2011ರ ಜಾತಿ ಆಧಾರಿತ ಗಣತಿಯಲ್ಲಿ ಲೋಪವಿದೆ: ಕೇಂದ್ರ ಸರಕಾರ
ಹೊಸದಿಲ್ಲಿ, ಫೆ.23: ಜಾತಿಗಳ ಕುರಿತಾದ ವಿವರಗಳನ್ನು ಸಂಗ್ರಹಿಸಲು ಜನಗಣತಿಯು ಮಾದರಿ ವಿಧಾನವಲ್ಲವೆಂದು ಕೇಂದ್ರ ಸರಕಾರವು ಗುರುವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ನೂತನ ಜನಗಣತಿ ಪ್ರಕ್ರಿಯೆಯ ಮೂಲಕ ಜಾತಿ ಆಧಾರಿತ ಗಣತಿಯನ್ನು ನಡೆಸುವ ಸಾಧ್ಯತೆಯನ್ನು ಅದು ತಳ್ಳಿಹಾಕಿದೆ. 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಸಮೀಕ್ಷೆಯ ಭಾಗವಾಗಿ ನಡೆಸಲಾದ ಜಾತಿಗಣತಿಯು ಲೋಪದಿಂದ ಕೂಡಿತ್ತೆಂದು ಅದು ಹೇಳಿದೆ.
ಮುಂಬರುವ ಜನಗಣತಿಯಲ್ಲಿ ಹಿಂದುಳಿದ ವರ್ಗಗಳ ಪೌರರ ಕುರಿತ ಮಾಹಿತಿಯನ್ನು ಸಂಗ್ರಹಿಸುವುದು ಕಾರ್ಯಸಾಧ್ಯವಲ್ಲವೆಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯು ಸೆಪ್ಚೆಂಬರ್ 21ರಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದೆ.
ಓಬಿಸಿ/ಬಿಬಿಸಿಗಳ ಗಣತಿಯು ಯಾವಾತ್ತೂ, ಆಡಳಿತಾತ್ಮಕವಾಗಿ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾಗಿದೆಯೆಂದು ಅಫಿಡವಿಟ್ ತಿಳಿಸಿದ್ದು, ಹಿಂದುಳಿದ ವರ್ಗಗಳನ್ನು ಗುರುತಿಸುವ ಮಾನದಂಡಗಳನ್ನು ದೃಢಪಡಿಸುವಲ್ಲಿ ಇರುವ ಪ್ರಾಯೋಗಿಕ ತೊಂದರೆಗಳನ್ನು ವಿವರಿಸಿದೆ.
2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಸಮೀಕ್ಷೆಯ ಭಾಗವಾಗಿ ನಡೆಸಲಾದ ಜಾತಿಗಣತಿಯಲ್ಲಿ ಲೋಪವಿದ್ದುದನ್ನು ಕೂಡಾ ಕೇಂದ್ರ ಸರಕಾರವು ಬೆಟ್ಟು ಮಾಡಿ ತೋರಿಸಿದೆ. ಸಮೀಕ್ಷೆಯಲ್ಲಿ ಗಣತಿದಾರರಿಂದಾದ ತಪ್ಪುಗಳು ಹಾಗೂ ಮಾಹರಿತಿ ಸಂಗ್ರಹ ಪ್ರಕ್ರಿಯೆಯಲ್ಲಿನ ಲೋಪದೋಷಗಳಿಂದಾಗಿ, ಆ ದತ್ತಾಂಶಗಳು ಉಪಯೋಗಕ್ಕೆ ಬಾರದೆ ಹೋಗಿವೆ ಹಾಗೂ ಪ್ರವೇಶಾತಿ,ಭಡ್ತಿ ಅಥವಾ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಯಾವುದೇ ಶಾಸನಾತ್ಮಕ ಪ್ರಕ್ರಿಯೆಗೆ ಅದನ್ನು ಆಧರಿಸಲು ಸಾಧ್ಯವಿಲ್ಲವೆಂದು ಕೇಂದ್ರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
2011ರಲ್ಲಿ ನಡೆಸಲಾದ ಎಸ್ಇಸಿಸಿ ಸಮೀಕ್ಷೆಯು ಓಬಿಸಿ ಸಮೀಕ್ಷೆಯಾಗಿರಲಿಲ್ಲ . ಬದಲಿಗೆ ಅದೊಂದು ದೇಶದ ಎಲ್ಲಾ ಕುಟುಂಬಗಳ ಜಾತಿ ಸ್ಥಿತಿಗತಿಯನ್ನು ಲೆಕ್ಕಹಾಕುವ ಸಮಗ್ರ ಪ್ರಕ್ರಿಯೆಯಾಗಿತೆಂದು ಅದು ತಿಳಿಸಿದೆ. ಎಸ್ಇಸಿಸಿ ಸಮೀಕ್ಷೆಯಲ್ಲಿ ಲಭ್ಯವಾದ ಅರ್ಥಿಕ ದತ್ತಾಂಶಗಳನ್ನು ಸರಕಾರಿ ವಿರೋಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಳಸಿಕೊಳ್ಳಲಾಗಿದೆಯಾದರೂ, ಜಾತಿ ದತ್ತಾಂಶವು ನಿರುಪಯುಕ್ತವಾದುದರಿಂದ ಅದನ್ನು ಬಹಿರಂಗಪಡಿಲಾಗಿಲ್ಲವೆಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ವಿವರಿಸಿದೆ.