ಮುಕ್ತ ವ್ಯಾಪಾರ: ಭಾರತ- ಯುಎಇ ಒಪ್ಪಂದ ಮಾತುಕತೆಗೆ ಇಂದು ಚಾಲನೆ

Update: 2021-09-23 03:57 GMT
Photo credit: Twitter@PiyushGoyal

ಹೊಸದಿಲ್ಲಿ, ಸೆ.23: ಭಾರತ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಇಂದಿನಿಂದ(ಸೆ.23) ಚರ್ಚೆ ಆರಂಭಿಸಲಿವೆ. ಮೊದಲ ಸುತ್ತಿನ ಮಾತಕತೆ ಗುರುವಾರ ಆರಂಭವಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಈ ವರ್ಷದ ಕೊನೆಯ ವೇಳೆಗೆ ಉಭಯ ದೇಶಗಳು ಮಾತುಕತೆ ಮುಗಿಸಲಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳು ಮತ್ತು ದೃಢೀಕರಣ ಪೂರ್ಣಗೊಂಡ ಬಳಿಕ ಪರಸ್ಪರ ಲಾಭದಾಯಕವೆನಿಸುವ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)ಕ್ಕೆ 2022ರ ಮಾರ್ಚ್ ಮುನ್ನ ಸಹಿ ಮಾಡುವ ನಿರೀಕ್ಷೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಸಚಿವ ಪಿಯೂಷ್ ಗೋಯಲ್ ಈಗಾಗಲೇ ಯುಎಪಿ ವಿದೇಶಿ ವ್ಯಾಪಾರ ಖಾತೆ ಸಚಿವ ತಾನಿ ಬಿನ್ ಅಹ್ಮದ್ ಝೆಯೋದಿ ಅವರನ್ನು ಬುಧವಾರ ಭೇಟಿ ಮಾಡಿದ್ದು, ಹಾಲಿ ಇರುವ ವಹಿವಾಟು ವಿಸ್ತರಣೆ ಮತ್ತು ಹೂಡಿಕೆ ಸಂಬಂಧ ವಿಸ್ತರಣೆ ಸೇರಿದಂತೆ ದ್ವಿಪಕ್ಷೀಯ ಆರ್ಥಿಕ ಸಂಬಂಧವನ್ನು ಸುಧಾರಿಸುವ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದ್ದಾರೆ. 2017ರಲ್ಲಿ ಸಹಿ ಮಾಡಿರುವ ಸಮಗ್ರ ಪ್ರಮುಖ ಪಾಲುದಾರಿಕೆ ಒಪ್ಪಂದದ ಅನ್ವಯ ಭಾರತ ಮತ್ತು ಯುಎಇ ಸಾಧಿಸಿರುವ ಪ್ರಗತಿಯ ಆಧಾರದಲ್ಲಿ ಪರಸ್ಪರ ಲಾಭದಾಯಕ ಎನಿಸುವ ಆರ್ಥಿಕ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಉಭಯ ಸಚಿವರು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅಧಿಕೃತ ಪ್ರಕಟನೆ ಹೇಳಿದೆ.

ಈ ಸಿಇಪಿಎ ಒಪ್ಪಂದವು ಉಭಯ ದೇಶಗಳಲ್ಲಿ ಉದ್ಯೋಗ ಸೃಷ್ಟಿ, ಜನರ ಜೀವನಮಟ್ಟ ಸುಧಾರಣೆ, ವಿಸ್ತೃತ ಸಾಮಾಜಿಕ ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಹೊಸ ಪ್ರಮುಖ ಆರ್ತಿಕ ಒಪ್ಪಂದವು ಮುಂದಿನ ಐದು ವರ್ಷಗಳ ಒಳಗಾಗಿ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ನಿರೀಕ್ಷೆ ಇದೆ ಅಂತೆಯೇ ಸೇವಾ ವಲಯದ ವಹಿವಾಟನ್ನು 15 ಶತಕೋಟಿ ಡಾಲರ್‌ಗೆ ಹೆಚ್ಚಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News