ಜಾಮಿಯಾ ಮಿಲಿಯಾ ವಿವಿ ಕ್ಯಾಂಪಸ್ ಪುನಾರಂಭಿಸಲು ವಿದ್ಯಾರ್ಥಿ ಸಂಘಟನೆಗಳ ಆಗ್ರಹ

Update: 2021-09-21 18:15 GMT

ಹೊಸದಿಲ್ಲಿ, ಸೆ. 21: ದಿಲ್ಲಿಯಲ್ಲಿ ಕೋವಿಡ್19 ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಪಸ್ ತೆರೆಯುವಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಆಡಳಿತ ಮಂಡಳಿಯನ್ನು ಆಗ್ರಹಿಸಿವೆ. ‌

ದಿಲ್ಲಿ ವಿವಿ ಹಾಗೂ ಜವಾಹರಲಾಲ್ ನೆಹರೂ ವಿವಿಯಂತಹ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ತಮ್ಮ ಕ್ಯಾಂಪಸ್ಗಳನ್ನು ಹಂತಹಂತವಾಗಿ ತೆರೆಯುವ ಪ್ರಕ್ರಿಯೆಯನ್ನು ಆರಂಭಿಸಿವೆ. ಆದರೆ ಜಾಮಿಯಾ ಮಿಲಿಯಾ ವಿವಿ ಕ್ಯಾಂಪಸ್ ತೆರೆಯುವ ಬಗ್ಗೆ ಈತನಕ ಯಾವುದೇ ಪ್ರಕಟಣೆಯನ್ನು ನೀಡಿಲ್ಲ.

ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್ಎ), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ಐಓ), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಸಹಿತ ವಿವಿಧ ವಿದ್ಯಾರ್ಥಿ ಸಂಘಟನೆಗಳು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಕ್ಯಾಂಪಸನ್ನು ಸಾಧ್ಯವಾದಷ್ಟು ಬೇಗನೆ ತೆರೆಯಬೇಕೆಂದು ಆಗರಹಿಸಿದ್ದವು.

ಕೊರೋನ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಲಾಕ್ಡೌನ್ ಹೇರಿದ ಕಾರಣದಿಂದಾಗಿ ಶಾಲಾ,ಕಾಲೇಜು ಹಾಗೂ ವಿವಿ ಕ್ಯಾಂಪಸ್ಗಳು ಮುಚ್ಚುಗಡೆಗೊಂಡಿರುವುದರಿಂದ ವಿದ್ಯಾರ್ಥಿಗಳು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಎಲ್ಲಾ ಕ್ಯಾಂಪಸ್ಗಳನ್ನು ಮುಚ್ಚುಗಡೆಗೊಳಿಸುವುದು ಅನಿವಾರ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಹುತೇಕ ಶಿಕ್ಷಣಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸಮರ್ಪಕವಾದ ನಿರ್ಮಲೀಕರಣ ಹಾಗೂ ಸುರಕ್ಷಿತ ಅಂತರದ ಪಾಲನೆಯೊಂದಿಗೆ ಈಗ ತೆರೆದಿಡಲಾಗಿದೆ. ಜನರು ಕೂಡಾ ಎಲ್ಲಾ ಸಾರ್ವಜನಿಕ ಸೌಕರ್ಯ ಸ್ಥಳಗಳನ್ನು ಬಳಸಲು ಆರಂಭಿಸಿದ್ದಾರೆಂದು ಹೇಳಿಕೆ ತಿಳಿಸಿದೆ.

ಆದಾಗ್ಯೂ ಫಿಸಿಯೋಥೆರಪಿ ಹಾಗೂ ವಿಜ್ಞಾದ ಕೋರ್ಸ್ಗಳಿಗೆ ಪ್ರಾಕ್ಟಿಕಲ್ ತರಗತಿಗಳ ಅಗತ್ಯವಿರುವುದರಿಂದ ಅವುಗಳ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳು ಹಾಗೂ ಪ್ರಯೋಗಾಲಯಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ವಿವಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಈಗಾಗಲೇ ತಮ್ಮ ಪ್ರಬಂಧಗಳನ್ನು ಸಲ್ಲಿಸಿರುವ ಪಿಎಚ್ಡಿ ವಿದ್ಯಾರ್ಥಿಗಳು ಕನಿಷ್ಠ ಒಂದು ಡೋಸ್ ಕೋವಿಡ್ನಿರೋಧಕ ಲಸಿಕೆ ಪಡೆದಿದ್ದಲ್ಲಿ ಅವರಿಗೂ ಕ್ಯಾಂಪಸ್ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದವರು ಹೇಳಿದ್ದಾರೆ. ಕ್ಯಾಂಪಸ್ ಪುನಾರಂಭಕ್ಕೆ ಸಂಬಂಧಿಸಿ ಶೀಘ್ರವೇ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News