ಜಮ್ಮು ಬಂದ್‌ಗೆ ವ್ಯಾಪಕ ಬೆಂಬಲ: ಜನಜೀವನ ಅಸ್ತವ್ಯಸ್ತ

Update: 2021-09-22 18:10 GMT

ಜಮ್ಮು,ಸೆ.22: ನೂತನ ಅಬಕಾರಿ ನೀತಿ ಸೇರಿದಂತೆ ಕೇಂದ್ರ ಸರಕಾರದ ವಿವಿಧ ನಿರ್ಧಾರಗಳನ್ನು ವಿರೋಧಿಸಿ ಜಮ್ಮು ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ (ಜೆಸಿಸಿಐ) ಗುರುವಾರ ಕರೆ ನೀಡಿದ್ದ ಜಮ್ಮುಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಇಡೀ ಪ್ರದೇಶದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು. ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಂಡ ಬಳಿಕ ಜಮ್ಮು ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರತಿಭಟನೆಗಳು ಹಾಗೂ ರ್ಯಾಲಿಗಳು ನಡೆದವು.

ಸಂವಿಧಾನದ 370ನೇ ವಿಧಿ ರದ್ದತಿಯನ್ನು ಜಮ್ಮುವಿನ ಕೆಲವು ವರ್ಗದವರು ಬೆಂಬಲಿಸಿದ್ದರಾದರೂ, ಕೇಂದ್ರ ಸರಕಾರದ ನೂತನ ಅಬಕಾರಿ ನೀತಿ, ಬಾರ್ ಹಾಗೂ ರೆಸ್ಟೊರೆಂಟ್‌ಗಳ ಮೇಲೆ ಹೊಸ ನಿಯಮಾವಳಿಗಳ ಜಾರಿ ಮತ್ತು ಬೇಸಿಗೆಯಲ್ಲಿ ಸಚಿವಾಲಯ ಹಾಗೂ ಸರಕಾರಿ ಕಚೇರಿಗಳು ಜಮ್ಮುವಿಗೆ ವರ್ಗಾವಣೆಗೊಳ್ಳುವಂತಹ 149 ವರ್ಷಗಳ ಪದ್ಧತಿಯಾದ ದರ್ಬಾರ್ ಮೂವ್ ರದ್ದತಿ, ನೂತನ ಗಣಿಗಾರಿಕಾ ನೀತಿ, ಸಭಾಭವನಗಳ ಮೇಲೆ ನಿರ್ಬಂಧ, ರಿಲಾಯನ್ಸ್ ನ ಸರಣಿ ರಿಟೇಲ್ ಮಳಿಗೆಗಳನ್ನು ತೆರೆಯುವ ಪ್ರಸ್ತಾವವನ್ನು ವಿರೋಧಿಸಿ ಜಮ್ಮುವಿನ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ ಬಂದ್‌ಗೆ ಕರೆ ನೀಡಿತ್ತು. ಕೇಂದ್ರ ಸರಕಾರದ ಈ ಕ್ರಮಗಳು ಜಮ್ಮುವಿನ ವಾಣಿಜ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀವೆ ಎಂದು ಜೆಸಿಸಿಐ ತಿಳಿಸಿದೆ.

ಬಂದ್ ಹಿನ್ನೆಲೆಯಲ್ಲಿ ಜಮ್ಮು ಪ್ರದೇಶಾದ್ಯಂತ ಔಷಧಿ ಮಳಿಗೆಗಳು ಸೇರಿದಂತೆ ಅಂಗಡಿ, ಮುಂಗಟ್ಚೆಗಳು ಮುಚ್ಚಿದ್ದವು. ಸಾರ್ವಜನಿಕ ಹಾಗೂ ಖಾಸಗಿ ವಾಹನಗಳು ಬೀದಿಗಿಳಿಯಲಿಲ್ಲ. ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿದ್ದವು. ಬಂದ್ ಸಂಪೂರ್ಣವಾಗಿ ಶಾಂತಿಯುತವಾಗಿತ್ತು ಹಾಗೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲವೆಂದು ಮೂಲಗಳು ತಿಳಿಸಿವೆ. ಜಮ್ಮುವಿನ ಹೈಕೋರ್ಟ್ ನ್ಯಾಯವಾದಿಗಳ ಸಂಘ ಕೂಡಾ ಬಂದ್‌ಗೆ ಬೆಂಬಲ ನೀಡಿದ್ದರಿಂದ ಕೋರ್ಟ್ ವ್ಯವಹಾರಗಳು ಕೂಡಾ ಬಾಧಿತವಾದವು.

ಜಮ್ಮುಕಾಶ್ಮೀರ ಮೋಟಾರು ಸಾರಿಗೆ ಕಂಪೆನಿಗಳ ಸಂಘ (ಜೆಕೆಎಂಟಿಸಿಎ) ಬಂದ್ ಬೆಂಬಲಿಸಿದ್ದು, ಯಾವುದೇ ಸಾರಿಗೆವಾಹನಗಳು ಕಾರ್ಯಾಚರಿಸಲಿಲ್ಲ. ಸರಕಾರಿ ವಾಹನಗಳು ಹಾಗೂ ತುರ್ತು ಸೇವೆಗೆ ಸಂಬಂಧಿಸಿದ ವಾಹನಗಳು ಮಾತ್ರ ರಸ್ತೆಯಲ್ಲಿ ವಿರಳವಾಗಿ ಸಂಚರಿಸಿತ್ತಿದ್ದುದು ಕಂಡುಬಂತು.

ಶ್ರೀನಗರ ಹಾಗೂ ಜಮ್ಮು ನಡುವೆ ಸರಕಾರಿ ಕಾರ್ಯಾಲಯಗಳನ್ನು ಹಾಗೂ ಸಚಿವಾಲಯಗಳನ್ನು ಆರು ತಿಂಗಳಿಗೊಮ್ಮೆ ವರ್ಗಾಯಿಸುವ ದರ್ಬಾರ್ ಮೂವ್ ಪದ್ದತಿಯನ್ನು ಜಮ್ಮುಕಾಶ್ಮೀರ ಆಡಳಿತವು ಈ ವರ್ಷದ ರದ್ದುಪಡಿಸಿರುವುದು ಜಮ್ಮುವಿನಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ದರ್ಬಾರ್ ಮೂವ್ ರದ್ದತಿಯಿಂದಾಗಿ ಜಮ್ಮುಪ್ರದೇಶದ ಆರ್ಥಿಕ ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೆಂದು ಅಲ್ಲಿನ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News