ಕ್ಷುಲ್ಲಕ ಆರೋಪದಲ್ಲಿ ಕಸ್ಟಡಿಯಲ್ಲಿ ಕ್ರೂರವಾಗಿ ಥಳಿಸಿ ದೌರ್ಜನ್ಯಗೈದ ಪೊಲೀಸ್ ಅಧಿಕಾರಿ: ದಿಲ್ಲಿ ಮಹಿಳೆಯ ಆರೋಪ

Update: 2021-09-21 14:04 GMT
Photo: Thewire.in/Gazala Ahmad

ಹೊಸದಿಲ್ಲಿ, ಸೆ.21: ಕಳೆದ ತಿಂಗಳು ತನ್ನ ನೆರೆಕರೆಯವರು ಮತ್ತು ತನ್ನ ಬಾಡಿಗೆದಾರನ ನಡುವಿನ ಜಗಳದಲ್ಲಿ ಮಧ್ಯ ಪ್ರವೇಶಿಸಿದ್ದ ತನ್ನನ್ನು ದಯಾಳಪುರ ಪೊಲೀಸ್ ಠಾಣೆಗೆ ಎಳೆದೊಯಿದ್ದ ಠಾಣಾಧಿಕಾರಿ ಗಿರೀಶ್ ಜೈನ್ ಕಸ್ಟಡಿಯಲ್ಲಿ ತನ್ನ ಮೇಲೆ ಕ್ರೂರ ಹಲ್ಲೆ ನಡೆಸಿದ್ದಾರೆ ಎಂದು ಈಶಾನ್ಯ ದಿಲ್ಲಿಯ ನಿವಾಸಿಯಾಗಿರುವ ಅಂಗವಿಕಲ ಮಹಿಳೆಯೋರ್ವರು ಆರೋಪಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಪೊಲೀಸ್ ಅಧಿಕಾರಿಯಿಂದ ದೌರ್ಜನ್ಯಕ್ಕೊಳಗಾದ ಹಮೀದಾ ಇದ್ರಿಸ್ (37) ಈ ಬಗ್ಗೆ ಸೆ.3ರಂದು ಈಶಾನ್ಯ ದಿಲ್ಲಿಯ ಸೀಲಮ್ ಪುರದಲ್ಲಿರುವ ಪೊಲೀಸ್ ಉಪ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿ, ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ಕ್ರೌರ್ಯವನ್ನು ಮೆರೆದಿರುವ ಜೈನ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ದೂರಿನ ಪ್ರತಿಗಳನ್ನು ದಿಲ್ಲಿ ಪೊಲೀಸ್ ಆಯುಕ್ತರು, ದಿಲ್ಲಿ ಮಾನವ ಹಕ್ಕುಗಳ ಆಯೋಗ ಮತ್ತು ದಿಲ್ಲಿ ಅಲ್ಪಸಂಖ್ಯಾತರ ಆಯೋಗಕ್ಕೂ ರವಾನಿಸಿದ್ದಾರೆ. 

ಹಮೀದಾರ ಒಂದು ಕಾಲಿನಲ್ಲಿ ಜನ್ಮದಿಂದಲೇ ಚಲನವಲನವಿಲ್ಲ. ಹಮೀದಾ ಮತ್ತು ಅವರ ಪತಿ ಮುಮ್ತಾಝ್ ಇದ್ರಿಸ್ ಈಶಾನ್ಯ ದಿಲ್ಲಿಯ ಕಾರವಲ್ ನಗರದ ನೆಹರು ವಿಹಾರದಲ್ಲಿ ಒಂದಂತಸ್ತಿನ ಸ್ವಂತ ಮನೆಯನ್ನು ಹೊಂದಿದ್ದು ,ಅದರ ಒಂದು ಭಾಗವನ್ನು ಕರೀಂ ಎನ್ನುವವರಿಗೆ ಬಾಡಿಗೆ ನೀಡಿದ್ದಾರೆ. ಕರೀಂ ಪುತ್ರರಾದ ಸುಹೇಲ್ ಮತ್ತು ಸುಹೇಬ್ ಅಲ್ಲಿ ಪಾನೀಯಗಳ ಮಾರಾಟದ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಂಗಡಿಯಿಂದ ಬರುವ ಬಾಡಿಗೆ ಇದ್ರಿಸ್ ದಂಪತಿಗಳ ಏಕೈಕ ಆದಾಯ ಮೂಲವಾಗಿದೆ ಎಂದು ವರದಿ ಬೆಟ್ಟು ಮಾಡಿದೆ.

ಆ.30ರಂದು ಸಂಜೆ ಸುಹೇಬ್ ಮತ್ತು ಸ್ಥಳೀಯ ನಿವಾಸಿಗಳಾದ ಸೋನಿ, ಆರಿಫ್, ಸುಹೈಲ್ ಮತ್ತು ಶಾರುಖ್ ನಡುವೆ ಜಗಳವುಂಟಾಗಿತ್ತು. ಅದು ವಿಕೋಪಕ್ಕೆ ತಿರುಗುವುದನ್ನು ಕಂಡ ಹಮೀದಾ ಮಧ್ಯೆ ಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದರು. ಬಳಿಕ ಸುಹೇಬ್ ಅಂಗಡಿಯನ್ನು ಮುಚ್ಚಿ ತನ್ನ ಮನೆಗೆ ತೆರಳಿದ್ದ.

ಹಮೀದಾ ತನ್ನ ದೂರಿನಲ್ಲಿ ತಿಳಿಸಿರುವಂತೆ ಜಗಳವು ಇತ್ಯರ್ಥಗೊಂಡ ಸ್ವಲ್ಪ ಸಮಯದ ಬಳಿಕ ಜೈನ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳು ಆಕೆಯ ಮನೆಗೆ ನುಗ್ಗಿದ್ದರು. ಅವರು ಸೂಚಿಸಿದ್ದಂತೆ ಹಮೀದಾ ಅಂಗಡಿಯ 11 ತಿಂಗಳ ಬಾಡಿಗೆ ಕರಾರು ಪತ್ರವನ್ನು ತೋರಿಸಿದ್ದರು. ನಂತರ ಪೊಲೀಸರು ತಮ್ಮನ್ನು ಬಾಡಿಗೆದಾರನ ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ಪತಿ ಮನೆಯಲ್ಲಿ ಇಲ್ಲದಿದ್ದರಿಂದ ಅದಕ್ಕೆ ಹಮೀದಾ ನಿರಾಕರಿಸಿದ್ದರು. ತನ್ನ ಮನೆಗೆ ಬಂದವರಲ್ಲಿ ಮಹಿಳಾ ಪೊಲೀಸರು ಇರಲಿಲ್ಲ ಎಂದು ಹಮೀದಾ ದೂರಿನಲ್ಲಿ ಹೇಳಿದ್ದಾರೆ.

ವಿಚಾರಣೆಗಾಗಿ ಪೊಲೀಸರು ಹಮೀದಾರನ್ನು ಮನೆಯಿಂದ ಎಳೆದೊಯ್ದು ಜೀಪಿನಲ್ಲಿ ಪೊಲೀಸ್ ಠಾಣೆಗೆ ಸಾಗಿಸಿದ್ದರು. ಈ ಸಂದರ್ಭ ಅವರ ನೆರೆಮನೆಯಾತನ ಪುತ್ರ ಸೋನಿ ಪೊಲೀಸರೊಂದಿಗೆ ಇದ್ದ ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ರಾತ್ರಿ 10 ಗಂಟೆಯವರೆಗೆ ಕಾಯಿಸಿದ ಬಳಿಕ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹಮೀದಾರ ಕೈಗಳನ್ನು ಕಟ್ಟಿ ಸಣ್ಣ ಕೋಣೆಯೊಂದರಲ್ಲಿ ತಳ್ಳಿದ್ದಳು ಮತ್ತು ಜೈನ್ ಹಸಿರು ಪೈಪೊಂದರಿಂದ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದ. ಅವಾಚ್ಯ ಶಬ್ದಗಳಿಂದ ಬೈದು ಮತೀಯ ನಿಂದನೆಯನ್ನು ಮಾಡಿದ್ದ ಜೈನ್ ಥಳಿತವನ್ನು ಎರಡು ಗಂಟೆ ಕಾಲ ಮುಂದುವರಿಸಿದ್ದರು. ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಹಮೀದಾರಿಂದ 5,000 ರೂ.ಲಂಚವನ್ನು ಪಡೆದು ಅವರನ್ನು ಬಿಡುಗಡೆಗೊಳಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಯಾರಲ್ಲಾದರೂ ಬಾಯ್ಬಿಟ್ಟರೆ ಇಡೀ ಕುಟುಂಬವನ್ನು ನಾಶ ಮಾಡುವುದಾಗಿ ಜೈನ್ ತನಗೆ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಹಮೀದಾ ಆರೋಪಿಸಿದ್ದಾರೆ. ತಾನು ಮನೆಗೆ ಮರಳುವಷ್ಟರಲ್ಲಿ ಪೊಲೀಸರು ತನ್ನ ಮನೆ ಮತ್ತು ಕರೀಂ ಅಂಗಡಿಯಲ್ಲಿ ದಾಂಧಲೆ ನಡೆಸಿ ಬೆಲೆಯುಳ್ಳ ಸೊತ್ತುಗಳಿಗೆ ಹಾನಿಯನ್ನುಂಟು ಮಾಡಿದ್ದರು ಎಂದು ಹಮೀದಾ ಆರೋಪಿಸಿದ್ದಾಗಿ ವರದಿ ಉಲ್ಲೇಖಿಸಿದೆ.

ಬಾಡಿಗೆಗೆ ನೀಡಿದ್ದ ಅಂಗಡಿ ತಮಗೆ ಬೇಕೆಂದು ಸೋನಿ ಕುಟುಂಬವು ಒತ್ತಾಯಿಸಿತ್ತು. ತನ್ನನ್ನು ಬಂಧಿಸಿ, ಥಳಿಸಲು ಅವರು ಪೊಲೀಸರಿಗೆ 50,000 ರೂ.ಲಂಚ ನೀಡಿದ್ದರು ಎಂದು ಹಮೀದಾ ಅರೋಪಿಸಿದ್ದಾರೆ. ಹಮೀದಾರ ದೂರನ್ನು ಸಾರ್ವಜನಿಕ ಕುಂದುಕೊರತೆಗಳ ಘಟಕಕ್ಕೆ ಕಳುಹಿಸಲಾಗಿದೆ. ತನಿಖೆಯ ಬಳಿಕ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಡಿಸಿಪಿ ಎಸ್.ಕೆ.ಸಿಂಗ್ ತಿಳಿಸಿದ್ದಾರೆ.

ಹಮೀದಾರ ಪ್ರಕರಣದ ಬಗ್ಗೆ ನಿಗಾಯಿರಿಸಿರುವ ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಝಫ್ರುಲ್ ಇಸ್ಲಾಂ ಖಾನ್, ಮುಸ್ಲಿಮರ ವಿರುದ್ಧ ಪೊಲಿಸರ ಕ್ರೌರ್ಯ ಮತ್ತು ದ್ವೇಷದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News