಳಿ ಸ್ವಾಧೀನಪಡಿಸಿಕೊಳ್ಳಲು ಇತ್ತೀಚೆಗೆ ಸಿರಿಯಾ ಸೇನೆ ಬೃಹತ್ ಕಾರ್ಯಾಚರಣೆ ನಡೆಸಿದ ಬಳಿಕ ನಡೆಯುತ್ತಿರುವ ಈ ಭೇಟಿ ಮಹತ್ವ ಪಡೆದಿದೆ. ಸಿರಿಯಾದ ರಕ್ಷಣಾ ಸಚಿವ ಮತ್ತು ರಕ್ಷಣಾ ಸಿಬಂದಿ ಮುಖ್ಯಸ್ಥ ಅಲಿ ಅಯೂಬ್ ಜೋರ್ಡಾನ್ನ ಸೇನಾ ಮುಖ್ಯಸ್ಥ ಲೆ.ಜ. ಯೂಸುಫ್ ಹುನೈತಿಯನ್ನು ಭೇಟಿ ಮಾಡಿ ಡೆರಾದಲ್ಲಿನ ಪರಿಸ್ಥಿತಿ, ಉಭಯ ದೇಶಗಳ ಗಡಿಪ್ರದೇಶದಲ್ಲಿ ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ವಿಸ್ತತ ಮಾತುಕತೆ ನಡೆಸಿದರು. 

ಉಭಯ ದೇಶಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಜೋರ್ಡಾನ್ ಸೇನೆಯ ಹೇಳಿಕೆ ತಿಳಿಸಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟ ಮತ್ತು ಗಡಿಭಾಗದಲ್ಲಿನ ನಿಯಂತ್ರಣ ವಿಷಯವನ್ನು ಕೇಂದ್ರೀಕರಿಸಿ ಮಾತುಕತೆ ನಡೆದಿದೆ. ಜೋರ್ಡಾನ್ ಸೇನೆಯ ಆಮಂತ್ರಣದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದ್ದು ಸೇನೆಯ ಉನ್ನತ ಅಧಿಕಾರಿಗಳು ರಕ್ಷಣಾ ಸಚಿವರ ಜತೆಗಿದ್ದರು ಎಂದು ಸಿರಿಯಾದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News