'ಲವ್ ಮತ್ತು ನಾರ್ಕೋಟಿಕ್ಸ್ ಜಿಹಾದ್'ನ ಹಿಂದೆ ಮುಂದೆ

Update: 2021-09-20 19:30 GMT

ಬಿಷಪ್ ಜೋಸೆಫ್‌ರ ಈ ನಡೆ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಕೊರೋನ, ನಿಫಾ ಬಿಕ್ಕಟ್ಟುಗಳ ನಡುವೆ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಬಿಷಪ್ ಭಾರೀ ವಿರೋಧವನ್ನೂ ಎದುರಿಸಬೇಕಾಗಿ ಬಂದಿದೆ. ಇದರ ಮಧ್ಯೆಯೇ ಬಿಷಪ್‌ರ ಈ ನಡೆಯನ್ನು ಕೇರಳ ಕೆಥೊಲಿಕ್ ಬಿಷಪ್ ಕೌನ್ಸಿಲ್ ಕೂಡ ಬೆಂಬಲಿಸಿದೆ. ರಾಜ್ಯದ ಬಿಜೆಪಿ ಕೂಡ ಬಿಷಪ್‌ರ ಬೆಂಬಲಕ್ಕೆ ನಿಂತಿದೆ. ಕೇರಳದ ಮೇಲ್ಜಾತಿ ಬಲಾಢ್ಯ ನಾಯರ್ ಸಮುದಾಯದ ಸಂಘಟನೆ ನಾಯರ್ ಸರ್ವೀಸ್ ಸೊಸೈಟಿ ಬಿಷಪ್‌ರ ನಿಲುವನ್ನು ಸಮರ್ಥಿಸಿ ಹೇಳಿಕೆ ನೀಡಿದೆ. ಆದರೆ ಕೆಥೊಲಿಕ್ ಸಮುದಾಯವೂ ಸೇರಿದಂತೆ ಕೇರಳದ ಬಹುಸಂಖ್ಯಾತರು ಬಿಷಪ್‌ರ ನಡೆಗಳನ್ನು ಬೆಂಬಲಿಸಿಲ್ಲ. ಅಷ್ಟೇ ಅಲ್ಲದೆ ಇವರ ಹಲವಾರು ಚರ್ಚ್‌ಗಳು ಕೂಡ ಬಿಷಪ್‌ರ ನಡೆಯನ್ನು ಸಮರ್ಥಿಸಿಲ್ಲ.


ಭಾರತದಲ್ಲಿ 'ಲವ್ ಜಿಹಾದ್' ಪದದ ಆವಿಷ್ಕಾರ ಮಾಡಿದ್ದು ಸಂಘಪರಿವಾರ. ನಂತರ ನ್ಯಾಯಾಲಯದಲ್ಲಿ ಅಂತಹ ಪದವಾಗಲೀ, ಅಂತಹ ಪರಿಕಲ್ಪನೆಯಾಗಲೀ ತಮ್ಮ ಸರಕಾರಕ್ಕೆ ಇಲ್ಲವೆಂದು ಪ್ರಮಾಣಪತ್ರ ಸಲ್ಲಿಸಿದ್ದು ಕೂಡ ಸಂಘ ಪರಿವಾರದ ಬಿಜೆಪಿ ಪಕ್ಷದ ಸರಕಾರವೇ ಆಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಕೋಮುಧ್ರುವೀಕರಣ ಮಾಡಿ ಗರಿಷ್ಠ ರಾಜಕೀಯ ಲಾಭ ಪಡೆಯುವ ಎಲ್ಲಾ ಹುನ್ನಾರಗಳನ್ನು ಸಂಘಪರಿವಾರ ಮತ್ತದರ ನಾಯಕರು ಮಾಡುತ್ತಾ ಬರುತ್ತಿರುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದರ ಮಧ್ಯೆಯೇ 'ಲವ್ ಜಿಹಾದ್' ಎಂದು ಆರೋಪಿಸಿದ ಕೇರಳದ ಹನ್ನೊಂದು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಆಯೋಗ ಕೂಡ ತನಿಖೆ ಮಾಡಿ ಲವ್ ಜಿಹಾದ್ ನಡೆಯುತ್ತಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿ ಆಗಿದೆ.

ಇದೀಗ ಸೆಪ್ಟಂಬರ್ 6ರಂದು ಮಧ್ಯಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲದ ಸೈರೋ ಮಲಬಾರ್ ಕೆಥೊಲಿಕ್ ಕ್ರಿಶ್ಚಿಯನ್ ಸಮುದಾಯದ ಬಿಷಪ್ ಆಗಿರುವ ಮಾರ್ ಜೋಸೆಫ್ ಕಲ್ಲರಂಗಟ್ಟ್ 'ಲವ್ ಜಿಹಾದ್' ಜೊತೆಗೆ 'ನಾರ್ಕೋಟಿಕ್ಸ್ ಜಿಹಾದ್' ಎಂಬ ಪದವನ್ನು ಸೇರಿಸಿ ಮುಸ್ಲಿಂ ಅಲ್ಪಸಂಖ್ಯಾತರನ್ನು ನೇರವಾಗಿ ಗುರಿ ಮಾಡಿದ್ದಾರೆ. ಅದೇ ಜಿಲ್ಲೆಯ ಕುರುವಿಲಾಂಗಾಡಿಯ ಮಾರ್ಥ ಮರಿಯಂ ಚರ್ಚ್‌ನಲ್ಲಿ ತಮ್ಮ ಧಾರ್ಮಿಕ ಪ್ರವಚನದ ಸಂದರ್ಭದಲ್ಲಿ ತಮ್ಮ ಸಮುದಾಯದ ಮಹಿಳೆಯರನ್ನು ಪ್ರೇಮ ಹಾಗೂ ಮಾದಕ ಮದ್ದುಗಳ ಆಮಿಷವೊಡ್ಡಿ ಮತಾಂತರ ಮಾಡುವ ಸಂಚುಗಳು ನಡೆಯುತ್ತಾ ಬಂದಿವೆ. ಮುಸ್ಲಿಂ ಭಯೋತ್ಪಾದನೆಯ ಭಾಗವಾಗಿ ಇದನ್ನು ಕೇರಳದಲ್ಲಿ ನಡೆಸಲಾಗುತ್ತಿದೆ. ಕೇರಳದಲ್ಲಿ ಶಸ್ತ್ರಗಳ ಮೂಲಕ ಇವುಗಳನ್ನು ನಡೆಸಲು ಸಾಧ್ಯವಿಲ್ಲವಾದುದರಿಂದ ಲವ್ ಜಿಹಾದ್ ಹಾಗೂ ನಾರ್ಕೋಟಿಕ್, ಜಿಹಾದ್ ಮೂಲಕ ನಡೆಸಲಾಗುತ್ತಿದೆ. ಈ ಬಗ್ಗೆ ತಂದೆ ತಾಯಿಗಳು ಹಾಗೂ ಪೋಷಕರು ಜಾಗೃತರಾಗಬೇಕು ಎಂದೆಲ್ಲಾ ಕರೆಯನ್ನೂ ಕೊಟ್ಟರು. ಅವರು ಮೊದಲೇ ಬರೆದು ತಯಾರಿಸಿಕೊಂಡು ಬಂದಿದ್ದ ಪ್ರವಚನವನ್ನು ಸುಮಾರು ಮುಕ್ಕಾಲು ಗಂಟೆಗಳ ಸಮಯ ತೆಗೆದುಕೊಂಡು ಈ ಸಭೆಯಲ್ಲಿ ಮಂಡಿಸಿದರು. ಅವರ ಮಾತುಗಳನ್ನು ಪುಷ್ಟೀಕರಿಸುವ ಯಾವುದೇ ಆಧಾರಗಳನ್ನು ತಮ್ಮ ಪ್ರವಚನದಲ್ಲಿ ಎಲ್ಲಿಯೂ ಅವರು ಮುಂದಿಡಲಿಲ್ಲ. ಬಿಷಪ್‌ರ ಈ ಧಾರ್ಮಿಕ ಧ್ವೇಷದ ಮಾತುಗಳನ್ನು ವಿರೋಧಿಸಿದ ಕೆಲವು ಕ್ರೈಸ್ತ ಸನ್ಯಾಸಿನಿಯರು ಕೂಡಲೇ ಆ ಸಭೆಯಿಂದ ಎದ್ದು ಹೊರನಡೆದರಲ್ಲದೇ ತಮ್ಮ ಹೇಳಿಕೆಗಳನ್ನೂ ನೀಡಿದರು. ಬಿಷಪ್ ಜೋಸೆಫ್‌ರ ಈ ನಡೆ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಕೊರೋನ, ನಿಫಾ ಬಿಕ್ಕಟ್ಟುಗಳ ನಡುವೆ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಬಿಷಪ್ ಭಾರೀ ವಿರೋಧವನ್ನೂ ಎದುರಿಸಬೇಕಾಗಿ ಬಂದಿದೆ. ಇದರ ಮಧ್ಯೆಯೇ ಬಿಷಪ್‌ರ ಈ ನಡೆಯನ್ನು ಕೇರಳ ಕೆಥೊಲಿಕ್ ಬಿಷಪ್ ಕೌನ್ಸಿಲ್ ಕೂಡ ಬೆಂಬಲಿಸಿದೆ. ರಾಜ್ಯದ ಬಿಜೆಪಿ ಕೂಡ ಬಿಷಪ್‌ರ ಬೆಂಬಲಕ್ಕೆ ನಿಂತಿದೆ. ಕೇರಳದ ಮೇಲ್ಜಾತಿ ಬಲಾಢ್ಯ ನಾಯರ್ ಸಮುದಾಯದ ಸಂಘಟನೆ ನಾಯರ್ ಸರ್ವೀಸ್ ಸೊಸೈಟಿ ಬಿಷಪ್‌ರ ನಿಲುವನ್ನು ಸಮರ್ಥಿಸಿ ಹೇಳಿಕೆ ನೀಡಿದೆ. ಆದರೆ ಕೆಥೊಲಿಕ್ ಸಮುದಾಯವೂ ಸೇರಿದಂತೆ ಕೇರಳದ ಬಹುಸಂಖ್ಯಾತರು ಬಿಷಪ್‌ರ ನಡೆಯನ್ನು ಬೆಂಬಲಿಸಿಲ್ಲ. ಅಷ್ಟೇ ಅಲ್ಲದೆ ಇವರ ಹಲವಾರು ಚರ್ಚ್‌ಗಳು ಕೂಡ ಬಿಷಪ್‌ರ ನಡೆಯನ್ನು ಸಮರ್ಥಿಸಿಲ್ಲ.

ಬಿಜೆಪಿ ಮತ್ತು ಕೇರಳ ಕಾಂಗ್ರೆಸ್‌ನ ಕೆಲವು ನಾಯಕರು, ಕೇರಳ ಜನ ಪಕ್ಷಂನ ಪಿ.ಸಿ. ಜಾರ್ಜ್ ಹೊರತುಪಡಿಸಿ ಇತರ ಯಾವುದೇ ರಾಜಕೀಯ ಪಕ್ಷಗಳು ಬಿಷಪ್‌ರ ನಡೆಯನ್ನು ಒಪ್ಪಿಲ್ಲ. ಮಾಣಿ ಮರಣದ ನಂತರ ಕೇರಳ ಕಾಂಗ್ರೆಸ್ ಈಗ ಒಡೆದ ಬಣಗಳಾಗಿದೆ. ಕೆಲವು ರಾಜಕೀಯ ಪಕ್ಷಗಳು ಬಿಷಪ್ ಆಡಿದ ಮಾತುಗಳಿಗೆ ಯಾವುದೇ ವಾಸ್ತವತೆ ಇಲ್ಲ, ಅಲ್ಲದೆ ಧಾರ್ಮಿಕ ನೇತಾರರು ಮಾತನಾಡುವಾಗ ಬಹಳ ಜಾಗರೂಕತೆ ವಹಿಸಬೇಕು, ಸಮುದಾಯಗಳನ್ನು ಪರಸ್ಪರ ಎದುರು ಬದುರಾಗಿ ನಿಲ್ಲಿಸಿ ಸಾಮಾಜಿಕ ಅಶಾಂತಿಗೆ ಕಾರಣ ಕರ್ತರಾಗಬಾರದು ಎಂದು ವಿರೋಧಿಸಿವೆ. ಪಿಣರಾಯಿ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರಕಾರ ಜಾಣ ನಡೆಗಳನ್ನು ನಡೆಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ''ಬಿಷಪ್ ಯಾವುದೇ ಸಮುದಾಯವನ್ನು ಗುರಿಮಾಡಿ ತಮ್ಮ ಮಾತುಗಳನ್ನು ಆಡಿಲ್ಲ. ಸಾಮಾನ್ಯ ಅರ್ಥದಲ್ಲಿ ತಂದೆತಾಯಿಯರಿಗೆ ಹಾಗೂ ಪೋಷಕರಿಗೆ ಜಾಗೃತಿಗಾಗಿ ಹೇಳಿದ್ದಾರೆ, ಧಾರ್ಮಿಕ ಮುಖಂಡರು ಎಚ್ಚರಿಕೆಯಿಂದ ಮಾತುಗಳನ್ನು ಆಡಬೇಕಾದ ಅಗತ್ಯವಿದೆ, ಇದುವರೆಗೂ ನಾರ್ಕೋಟಿಕ್ಸ್ ಜಿಹಾದ್ ಎಂಬ ಶಬ್ದ ಕೇಳಿಲ್ಲ ನಾರ್ಕೋಟಿಕ್ಸ್ ಮಾಫಿಯಾ ಶಬ್ದ ಕೇಳಿದ್ದೆ, ನಾರ್ಕೋಟಿಕ್ಸ್ ಜೊತೆಗೆ ಧರ್ಮವನ್ನು ಸೇರಿಸಿ ನೋಡಬಾರದು'' ಎಂದೆಲ್ಲಾ ಹೇಳಿ ತಮ್ಮ ಓಟು ಬ್ಯಾಂಕ್‌ಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಬಿಷಪ್‌ರ ವಿರುದ್ಧ ರಾಜ್ಯದಾದ್ಯಂತ ಹಲವಾರು ಪ್ರತಿಭಟನೆಗಳು ನಡೆದಿವೆ. ಬಿಷಪ್‌ರನ್ನು ಸಮರ್ಥಿಸುವ ಪ್ರದರ್ಶನವೂ ನಡೆದಿದೆ. ಬಿಷಪ್ ವಿರುದ್ಧ ಧಾರ್ಮಿಕ ದ್ವೇಷದ ಪ್ರಕರಣ ಕೂಡ ದಾಖಲಿಸಲಾಗಿದೆ. ಆದರೆ ಆ ದೂರಿನ ಬಗ್ಗೆ ಯಾವುದೇ ತನಿಖೆಯನ್ನು ಇದುವರೆಗೆ ಸರಕಾರ ಆದೇಶಿಸಿಲ್ಲ.

ಕ್ಲಬ್ ಹೌಸ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಬಿಷಪ್‌ರ ನಿಲುವುಗಳನ್ನು ವಿರೋಧಿಸಿ ಚರ್ಚೆಗಳು ನಡೆಯುತ್ತಿವೆ. ಆ ಚರ್ಚೆಗಳು ಹತ್ತಾರು ಗಂಟೆಗಳವರೆಗೂ ವಿಸ್ತರಿಸುತ್ತಾ ಮುಂದುವರಿಯುತ್ತಿವೆ. ಈ ಮಧ್ಯೆ ಬಿಷಪ್ ಮಾರ್ ಜೋಸೆಫ್ ಕಲ್ಲರಂಗಟ್ಟ್‌ರ ಹೇಳಿಕೆ ಯಾವುದೇ ಸಮುದಾಯವನ್ನು ಉದ್ದೇಶಿಸಿ ಅಲ್ಲ ಕೇವಲ ದುರುದ್ದೇಶ ಇಟ್ಟುಕೊಂಡು ದುಷ್ಕೃತ್ಯಗಳನ್ನು ನಡೆಸುವವರ ಬಗ್ಗೆ ತಂದೆತಾಯಿಯರು ಹಾಗೂ ಪೋಷಕರು ಜಾಗ್ರತೆ ವಹಿಸಬೇಕೆಂದು ತಿಳಿಸುವ ಕಾರ್ಯ ಮಾತ್ರ ಅವರ ಉದ್ದೇಶವಾಗಿತ್ತು ಎಂದು ಪಾಲಾ ಡಯೋಸಿಸ್ ಚರ್ಚ್ ವಿವರಣೆ ನೀಡಿದೆ. ಆದರೆ ಈ ವಿವರಣೆಗೂ ಸೈರೋ ಮಲಬಾರ್ ಕೆಥೊಲಿಕ್ ಬಿಷಪ್ ಮತ್ತಿತರ ಧಾರ್ಮಿಕ ಮುಖ್ಯಸ್ಥರು ಮಾಡುತ್ತಿರುವ ನಡೆಗಳಿಗೂ ತಾಳೆಯಾಗುತ್ತಿಲ್ಲ. ಪಾಲಾ ಬಿಷಪ್ ತಮ್ಮ ಮಾತುಗಳನ್ನು ಆಕಸ್ಮಿಕವಾಗಿಯೋ ಕಾಕತಾಳೀಯವಾಗಿಯೋ ಆಡಿದ್ದಲ್ಲ ಎಂಬುದು ವಾಸ್ತವಗಳನ್ನು ಅವಲೋಕಿಸಿದಾಗ ಅರ್ಥವಾಗುವ ವಿಚಾರ. ಇದಕ್ಕೂ ಕೆಲವು ವಾರಗಳ ಮೊದಲು ಈ ಬಿಷಪ್ ತಮ್ಮ ಸಮುದಾಯದ ಜನರಿಗೆ ತಾವು ಪ್ರತಿಪಾದಿಸುತ್ತಿರುವ ಲವ್ ಮತ್ತು ನಾರ್ಕೋಟಿಕ್ಸ್ ಜಿಹಾದ್ ಗಳನ್ನು ಕುರಿತಾದ ಸುತ್ತೋಲೆಯೊಂದನ್ನು ಕೂಡ ಹೊರಡಿಸಿದ್ದರು. ತಮ್ಮ ಮೇಲ್ಜಾತಿ ಹಿರಿಮೆಗೆ ಪ್ರೇಮ, ಮದುವೆ ಇತ್ಯಾದಿಗಳ ಮೂಲಕ ಧಕ್ಕೆಯಾಗುತ್ತಿದೆ ಎಂಬ ಧಾರ್ಮಿಕ ಹಾಗೆಯೇ ಜಾತಿ ಶ್ರೇಷ್ಠತೆಯ ವ್ಯಸನ ಕೂಡ ಇದರ ಹಿಂದೆ ಇದೆ. ಈ ಸಮುದಾಯದ ಧಾರ್ಮಿಕ ಮುಖಂಡರಲ್ಲಿ ಕೆಲವರು ಹಿಂದೆಯೂ ಈ ರೀತಿಯ ಹೇಳಿಕೆಗಳನ್ನು ನೀಡಿ ನಂತರ ಹಿಂದೆ ಸರಿದ ಉದಾಹರಣೆಗಳು ಕೂಡ ಇವೆ. ಅಲ್ಲದೆ ಸಂಘಪರಿವಾರದ ಜೊತೆಗೆ ಈ ಧಾರ್ಮಿಕ ಮುಖ್ಯಸ್ಥರ ಒಡನಾಟವಿರುವುದು ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಇತ್ಯಾದಿಗಳು ಬಹಿರಂಗ ಸತ್ಯವಾಗಿದೆ. ಈ ಹಿಂದೆ ಕೂಡ ಈ ಧಾರ್ಮಿಕ ಮುಖಂಡರ ಲವ್ ಜಿಹಾದ್ ಆರೋಪಗಳೊಂದಿಗೆ ಪ್ರಧಾನ ಮಂತ್ರಿ ಮೋದಿಯ ಬಳಿಗೆ ನಿಯೋಗ ಹೋಗಿತ್ತು.

ಸಾಪೇಕ್ಷವಾಗಿ ಹೆಚ್ಚಿನ ರಾಜಕೀಯ ಗ್ರಹಿಕೆ, ಹೆಚ್ಚಿನ ಶಿಕ್ಷಣ ಮಟ್ಟ, ಉದ್ಯೋಗ, ವಿದೇಶವಾಸ ಇತ್ಯಾದಿಗಳಿಂದಾಗಿ ಯುವ ಸಮೂಹ ಈ ಧಾರ್ಮಿಕ ಮುಖಂಡರು ಪ್ರತಿಪಾದಿಸುತ್ತಿರುವ ಊಳಿಗಮಾನ್ಯ ಜಾತಿವಾದಿ ಧಾರ್ಮಿಕ ಕಟ್ಟುಪಾಡುಗಳಡಿ ನಿಲ್ಲದೆ ತಮ್ಮದೇ ರೀತಿಯ ಜೀವನ ಹಾಗೂ ನಂಬಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಕೇರಳದ ಎಲ್ಲಾ ಸಮುದಾಯಗಳಲ್ಲೂ ದೇಶದ ಉಳಿದ ಭಾಗಕ್ಕಿಂತ ಹೆಚ್ಚಿದೆ. ಹಾಗಾಗಿ ತಮ್ಮದೇ ಆಯ್ಕೆಯ ಮದುವೆ, ಮಕ್ಕಳ ಸಂಖ್ಯೆಗಳನ್ನು ನಿರ್ಧರಿಸುತ್ತಾರೆ. ಹೆಚ್ಚಿನವರು ಸಣ್ಣ ಕುಟುಂಬವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೇವಲ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವ ವಿಚಾರವಲ್ಲ. ಮುಸ್ಲಿಂ ಸಮುದಾಯ, ಹಿಂದೂ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುತ್ತಿರುವ ವಿಚಾರವಾಗಿದೆ. ಅಲ್ಲದೆ ದೇಶದ ಇತರೆಡೆಗೆ ಹೋಲಿಸಿದಾಗ ಕೇರಳದಲ್ಲಿ ಅಂತರ್ಜಾತಿ ಮತ್ತು ಅಂತರ್‌ಧರ್ಮ ವಿವಾಹಗಳು ಹೆಚ್ಚಾಗಿವೆ. ಇದು ಕೇವಲ ಕ್ರಿಶ್ಚಿಯನ್ ಸಮುದಾಯಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ.

2020ರ ಕೇರಳ ಸರಕಾರದ ಅಂಕಿ-ಅಂಶದ ಪ್ರಕಾರ ಧಾರ್ಮಿಕ ವಲಸೆ ಹೆಚ್ಚಾಗಿ ಅಂದರೆ ಒಟ್ಟು ಧಾರ್ಮಿಕ ವಲಸೆಯ ಶೇಕಡಾ 47ರಷ್ಟು ಆಗುತ್ತಿರುವುದು ಹಿಂದೂ ಧರ್ಮಕ್ಕೆ ಆಗಿದೆ. ಬದಲಿಗೆ ಮುಸ್ಲಿಂ ಧರ್ಮಕ್ಕೆ ಅಲ್ಲ. ಕ್ರಿಶ್ಚಿಯನ್ ಸಮುದಾಯದಿಂದ ಹಿಂದೂ ಧರ್ಮಕ್ಕೆ ಬಂದವರಲ್ಲಿ ಶೇಕಡಾ 72ರಷ್ಟು ದಲಿತ ಕ್ರಿಶ್ಚಿಯನ್ನರೇ ಆಗಿದ್ದಾರೆ. ಸರಕಾರಿ ಸವಲತ್ತು ಇನ್ನಿತರ ಕಾರಣಗಳಿಗಾಗಿ ಇದು ನಡೆಯುತ್ತಿದೆ. ತಮ್ಮ ಧರ್ಮಕ್ಕೆ ವಲಸೆ ಬಂದ ದಲಿತ ಸಮುದಾಯವನ್ನು ಈ ಧಾರ್ಮಿಕ ಮುಖಂಡರು ತಮ್ಮ ಮೇಲ್ಜಾತಿ, ಮೇಲ್ವರ್ಗದ ದೃಷ್ಟಿಕೋನಗಳಿಂದಲೇ ನೋಡುತ್ತಿರುವುದರ ಪ್ರತಿಫಲವದು. ಆ ಬಗ್ಗೆ ಈ ಬಿಷಪ್ ಇತ್ಯಾದಿ ಧಾರ್ಮಿಕ ಮುಖಂಡರ ಕಳವಳ ಎಲ್ಲೂ ಕಾಣುತ್ತಿಲ್ಲ. 2020ರ ಒಂದು ವರ್ಷದ ಅವಧಿಯಲ್ಲಿ ನಡೆದ ಒಟ್ಟು 506ರಷ್ಟು ಧಾರ್ಮಿಕ ವಲಸೆಗಳಲ್ಲಿ ಕ್ರಿಶ್ಚಿಯನ್ ಸಮುದಾಯದಿಂದ ಹಾಗೂ ಮುಸ್ಲಿಂ ಸಮುದಾಯಗಳಿಂದ ಹಿಂದೂ ಧರ್ಮಕ್ಕೆ ವಲಸೆ ಬಂದವರು 241 ಜನರಾಗಿದ್ದಾರೆ. ಹಿಂದೂ ಸಮುದಾಯದಿಂದ ಕ್ರಿಶ್ಚಿಯನ್ ಆಗಿ 111 ಜನ ವಲಸೆ ಬಂದಿದ್ದರೆ ಕ್ರಿಶ್ಚಿಯನ್ ಸಮುದಾಯದಿಂದ ಹಿಂದೂ ಆಗಿ 209 ಜನರು ವಲಸೆ ಬಂದಿದ್ದಾರೆ. ಮುಸ್ಲಿಂ ಧರ್ಮಕ್ಕೂ 111 ಜನರು ವಲಸೆ ಬಂದಿದ್ದಾರೆ. ಆದರೆ ಕ್ರಿಶ್ಚಿಯನ್ ಧರ್ಮದಿಂದ ಕೇವಲ 33ಜನರು ಮಾತ್ರ ಮುಸ್ಲಿಂ ಧರ್ಮಕ್ಕೆ ವಲಸೆ ಬಂದಿದ್ದಾರೆ. ಇಸ್ಲಾಮಿನಿಂದ ಹಿಂದೂ ಆಗಿ 32 ಜನರು ವಲಸೆ ಬಂದಿದ್ದರೆ, ಇಸ್ಲಾಮಿನಿಂದ ಕ್ರಿಶ್ಚಿಯನ್ ಆಗಿ 8 ಜನರು ವಲಸೆ ಬಂದಿದ್ದಾರೆ.

ಕೇರಳದ ಮೂರನೇ ಅತ್ಯಂತ ದೊಡ್ಡ ಸಮುದಾಯವಾದ ಕ್ರಿಶ್ಚಿಯನ್ ಸಮುದಾಯದಲ್ಲಿ ಅತ್ಯಂತ ಹೆಚ್ಚಿರುವ ಜನಸಂಖ್ಯೆ ಅಂದರೆ ಸುಮಾರು ಶೇ. 40.2ರಷ್ಟು ಸೈರೋ ಮಲಬಾರ್ ಕೆಥೊಲಿಕ್ ಆಗಿದೆ. ಉಳಿದಂತೆ ಲ್ಯಾಟಿನ್ ಕೆಥೊಲಿಕ್ ಶೇ. 13.2, ಮಲಂಕರ ಆರ್ಥೋಡೆಕ್ಸ್ ಶೇ. 8.0, ಸಿರಿಯನ್ ಜಾಕೋಬಿಟ್ ಶೇ. 7.9, ಸೈರೋ ಮಲಂಕರ ಶೇ. 7.6, ಸಿರಿಯನ್ ಮಾರ್ಥೋಮಾ ಶೇ. 6.6, ಸಿಎಸ್‌ಐ ಶೇ. 4.5, ಪೆಂಟೆಕೋಸ್ಟ್ ಶೇ. 4.3, ದಲಿತ ಕ್ರಿಶ್ಚಿಯನ್ ಶೇ. 2.6, ಸಿರಿಯನ್ ಚಾಲಡೀನ್ ಶೇ. 0.43ರಷ್ಟಿದ್ದಾರೆ. ಈ ಎಲ್ಲಾ ಕ್ರಿಶ್ಚಿಯನ್ ಪಂಗಡಗಳು ಸೇರಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 18.38ರಷ್ಟು ಇದ್ದಾರೆ. ಈ ಅಂಕಿ-ಅಂಶಗಳು ಧಾರ್ಮಿಕ ವಲಸೆಗಳು ಆಯಾ ಸಮುದಾಯಗಳ ಜನಸಂಖ್ಯಾ ಏರಿಕೆಯನ್ನು ನಿರ್ಧರಿಸುತ್ತಿಲ್ಲ ಎಂಬ ವಾಸ್ತವ ಅಂಶವನ್ನು ತೆರೆದಿಡು ತ್ತದೆ. ಅಲ್ಲದೆ ಧಾರ್ಮಿಕ ವಲಸೆಗಳಿಗೆ ಜಿಹಾದ್ ಆಗಲಿ, ನಾರ್ಕೋಟಿಕ್ಸ್ ಆಮಿಷಗಳಾಗಲಿ ಕಾರಣವಾಗುತ್ತಿಲ್ಲ ಎಂಬುದೂ ಕೂಡ ಸ್ಪಷ್ಟ. ವಾಸ್ತವ ಸಂಗತಿಗಳು ಹೀಗಿರುವಾಗ ಈ ಕೆಥೊಲಿಕ್ ಧಾರ್ಮಿಕ ಮುಖಂಡರ ಇಂತಹ ವರಸೆಗಳು ಸಂಘ ಪರಿವಾರದ ಕೋಮು ಧ್ರುವೀಕರಣದ ಪ್ರಯತ್ನದ ಭಾಗವಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದಕ್ಕೆ ಇಂಬು ಕೊಡುವಂತಹ ಹಲವಾರು ಕಾರ್ಯಗಳನ್ನು ಈ ಧಾರ್ಮಿಕ ಮುಖಂಡತ್ವ ಮಾಡುತ್ತಾ ಬರುತ್ತಿದೆ ಕೂಡ.

ಇದರಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಹಿಡಿತ ಹೆಚ್ಚು ಇರುವುದು ಕೆಥೊಲಿಕ್ ಕ್ರಿಶ್ಚಿಯನ್ನರಾಗಿದ್ದಾರೆ. ಇದರಲ್ಲಿ ಸೈರೋ ಮಲಬಾರ್ ಕೆಥೊಲಿಕ್, ಲ್ಯಾಟಿನ್ ಕೆಥೊಲಿಕ್, ಮಲಂಕರ ಆರ್ಥೋಡೆಕ್ಸ್ ಸೇರಿದ್ದಾರೆ. ಇವರೆಲ್ಲ ಸೇರಿದರೆ ಕೇರಳದ ಒಟ್ಟು ಕ್ರಿಶ್ಚಿಯನ್ ಸಮುದಾಯದ ಶೇಕಡಾ ಅರವತ್ತೊಂದಕ್ಕೂ ಹೆಚ್ಚು ಆಗುತ್ತಾರೆ. ಕೇರಳದ ಕೆಥೊಲಿಕ್ ಕ್ರಿಶ್ಚಿಯನ್ನರಲ್ಲಿ ಹಲವರು ಹಿಂದಿನ ಮೇಲ್ಜಾತಿಗಳಾದ ನಂಬೂದಿರಿ ಹಾಗೂ ನಾಯರ್ ಮೂಲದವರಾಗಿದ್ದಾರೆ. ತಮಗೆ ಅನುಕೂಲವಾದ ಹಲವು ಕಾರಣಗಳಿಗಾಗಿ ಮತಾಂತರವಾದವರು ಇವರಲ್ಲಿ ಹೆಚ್ಚಿನವರು. ಆರ್ಥಿಕವಾಗಿಯೂ ಸಾಕಷ್ಟು ಅನುಕೂಲಸ್ಥರಾಗಿದ್ದು ಸರಕಾರಿ ಅಧಿಕಾರಿ ವಲಯದಲ್ಲೂ ಇವರು ಹೆಚ್ಚಿದ್ದಾರೆ. ರಾಜ್ಯದ ಹಲವಾರು ಶೈಕ್ಷಣಿಕ ಸಂಸ್ಥೆಗಳು ಇವರ ಹಿಡಿತದಲ್ಲಿವೆ. ಹಾಗಾಗಿ ಮೇಲ್ಜಾತಿ, ಮೇಲ್ವರ್ಗದ ದುಷ್ಟ ವ್ಯಸನಗಳೆಲ್ಲಾ ಈ ಧಾರ್ಮಿಕ ಮುಖ್ಯಸ್ಥರಲ್ಲಿ ಬಳುವಳಿಯಾಗಿಯೇ ಮುಂದುವರಿಯುತ್ತಿದೆ. ಮಧ್ಯಕೇರಳದಲ್ಲಿ ಇವರ ಹಿಡಿತ ಹೆಚ್ಚಿದೆ. ಕೇರಳದ ಜಾತಿ ಸಂಘಟನೆಗಳಾದ ನಾಯರ್ ಸರ್ವೀಸ್ ಸೊಸೈಟಿ, ಈಡಿಗರ ಜಾತಿ ಸಂಘಟನೆಯಾದ ಎಸ್‌ಎನ್‌ಡಿಪಿ (ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಮ್) ಯಂತೆ ಈ ಚರ್ಚ್‌ಗಳು ರಾಜ್ಯದ ರಾಜಕೀಯ ಅಧಿಕಾರದ ಮೇಲೂ ತಮ್ಮ ಹಿಡಿತ ಹೊಂದಿವೆ. ಇದುವರೆಗೂ ಕೆ. ಎಮ್. ಮಾಣಿಯ ನೇತೃತ್ವದ ಕೇರಳ ಕಾಂಗ್ರೆಸ್‌ಗೆ ಈ ಕ್ರಿಶ್ಚಿಯನ್ ಸಮುದಾಯ ಆಶ್ರಯವಾಗಿತ್ತು. ಮಾಣಿ ಸಾವಿನ ನಂತರ ಸೂಕ್ತ ರಾಜಕೀಯ ನಾಯಕ ಈ ಸಮುದಾಯಕ್ಕೆ ಇಲ್ಲದೆ ರಾಜಕೀಯ ಅತಂತ್ರತೆ ಕೂಡ ಅನುಭವಿಸತೊಡಗಿದೆ. ಬಹಳ ಮುಖ್ಯವಾದ ವಿಚಾರವೆಂದರೆ ಕೆಥೊಲಿಕ್ ಚರ್ಚ್‌ಗಳು ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿವೆ. ಅದರಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ಪ್ರಧಾನವಾಗಿವೆ. ಕೆಲವರು ಬಂಧನಕ್ಕೊಳಗಾಗಿದ್ದಾರೆ. ಎರಡು ವರ್ಷಗಳ ಹಿಂದೆ ಲ್ಯಾಟಿನ್ ಕೆಥೊಲಿಕ್ ಬಿಷಪ್ ಫ್ರಾಂಕೋ ಮುಲ್ಲಕ್ಕಲ್ ಮೇಲೆ ಲೈಂಗಿಕ ಪೀಡನೆ ಮತ್ತು ಅತ್ಯಾಚಾರದ ಗಂಭೀರ ಪ್ರಕರಣ ದಾಖಲಾಗಿ ಆತನ ವಿರುದ್ಧ ಭಾರೀ ಪ್ರತಿಭಟನೆಗಳು ಕೂಡ ನಡೆದರೂ ಈ ಧಾರ್ಮಿಕ ಮುಖಂಡರು ಆ ಬಿಷಪ್‌ಗೆ ಬೆಂಬಲವಾಗಿ ನಿಂತಿದ್ದು ಬಿಟ್ಟರೆ ಸಂತ್ರಸ್ತ ಸನ್ಯಾಸಿನಿಯ ಪರವಾಗಿ ನಿಂತಿರಲಿಲ್ಲ. ಬದಲಿಗೆ ಆಕೆಗೆ ಹಾಗೂ ಆಕೆಯ ಪರವಾಗಿ ದನಿಯೆತ್ತಿದ ಇತರ ಸನ್ಯಾಸಿನಿಯರಿಗೆ ಇನ್ನಿಲ್ಲದ ಕಿರುಕುಳಗಳನ್ನು ಈಗಲೂ ಮುಂದುವರಿಸಿದ್ದಾರೆ ಎಂದು ಕೇಳಿ ಬರುವ ಆರೋಪವನ್ನು ಇಲ್ಲಿ ಗಮನಿಸಬೇಕು. ಹೀಗೆ ಸುಮಾರು 63ಕ್ಕೂ ಹೆಚ್ಚು ಕೇರಳದ ಕ್ರೈಸ್ತ ಪಾದ್ರಿಗಳು ಹಾಗೂ ಬಿಷಪರು ಕೊಲೆಗಳು, ಲೈಂಗಿಕ ದೌರ್ಜನ್ಯ, ಸ್ಫೋಟಕ ಹೊಂದುವಿಕೆ, ಮಾನವ ಕಳ್ಳಸಾಗಾಣೆೆ, ಅತ್ಯಾಚಾರ, ಆಸ್ತಿ ಲಪಟಾಯಿಸುವಿಕೆಗಳು, ಅಪಹರಣ, ಹಲ್ಲೆ, ವಂಚನೆ, ಅಕ್ರಮ ಹಣ ಸಾಗಾಟ ಇತ್ಯಾದಿ ಬಹಳ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದರೆ ದಾಖಲೆಯಾಗದೆ ಉಳಿದ ಪ್ರಕರಣಗಳು ಇದರ ಹತ್ತಾರು ಪಟ್ಟಾದರೂ ಇರಬಹುದು. ಧಾರ್ಮಿಕ ಮುಖಂಡತ್ವ ಬಹುತೇಕವಾಗಿ ಇಂತಹ ಅಪರಾಧಿ ಆರೋಪಗಳಿರುವವರ ಪರವಾಗಿಯೇ ನಿಂತಿರುವುದು ಎದ್ದು ಕಾಣುತ್ತದೆ.

ಇವೆಲ್ಲದರಿಂದಾಗಿ ಈ ಧಾರ್ಮಿಕ ಸಂಸ್ಥೆಗಳು ಮತ್ತವುಗಳ ಮುಖ್ಯಸ್ಥರು ಜನರ ಅವಗಣನೆಗೆ ಪಾತ್ರವಾಗುವುದು ಹೆಚ್ಚಿದೆ. ಅಲ್ಲದೆ ಕೊರೋನ ಮೂಲಕ ಉಂಟು ಮಾಡಿದ ಬಿಕ್ಕಟ್ಟು ಧಾರ್ಮಿಕ ಮುಖ್ಯಸ್ಥರು ಹಾಗೂ ಜನರ ನಡುವಿನ ಕಂದಕವನ್ನು ಹೆಚ್ಚು ಮಾಡಿದೆ.

ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಇಂತಹ ಆಧಾರ ರಹಿತ ಆರೋಪಗಳು ಹಾಗೂ ಸಾಮುದಾಯಿಕ ಬಿಕ್ಕಟ್ಟು ಹಾಗೂ ದ್ವೇಷ ಸೃಷ್ಟಿಸುವ, ಕೋಮು ಧ್ರುವೀಕರಣ ಮಾಡಿಕೊಳ್ಳುವ, ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಈ ಎಲ್ಲಾ ಧಾರ್ಮಿಕ ಮುಖಂಡರು ನಡೆಸುತ್ತಿದ್ದಾರೆ. ಸಂಘ ಪರಿವಾರ ಇದುವರೆಗೆ ನಡೆಸಿದ ಎಲ್ಲಾ ಪ್ರಯತ್ನಗಳು ನಿರೀಕ್ಷಿತ ಫಲ ಕೊಡದೆ ಇರುವುದರಿಂದಾಗಿ ಈಗ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಕೋಮುಧ್ರುವೀಕರಣ ಮಾಡಿ ತನ್ನ ಕೋಮು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಅವರ ಪ್ರಯತ್ನಗಳನ್ನು ಕೇರಳದ ಜನರು ಸ್ವೀಕರಿಸುತ್ತಿಲ್ಲ ಎನ್ನುವುದು ಈಗಲೂ ಕಾಣುತ್ತಿರುವ ವಾಸ್ತವವಾಗಿದೆ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News