ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ದಲಿತ ಪ್ರಾತಿನಿಧ್ಯ

Update: 2021-09-21 19:30 GMT

ಚರಣ್‌ಜಿತ್ ಸಿಂಗ್ ಚನ್ನಿ ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಚನ್ನಿ ಪಂಜಾಬ್ ರಾಜ್ಯದ ಪ್ರಥಮ ದಲಿತ ಮುಖ್ಯಮಂತ್ರಿ ಎಂಬುದಾಗಿ ಕರೆಯಿಸಿಕೊಂಡಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್‌ರ ರಾಜಿನಾಮೆ ಮತ್ತು ಪಂಜಾಬ್ ರೈತರ ದೀರ್ಘ ಅವಧಿಯ ಹೋರಾಟ-ಪ್ರತಿಭಟನೆ ಹಾಗೂ ಕೇವಲ 5 ತಿಂಗಳ ಅಧಿಕಾರಾವಧಿ-ಮುಂತಾದ ಪಂಥಾಹ್ವಾನಗಳ ನಡುವೆ ಚನ್ನಿ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಚನ್ನಿ ರೈತರ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಚನ್ನಿಯನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಸ್ವತಃ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನವಜ್ಯೋತ್ ಸಿಂಗ್ ಸಿಧು ಕಾರಣಕ್ಕಾಗಿ ಚನ್ನಿ ಅವರ ನೇಮಕವನ್ನು ವಿರೋಧಿಸಿದ್ದರೆ; ಬಿಎಸ್ಪಿ-ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಮುಂದಿನ ಪಂಜಾಬ್ ಚುನಾವಣೆಯ ಹಿನ್ನೆಲೆಯಲ್ಲಿ ಚನ್ನಿಯನ್ನು ನೇಮಿಸಲಾಗಿದೆ ಎಂದು ಕಟುವಾಗಿ ಟೀಕಿಸಿವೆ.

ಮಾಧ್ಯಮಗಳು ಚನ್ನಿ ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಅವರ ಮುಖವಾಣಿ ಅಂತ ವಿಶ್ಲೇಷಣೆ ಮಾಡಿದ್ದರೂ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವವು ಚನ್ನಿ ಮತ್ತು ಸಿಧು ಇವರಿಬ್ಬರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲಾಗುತ್ತದೆ ಎಂಬ ಯೋಜನೆಯನ್ನು ತೆರೆದಿಟ್ಟಿದೆ. ಟೀಕೆಗಳು ಏನೇ ಇದ್ದರೂ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವವು ಕ್ಯಾಪ್ಟನ್ ಅಮರೀಂದರ್ ಸಿಂಗ್ ತರಹದ ಅನುಭವಿ ಮಾಸ್ ನಾಯಕನ ಎದುರು ಚರಣ್‌ಜಿತ್ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ರಿಸ್ಕ್ ಅನ್ನು ತೆಗೆದುಕೊಂಡಿದೆ. ಈ ನಿರ್ಣಯ ಪಂಜಾಬ್ ರಾಜಕಾರಣದ ತಕ್ಷಣದ ಸಂಕಷ್ಟಗಳ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ ಅಂತ ಕಂಡುಬಂದರೂ ರಾಷ್ಟ್ರೀಯ ಮಟ್ಟದಲ್ಲಿ ಬಹಳ ಚಿಂತಿತ-ಬಹಳ ಯೋಜಿತ ಕಾಂಗ್ರೆಸ್ ಪಕ್ಷದ ಪುನರುಜ್ಜೀವನದ ಸೂತ್ರ ಅಡಗಿವೆ ಎಂಬಂತೆ ಕಂಡುಬರುತ್ತಿದೆ. ಚರಣ್‌ಜಿತ್ ಸಿಂಗ್ ಮತ್ತು ನವಜ್ಯೋತ್ ಸಿಂಗ್ ಸಿಧು ‘ದೇರಾ’ ಧಾರ್ಮಿಕ ಪಂಥಕ್ಕೆ ಹತ್ತಿರವಾಗಿರುವ ಹಾಗೂ ದಲಿತ ಸಿಖ್ಖರ ನಡುವಿನ ಬಲಾಢ್ಯ ರಾಮದಾಸಿಯ ಸಿಖ್ ಸಮುದಾಯಕ್ಕೆ ಸ್ವತಃ ಚರಣ್ ಸಿಂಗ್ ಸೇರಿರುವ ಕಾರಣಕ್ಕೆ ಅವರಿಬ್ಬರಿಗೂ ಪಂಜಾಬ್‌ನ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹೇಳಲಾಗುತ್ತದೆ. ಹಾಗೆಯೇ ಸಿಖ್ ಧಾರ್ಮಿಕ ಪಂಥವಾದ ‘ದೇರಾ’ದ ತೀವ್ರ ಬೆಂಬಲಿಗರು ಪಂಜಾಬ್‌ನ ದಲಿತ ಸಿಖ್ಖರು. ಜನಸಂಖ್ಯೆಯಲ್ಲಿ ಶೇ.32ರಷ್ಟು ಇರುವ ದಲಿತ ಸಿಖ್ಖರ ಬೆಂಬಲದ ಆಧಾರದ ಮೇಲೆ ರೈತರ ಹೋರಾಟ ಮತ್ತು ಅಮರೀಂದರ್ ಸಿಂಗ್ ಅವರ ಆಡಳಿತದ ಮೇಲಿನ ಜನರ ಅತೃಪ್ತಿಯನ್ನು ಹೋಗಲಾಡಿಸಿ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವುದು ಕಾಂಗ್ರೆಸ್‌ನ ಯೋಜಿತ ತಂತ್ರ ಎಂಬಂತೆ ಕಂಡು ಬರುತ್ತಿದೆ. ಜೊತೆಗೆ ಬಿಎಸ್ಪಿ ಮತ್ತು ಶಿರೋಮಣಿ ಅಕಾಲಿದಳದ ಮೈತ್ರಿ ಹಾಗೂ ಆಮ್ ಆದ್ಮಿ ಪಾರ್ಟಿಯ ಹಾಜರಾತಿ ಕೂಡಾ ಚರಣ್‌ಜಿತ್ ಸಿಂಗ್ ಚನ್ನಿಯ ನೇಮಕಾತಿಯ ಹಿನ್ನೆಲೆಯಲ್ಲಿನ ಇತರ ‘ಫ್ಯಾಕ್ಟರ್ಸ್’ ಆಗಿರುವ ಸಾಧ್ಯತೆಗಳು ಇವೆ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರದಲ್ಲಿನ ದಲಿತ ರಾಜಕಾರಣ ಉತ್ತರ ಪ್ರದೇಶವನ್ನು ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲಿಯೂ ಅಷ್ಟೇನೂ ಬಲವರ್ಧಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಚರಣ್‌ಜಿತ್ ಸಿಂಗ್‌ರ ನೇಮಕಾತಿ ತುಂಬಾ ಮಹತ್ವವನ್ನು ಪಡೆಯುತ್ತದೆ. ಅದರಲ್ಲೂ ಪಂಜಾಬ್ ರಾಜ್ಯದ ಪ್ರಥಮ ದಲಿತ ಮುಖ್ಯಮಂತ್ರಿ ಚನ್ನಿ ನೇಮಕಾತಿಯು ರಾಷ್ಟ್ರದ ದಲಿತ ರಾಜಕಾರಣಕ್ಕೆ ಹೊಸ ದಿಕ್ಕನ್ನು ಕೊಡುವುದಂತೂ ನಿಶ್ಚಿತ. ರಾಷ್ಟ್ರ ಮಟ್ಟದಲ್ಲಿ ಆಂಧ್ರ ಪ್ರದೇಶದ ಎನ್. ಸಂಜೀವಯ್ಯನವರು ಪ್ರಥಮ ದಲಿತ ಮುಖ್ಯಮಂತ್ರಿಯಾಗಿದ್ದರೆ; ಮಾಯಾವತಿಯವರು ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿ ಆಗಿರುವ ದಾಖಲೆ ಇದ್ದರೆ; ಒಡಿಶಾದಲ್ಲಿ ಗಿರಿಧರ್ ಗಮಾಂಗ್ ಮತ್ತು ಮಹಾರಾಷ್ಟ್ರದಲ್ಲಿ ಸುಶೀಲ್ ಕುಮಾರ್ ಶಿಂಧೆ ಮುಖ್ಯಮಂತ್ರಿ ಆಗಿದ್ದ ದಾಖಲೆ ಇದೆ. ಇದೇ ಸಾಲಿಗೆ ಈಗ ಚರಣ್‌ಜಿತ್ ಸಿಂಗ್ ಚನ್ನಿ ಕೂಡಾ ಸೇರಿದ್ದಾರೆ.

ದಲಿತ ಸಮುದಾಯದ ನಾಯಕತ್ವ ಅಧಿಕಾರಕ್ಕೆ ಬಂದಾಗ - ಆಡಳಿತ ನಡೆಸುವ ಅವಕಾಶ ಸಿಕ್ಕಾಗ ‘‘ಅವರ ಮುಖವಾಣಿ- ಇವರ ಮುಖವಾಣಿ’’ ಅಂತ ಬಿಂಬಿಸುವ/ಸ್ಟಿರೀಯೋಟೈಪ್‌ಗೆ ಒಳಪಡಿಸುವ ಪ್ರಕ್ರಿಯೆ ಇದ್ದರೂ ಅಧಿಕಾರ-ಅವಕಾಶಗಳು ಇದ್ದಾಗ ದಲಿತ ನಾಯಕತ್ವಗಳು ದಕ್ಷ ಆಡಳಿತವನ್ನು ಕೊಡುವಲ್ಲಿ ಹಿಂದೆ ಬಿದ್ದಿಲ್ಲ. ಇದನ್ನು ಚನ್ನಿಯಲ್ಲೂ ಗಮನಿಸಬಹುದು. ಅಧಿಕಾರ ಸ್ವೀಕಾರ ಮಾಡಿದ ನಂತರದ ಪ್ರಥಮ ಪತ್ರಿಕಾ ಗೋಷ್ಠಿಯಲ್ಲಿ ಚನ್ನಿ ತೋರ್ಪಡಿಸಿದ ವಿಶ್ವಾಸ ಇದನ್ನು ವ್ಯಕ್ತಪಡಿಸಿದೆ. ಪಂಜಾಬ್ ರೈತರ ದೊಡ್ಡ ಸಮಸ್ಯೆಯಾದ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡುವ ಘೋಷಣೆ ಚರಣ್‌ಜಿತ್ ಸಿಂಗ್‌ಗೆ ಆಡಳಿತದಲ್ಲಿ ದಕ್ಷತೆಯನ್ನು ತೋರ್ಪಡಿಸಲು ಇರುವ ಅವಕಾಶವನ್ನು ಸೂಚಿಸುತ್ತದೆ; ಆದರೆ ಚನ್ನಿಗೆ ಇರುವ ಕೇವಲ 5 ತಿಂಗಳಲ್ಲಿ ಅತ್ಯುತ್ತಮ ಆಡಳಿತ ನೀಡಲು ಅವಕಾಶ ಸಿಗುತ್ತದೆಯೋ ಎಂಬುದು ಯಕ್ಷ ಪ್ರಶ್ನೆ.

 ಇದೇ ಹಿನ್ನೆಲೆಯಲ್ಲಿ ಕರ್ನಾಟಕದಂತಹ ರಾಜ್ಯಗಳಲ್ಲಿ ಇತ್ತೀಚೆಗೆ ‘ದಲಿತ ಮುಖ್ಯಮಂತ್ರಿ’ ಬಗ್ಗೆ ತೀವ್ರ ಚರ್ಚೆಗಳು ನಡೆದದ್ದನ್ನು ನಾವಿಲ್ಲಿ ನೆನಪಿಸಿ ಕೊಳ್ಳಬಹುದು. ಆದರೆ ಸಾಮಾಜಿಕ ಚಳವಳಿಯಲ್ಲಿನ ಕೆಲವರ ‘ಸೈದ್ಧಾಂತಿಕ -ಬೌದ್ಧಿಕ-ರಾಜಕೀಯ ಸೋಗಲಾಡಿತನ’ವನ್ನು ಮರೆಮಾಚಿಕೊಳ್ಳಲು ಹಾಗೂ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ದಲಿತ ಮುಖ್ಯಮಂತ್ರಿ ಚರ್ಚೆಯನ್ನು ಆಯುಧವನ್ನಾಗಿಸುವ ಚಾಲಾಕಿತನವನ್ನು ತೋರಿಸಲಾಯಿತು. ಆದರೆ ಕರ್ನಾಟಕದಲ್ಲಿನ ಈ ದಲಿತ ಮುಖ್ಯಮಂತ್ರಿಯ ಚರ್ಚೆ ಪಂಜಾಬ್‌ನಲ್ಲಿ ಧನಾತ್ಮಕವಾಗಿ ಸಾಕಾರಗೊಂಡಿದೆ. ದಲಿತರು ಸದಾ ಕಾಂಗ್ರೆಸ್‌ನ ಬೇಸ್ ಆಗಿ ನಿಂತಿದ್ದಾರೆ ಎಂಬುದು ಐತಿಹಾಸಿಕ ಸತ್ಯ. ಕಾಂಗ್ರೆಸ್‌ನ ಸಂಕಷ್ಟಗಳ ಸಮಯದಲ್ಲೂ ದಲಿತರು ಸಹಾಯಕ್ಕೆ ನಿಂತ ಉದಾಹರಣೆ ಹೇರಳವಾಗಿದೆ. ಕಾಂಗ್ರೆಸ್ ತನ್ನ ಮೂಲ ಸ್ವರೂಪಕ್ಕೆ ಮರಳಬೇಕಾದರೆ ರಾಷ್ಟ್ರೀಯ ಸಮುದಾಯವಾಗಿರುವ ಹಾಗೆಯೇ ಜನಸಂಖ್ಯೆಯಲ್ಲೂ ನಿರ್ಣಾಯಕ ವಾಗಿರುವ ದಲಿತರ ಬೆಂಬಲ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಶೋಷಿತ ಸಮುದಾಯದ ಚರಣ್‌ಜಿತ್ ಸಿಂಗ್ ಚನ್ನಿಯನ್ನು ಅಮರೀಂದರ್ ಸಿಂಗ್ ಅವರಂತಹ ಬಲಾಢ್ಯ ಸಮುದಾಯಕ್ಕೆ ಸೇರಿರುವ ನಾಯಕತ್ವದ ಎದುರು ಮುಖ್ಯಮಂತ್ರಿ ಎಂಬುದಾಗಿ ಘೋಷಿಸಿರುವುದು ಕಾಂಗ್ರೆಸ್‌ನ ಕ್ರಾಂತಿಕಾರಿ ನಿರ್ಣಯವೇ ಆಗಿದೆ. ಇದೇ ಕಾರಣಕ್ಕೆ ಸ್ವತಃ ಚರಣ್‌ಜಿತ್ ಸಿಂಗ್ ರಾಹುಲ್ ಗಾಂಧಿಯನ್ನು ‘ಕ್ರಾಂತಿಕಾರಿ ನಾಯಕ’ ಎಂದು ಕರೆದಿರುವುದನ್ನು ನಾವು ವಿಶೇಷವಾಗಿ ಗಮನಿಸಬಹುದು.

ಈ ಮೂಲಕ ದಲಿತ ಪ್ರಾತಿನಿಧ್ಯದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಬಲು ದೊಡ್ಡದಾದ ಯಶಸ್ಸನ್ನು ಸಾಧಿಸಿದೆ ಎಂಬುದಾಗಿ ಗುರುತಿಸಬಹುದು. ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ಮುಖ್ಯಮಂತ್ರಿ ಆಗಿ ನೇಮಿಸುವ ಮೂಲಕ ರಾಷ್ಟ್ರದ ಉದ್ದಕ್ಕೂ ಕಾಂಗ್ರೆಸ್ ಒಂದು ದೊಡ್ಡದಾದ ಸಂಚಲನವನ್ನು ಮೂಡಿಸಿರುವುದು ಸುಳ್ಳಲ್ಲ; ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ನಾಯಕರು ಹಾಗೂ ಮಾಧ್ಯಮಗಳು ಪ್ರತಿಕ್ರಿಯಿಸುತ್ತಿರುವುದೇ ಸಾಕ್ಷಿ. ಈ ಎಲ್ಲಾ ರಾಜಕಾರಣದ ಪ್ರಕ್ರಿಯೆಗಳು ದಲಿತ ರಾಜಕಾರಣವನ್ನು ಬಲವರ್ಧನೆ ಮಾಡಲು ಕಾರಣವಾಗಬಹುದು ಹಾಗೂ ರಾಷ್ಟ್ರೀಯ ರಾಜಕಾರಣದ ದಿಕ್ಕನ್ನು ಕೂಡಾ ತೀವ್ರವಾಗಿ ಬದಲಿಸಬಹುದು. ಇದುವರೆಗೆ ‘‘ಲಕ್ನೊ ದಿಲ್ಲಿಗೆ ಹೆದ್ದಾರಿ’’ ಎಂಬ ಮಾತು ಪ್ರಚಲಿತವಿತ್ತು. ಅದನ್ನು ‘‘ಪಂಜಾಬ್ ದಿಲ್ಲಿಗೆ ಹೆದ್ದಾರಿ’’ ಎಂಬುದಾಗಿ ಬದಲಾಯಿಸಿಕೊಳ್ಳುವ ಎಲ್ಲಾ ಅವಕಾಶಗಳು ಕಾಂಗ್ರೆಸ್‌ಗೆ ಇದೆ. ಈ ಸೂತ್ರದ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಗಂಭೀರವಾಗಿ ಚಿಂತಿಸಲು ಸಮಯ ಮತ್ತು ಅವಕಾಶ ಲಭ್ಯವಾಗಿರುವಂತೆ ಕಂಡುಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News