ಸಂಕುಚಿತ ಹಿತಾಸಕ್ತಿಗಳು ನಮ್ಮ ಏಕತೆಯನ್ನು ದುರ್ಬಲಗೊಳಿಸಲು ಅವಕಾಶ ನೀಡಬಾರದು: ಪಿಣರಾಯಿ ವಿಜಯನ್

Update: 2021-09-21 15:35 GMT

ತಿರುವನಂತಪುರ,ಸೆ.21: ಯಾವುದೇ ಧರ್ಮ ಅಥವಾ ದೇಶ ವ್ಯಕ್ತಿಗಿಂತ ದೊಡ್ಡದಲ್ಲ,‌ ಹೀಗಾಗಿ ಸಂಕುಚಿತ ಹಿತಾಸಕ್ತಿಗಳು ನಮ್ಮ ಏಕತೆಯನ್ನು ದುರ್ಬಲಗೊಳಿಸಲು ಅವಕಾಶ ನೀಡಬಾರದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಹೇಳಿದ್ದಾರೆ.

ಶ್ರೀ ನಾರಾಯಣ ಗುರುಗಳ ಸಮಾಧಿ ದಿನದ ಸಂದರ್ಭದಲ್ಲಿ ಪಿಣರಾಯಿ ತನ್ನ ಫೇಸ್ಬುಕ್ ಪುಟದಲ್ಲಿ ಈ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು,ಇದು ಕ್ಯಾಥಲಿಕ್ ಬಿಷಪ್ ಓರ್ವರ ‘ಡ್ರಗ್ಸ್ ಜಿಹಾದ್’ ಹೇಳಿಕೆ ಕುರಿತು ರಾಜ್ಯದಲ್ಲಿ ಉಂಟಾಗಿರುವ ವಿವಾದಕ್ಕೆ ಅವರ ಉತ್ತರವಾಗಿದೆ ಎಂದು ಪರಿಗಣಿಸಲಾಗಿದೆ.

ಕೇರಳವನ್ನು ಆಧುನಿಕ ಸಮಾಜವನ್ನಾಗಿ ಮಾಡುವಲ್ಲಿ ಗುರುಗಳ ಕೊಡುಗೆಯನ್ನು ಶ್ಲಾಘಿಸಿರುವ ಪಿಣರಾಯಿ,‘ಜನಾಂಗ ಭೇದ ಸಿದ್ಧಾಂತ ಮತ್ತು ಜಾತಿ ವ್ಯವಸ್ಥೆಯ ಪಳೆಯುಳಿಕೆ ಗುರುಗಳು ಕನಸು ಕಂಡಿದ್ದ ಸಮಾಜದ ಸಾಕಾರದಲ್ಲಿ ತೊಡಕುಗಳಾಗಿವೆ ಮತ್ತು ಈಗಲೂ ಅವು ನಮಗೆ ಮುಜುಗರ ಉಂಟು ಮಾಡುವಷ್ಟು ಪ್ರಬಲವಾಗಿವೆ ’ಎಂದಿದ್ದಾರೆ.

‘ದೇಶದ ಒಳಿತಿಗಾಗಿ ನಾವು ಒಂದಾಗಿ ನಿಲ್ಲುತ್ತೇವೆ ಎಂದು ಈ ದಿನದಂದು ಪಣ ತೊಡೋಣ. ಈ ಏಕತೆ ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಒಯ್ಯಬಹುದು. ಗುರುಗಳ ಕನಸನ್ನು ನನಸಾಗಿಸಲು ನಾವು ಬಹು ದೂರ ಸಾಗಬೇಕಿದೆ ’ಎಂದು ಪಿಣರಾಯಿ ತನ್ನ ಫೇಸ್ಬುಕ್ ಪೇಜ್ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News