ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಕುಟುಂಬ ನಿರ್ಧಾರ

Update: 2021-09-25 05:48 GMT

ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಉಪ್ಪಿನಂಗಡಿ ಪರಿಸರ

ಮಂಗಳೂರು, ಸೆ.24: ಉತ್ತರ ಭಾರತದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾದ ಉಗ್ರರೊಂದಿಗೆ ನೆಕ್ಕಿಲಾಡಿಯಿಂದ ನಾಪತ್ತೆಯಾದ ಮುಹಮ್ಮದ್ ರಫೀಕ್ ಖಾನ್ ಕೂಡ ನಂಟು ಹೊಂದಿದ್ದರು ಎಂಬ ಮಾಧ್ಯಮಗಳ ವರದಿಯಿಂದ ಆತಂಕ ಹಾಗೂ ಉದ್ವಿಗ್ನಕ್ಕೊಳಗಾಗಿದ್ದ ಉಪ್ಪಿನಂಗಡಿ, ಇದೀಗ ಪೊಲೀಸ್ ವರಿಷ್ಠಾಧಿಕಾರಿಯವರ ಸ್ಪಷ್ಟೀಕರಣದಿಂದ ಸಣ್ಣದೊಂದು ನಿಟ್ಟುಸಿರು ಬಿಟ್ಟಿದೆ. ‘ನೆಕ್ಕಿಲಾಡಿಯಿಂದ ನಾಪತ್ತೆಯಾಗಿದ್ದ ಮೆಕ್ಯಾನಿಕ್ ರಫೀಕ್ ಖಾನ್ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಇವರನ್ನು ಯಾವುದೇ ಪೊಲೀಸರು ಬಂಧಿಸಿಲ್ಲ’ ಎಂದು ಜಿಲ್ಲಾ ಪೊಲೀಸ್ ಹೇಳಿಕೆ ನೀಡಿದ ಬೆನ್ನಿಗೇ, ಉಪ್ಪಿನಂಗಡಿ ಪರಿಸರದ ಜನತೆ, ಸುಳ್ಳು ಸುದ್ದಿ ಹರಡಿರುವ ಪತ್ರಿಕೆಗಳ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಸತ್ಯ ಬಹಿರಂಗವಾದ ಬಳಿಕವೂ ಪರಿಸರ ಪತ್ರಿಕೆಗಳ ವರದಿಯ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ರಫೀಕ್ ಖಾನ್ ಕುಟುಂಬ ಮಾತ್ರವಲ್ಲದೆ, ಊರಿನ ಹಲವು ಗಣ್ಯರು ಸುದ್ದಿಯ ಕುರಿತಂತೆ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

► ನೋವು ಇನ್ನೂ ಉಳಿದಿದೆ: ಕಣ್ಣೀರಿಟ್ಟ ರಫೀಕ್ ಪತ್ನಿ

ಹಿಮಾಚಲ ಪ್ರದೇಶ ಮೂಲದ ಮುಹಮ್ಮದ್ ರಫೀಕ್‌ರೊಂದಿಗೆ ವಿವಾಹವಾಗಿ ಎರಡು ವರ್ಷಗಳೇ ಕಳೆದವು. ನೆಕ್ಕಿಲಾಡಿಯಲ್ಲೇ ಸ್ವಂತ ಗ್ಯಾರೇಜ್‌ವೊಂದನ್ನು ಹಾಕಿಕೊಂಡಿದ್ದರು. ಅನತಿ ದೂರದ ಫ್ಲಾಟ್‌ನಲ್ಲಿ ನೆಲೆಸಿದೆವು. ಸುಖಿ ಸಂಸಾರ ನಮ್ಮದಾಗಿತ್ತು.ಕಾರಣಾಂತರದಿಂದ ಹಿಮಾಚಲಯ ಪ್ರದೇಶಕ್ಕೆ ತೆರಳಿದ್ದ ಪತಿಗೆ ಮಾಧ್ಯಮಗಳು ಉಗ್ರ ಪಟ್ಟ ಕಟ್ಟಿವೆ. ಈ ವೇಳೆ ಕುಟುಂಬ, ಪರಿಸರದಲ್ಲಿ ಬಿರುಗಾಳಿಯೇ ಬೀಸಿದಂತಾಯಿತು. ಅಲ್ಲೋಲ-ಕಲ್ಲೋಲ ಪರಿಸ್ಥಿತಿ ಉಂಟಾಯಿತು. ‘ಉಗ್ರರ ಜೊತೆ ನಂಟು’ ಎಂಬ ಆಧಾರ ರಹಿತ ವರದಿಯನ್ನು ಸ್ವತಃ ಪೊಲೀಸರೇ ಅಲ್ಲಗಳೆದಿದ್ದಾರೆ. ಸದ್ಯ ಪರಿಸ್ಥಿತಿ ಮೇಲ್ನೋಟಕ್ಕೆ ಮಾತ್ರ ಶಾಂತವಾಗಿದೆ. ಆಳದಲ್ಲಿ ಸಾಕಷ್ಟು ನೋವಿದೆ. ಒಂದು ತುತ್ತು ಅನ್ನ ಕೂಡ ಗಂಟಲೊಳಗೆ ಇಳಿಯದಂತಾಗಿದೆ. ಮಾಧ್ಯಮಗಳು ಕುಟುಂಬದ ಮಾನ ಹರಾಜು ಹಾಕಿವೆ. ಪತಿ ಮಾನವೀಯತೆಯ ಪ್ರತಿಬಿಂಬದಂತಿದ್ದ ಎಂದು ಸಂತ್ರಸ್ತನ ಪತ್ನಿ ಫಾತಿಮಾ ‘ವಾರ್ತಾಭಾರತಿ’ಯೊಂದಿಗೆ ಮಾತನಾಡುವ ವೇಳೆ ಕಣ್ಣೀರಿಟ್ಟರು.

ಜುಲೈ 18ರಂದು ಪತಿ ಮುಹಮ್ಮದ್ ರಫೀಕ್ ಖಾನ್ ದ್ವಿಚಕ್ರ ವಾಹನದ ಉಪಕರಣ ತರಲೆಂದು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಪ್ರಯಾಣ ಬೆಳೆಸಿದ್ದರು. ಫೋನಿ ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಸುವಾರು ಎಂಟು ದಿನಗಳಾದ ನಂತರ ಅವರ ಮೊಬೈಲ್ ಸ್ವಿಚ್ಡ್‌ಆಫ್ ಆಗಿತ್ತು. ನಂತರ ಭೀತಿಗೊಳಗಾದ ನಮ್ಮ ಕುಟುಂಬ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿತ್ತು. ನೆಕ್ಕಿಲಾಡಿಯ ಫ್ಲಾಟ್‌ನಿಂದ ತವರು ಮನೆಯಾದ ಕೊಡಂಬಾಡಿಯ ಶಾಂತಿನಗರದ ತಂದೆಯ ಮನೆಗೆ ವಾಪಸಾದೆ ಎಂದರು.

ಪತಿಗೆ ಉಗ್ರರೊಂದಿಗೆ ನಂಟಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಪುತ್ತೂರಿನ ಡಿವೈಎಸ್ಪಿ ಸೇರಿದಂತೆ ಉಪ್ಪಿನಂಗಡಿಯ ಪೊಲೀಸರು ಮನೆಗೆ ಧಾವಿಸಿದರು. ಕುಟಂಬವನ್ನೆಲ್ಲ ವಿಚಾರಿಸಿದರು. ರಫೀಕ್‌ಖಾನ್ ಬಗೆಗಿನ ಎಲ್ಲ ಮಾಹಿತಿಯನ್ನು ಅವರಿಗೆ ಒದಗಿಸಿದೆವು. ಅವರು ಮೊಬೈಲ್ ಫೋನ್ ನಂಬರ್ ಆಧರಿಸಿ, ತನಿಖೆ ನಡೆಸಿದರು. ಪೊಲೀಸರು ಕೊನೆಗೂ ಪತಿ ಇರುವ ಜಾಗ ಪತ್ತೆ ಹಚ್ಚಿದರು. ಪತಿಯೊಂದಿಗೆ ವೀಡಿಯೊ ಕರೆಯ ಮೂಲಕ ಮಾತನಾಡಿಸಿದರು. ನಾಪತ್ತೆಯಾದ ಪತಿ ಅವರೇ ಎನ್ನುವುದು ಖಚಿತವಾಯಿತು. ಜೊತೆಗೆ ಆತನಿಗೆ ಉಗ್ರರ ನಂಟಿಲ್ಲ ಎನ್ನುವುದು ಕೂಡ ಇದೇ ವೇಳೆ ದೃಢಪಟ್ಟಿತು ಎನ್ನುತ್ತಾರೆ ಸಂತ್ರಸ್ತೆ ಫಾತಿಮಾ.

► ಮಾನನಷ್ಟ ಮೊಕದ್ದಮೆ

ಪತಿಯನ್ನು ಭಯೋತ್ಪಾದಕನಂತೆ ಬಿಂಬಿಸಿದ ಮಾಧ್ಯಮಗಳ ವರದಿ ಯಿಂದ ಕುಟುಂಬವೇ ಜರ್ಝರಿತಗೊಂಡಿದ್ದು, ಅಕ್ಷರಶಃ ನಲುಗಿದೆ. ನಮ್ಮ ಆತಂಕ ತೀವ್ರತೆ ಪಡೆಯುತ್ತಲೇ ಸಾಗಿತು. ನೆರೆಹೊರೆಯವರ ಚುಚ್ಚು ಮಾತುಗಳು, ಅಪಹಾಸ್ಯ ಮಾಡುವ ಪರಿ, ನಿಂದಿಸುವ ವೈಖರಿ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಘನಘೋರ ಹಿಂಸೆಗೆ ಒಳಗಾದೆವು. ಪೊಲೀಸರ ಮೂಲಕ ಪತಿಯೊಂದಿಗೆ ಮಾತನಾಡಿದ ಬಳಿಕ ಅಲ್ಪಮಟ್ಟಿಗೆ ನಿರುಮ್ಮಳರಾದೆವು. ಪತಿಯ ವಿರುದ್ಧ ಆಧಾರ ರಹಿತ, ಇಲ್ಲ ಸಲ್ಲದ ವರದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಕುಟುಂಬ ತೀರ್ಮಾನಿಸಿದೆ. ಮಾಧ್ಯಮಗಳಿಗೆ ಬರೆಯುವ ಸ್ವಾತಂತ್ರವಿದೆ ಎಂದು ಆಧಾರ ರಹಿತ ವರದಿ ಪ್ರಕಟಿಸುವುದಲ್ಲ. ಇದರಿಂದ ಕುಟುಂಬದಲ್ಲಿ ಸಾವಿನಂತಹ ಅವಘಡಗಳು ಸಂಭವಿಸಿದ್ದರೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದ್ದಾರೆ.

ನೆಕ್ಕಿಲಾಡಿಗೆ ವಾಪಸಾಗಿ ಪ್ರಕರಣ ದಾಖಲಿಸುವೆ: ರಫೀಕ್ ಖಾನ್

ಹಿಮಾಚಲ ಪ್ರದೇಶದಿಂದ ಬಂದ ನಾನು ದಿಲ್ಲಿಯ ಇಂದ್ರಪ್ರಸ್ಥ ಪ್ರದೇಶದಲ್ಲಿ ಮೆಕ್ಯಾನಿಕ್ ಆಗಿದ್ದೆ. ನಂತರ ಕರಾವಳಿಯ ಉಪ್ಪಿನಂಗಡಿಗೆ 2013ರಲ್ಲಿ ಆಗಮಿಸಿದ್ದೆ. ಮೆಕ್ಯಾನಿಕ್‌ಆಗಿ ಕೆಲಸ ಮಾಡುತ್ತಾ, ರಾಷ್ಟ್ರೀಯ ಹೆದ್ದಾರಿ ಪಕ್ಕದ ನೆಕ್ಕಿಲಾಡಿಯಲ್ಲಿ ಮೂರು ವರ್ಷಗಳ ಹಿಂದೆ ಗ್ಯಾರೇಜ್ ತೆರೆದು ಕೆಲಸ ಮಾಡುತ್ತಿದ್ದೆ. ಕೊಡಿಂಬಾಡಿ ಶಾಂತಿನಗರದ ಯುವತಿಯನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದೆ. ನನಗೆ ಯಾವುದೇ ಸಾಲವೂ ಇರಲಿಲ್ಲ. ವೈಯಕ್ತಿಕ ಕಾರಣಗಳಿಂದ ತವರು ಹಿಮಾಚಲ ಪ್ರದೇಶದ ಲಾಹೌಲ್ ಜಿಲ್ಲೆಯ ಕಾಜಾ ಗ್ರಾಮಕ್ಕೆ ವಾಪಸಾಗಿದ್ದೇನೆ. ಮಾಧ್ಯಮಗಳಲ್ಲಿ ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಒಂದೂವರೆ ತಿಂಗಳ ನಂತರ ನೆಕ್ಕಿಲಾಡಿಗೆ ವಾಪಸಾಗಿ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸುವೆ ಎಂದು ಸಂತ್ರಸ್ತ ಮುಹಮ್ಮದ್ ರಫೀಕ್ ಖಾನ್ ತಿಳಿಸಿದ್ದಾರೆ.

ಮಾಧ್ಯಮಗಳು ಸೌಹಾರ್ದಕ್ಕೆ ಧಕ್ಕೆ ತರದಿರಲಿ: ಅಸ್ಗರ್ ಅಲಿ

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ, ಸತ್ಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ನೆಕ್ಕಿಲಾಡಿ ಪ್ರದೇಶವು ಮೊದಲಿನಿಂದಲೂ ಸೌಹಾರ್ದ-ಸಾಮರಸ್ಯದಿಂದ ಕೂಡಿದೆ. ಎಲ್ಲ ಧರ್ಮಗಳ ಜನರು ಸಹೋದರರಂತೆ ಬದುಕಿ ಬಾಳುತ್ತಿದ್ದಾರೆ. ಉತ್ಕೃಷ್ಟ ಗುಣಮಟ್ಟದ ಒಡನಾಟ ಇಲ್ಲಿದೆ. ಮಾಧ್ಯಮಗಳು ಸೌಹಾರ್ದಕ್ಕೆ ಧಕ್ಕೆ ತರಬಾರದು. ಸಂವಿಧಾನ ನಾಲ್ಕನೇ ಅಂಗವಾದ ಮಾಧ್ಯಮಗಳು ಸತ್ಯ ಹೇಳಬೇಕು. ಸಮಾಜವನ್ನು ಸರಿಪಡಿಸುವಂತಿರಬೇಕು ಎನ್ನುತ್ತಾರೆ ನೆಕ್ಕಿಲಾಡಿ ಗ್ರಾಪಂನ ಮಾಜಿ ಅಧ್ಯಕ್ಷ ಅಸ್ಗರ್ ಅಲಿ.

ಹಿಮಾಚಲ ಪ್ರದೇಶ ಮೂಲದ ಮುಹಮ್ಮದ್ ರಫೀಕ್ ಖಾನ್ ನೆಕ್ಕಿಲಾಡಿಯಲ್ಲಿ ಆರು ವರ್ಷಗಳಿಂದ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಮಾಧ್ಯಮಗಳಲ್ಲಿ ಅವರ ವಿರುದ್ಧ ಆಧಾರ ರಹಿತ ಉಗ್ರ ಪಟ್ಟ ಕಟ್ಟಿರುವುದು ಬೇಸರ ತಂದಿದೆ. ಯಾವುದೇ ಘಟನೆಗಳು ಸಂಭವಿಸಿದಾಗ ಆಧಾರ ರಹಿತವಾಗಿ ಬರೆಯುವುದು ಸಲ್ಲದು. ಆಧಾರಗಳಿಂದ ಅವರು ಉಗ್ರನೇ ಆಗಿದ್ದಲ್ಲಿ ಉಗ್ರನೆಂದೇ ಬರೆಯಿರಿ. ಸಾಕ್ಷಿಗಳಿಲ್ಲದೆ ಸುಳ್ಳುಗಳನ್ನು ವಿಜೃಂಭಿಸುವ ಬರವಣಿಗೆಗಳು ಆಕ್ಷೇಪಾರ್ಹ. ಸತ್ಯ ಬಹಿರಂಗ ಪಡಿಸಿದ ದಕ್ಷಿಣ ಕನ್ನಡ ಪೊಲೀಸರು ಹಾಗೂ ವಾಸ್ತವದ ಸುದ್ದಿ ಪ್ರಸಾರ ಮಾಡಿದ ‘ವಾರ್ತಾಭಾರತಿ’ಯ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.

‘ಕುಟುಂಬ ವಿಷ ಸೇವಿಸಿದ್ದರೆ ಯಾರು ಹೊಣೆ?’

ಅಳಿಯ ರಫೀಕ್ ಉಗ್ರನಲ್ಲ. ಮಾಧ್ಯಮಗಳಲ್ಲಿ ಅಳಿಯನ ವಿರುದ್ಧ ಉಗ್ರ ಪಟ್ಟ ಕಟ್ಟಿರುವುದು ಹೆಚ್ಚು ಬೇಸರವಾಗಿದೆ. ಮನೆಯಲ್ಲಿ ಯಾರೂ ಕುಳಿತುಕೊಳ್ಳುವಂತೆಯೂ ಇಲ್ಲ. ಹೊರಗೆ ನಡೆದಾಡಲೂ ಕಷ್ಟವಾಗುತ್ತಿದೆ. ಕುಟುಂಬಸ್ಥರು ವಿಷ ಕುಡಿದಿದ್ದರೆ ಯಾರು ಹೊಣೆ? ಮಾಧ್ಯಮಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದೇವೆ ಎಂದು ರಫೀಕ್ ಖಾನ್ ಅವರ ಮಾವ, ಫಾತಿಮಾ ತಂದೆ ಅಬ್ದುಲ್ ಬಶೀರ್ ತಿಳಿಸಿದ್ದಾರೆ.

ಮುಹಮ್ಮದ್ ರಫೀಕ್ ಖಾನ್ ಅವರು ನೆಕ್ಕಿಲಾಡಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಸುಮಾರು ಎರಡು ವರ್ಷಗಳಿಂದ ಗ್ಯಾರೇಜ್ ನಡೆಸುತ್ತಿದ್ದಾರೆ. ಅವರ ಪರಿಚಯವಿದೆ. ಆತ್ಮೀಯರು ಕೂಡ. ಯಾರ ತಂಟೆಗೂ ಹೋಗುವವರಲ್ಲ. ಯಾರಿಗೂ ಅನ್ಯಾಯ ಮಾಡುವವರಲ್ಲ. ಅವರಾಯಿತು ಅವರ ಕೆಲಸವಾಯಿತು ಎಂದು ದುಡಿಯುತ್ತಿದ್ದರು. ರಫೀಕ್ ಅಸಹಾಯಕರಿಗೆ ಸಹಾಯಹಸ್ತ ಚಾಚುವ ವ್ಯಕ್ತಿತ್ವ ಹೊಂದಿದ್ದರು.

ಯಾದವ್ ಯು., ಆದರ್ಶ ಆಟೊ ಏಜೆನ್ಸಿಸ್ ಮಳಿಗೆಯ ಸೇಲ್ಸ್ ಮ್ಯಾನೇಜರ್, ನೆಕ್ಕಿಲಾಡಿ

ಹೆದ್ದಾರಿ ಪಕ್ಕದಲ್ಲಿ ಗ್ಯಾರೇಜ್ ನಡೆಸುತ್ತಿದ್ದ ರಫೀಕ್ ಒಳ್ಳೆಯ ವ್ಯಕ್ತಿತ್ವದವರು. ನೆರೆಹೊರೆಯ ಅಂಗಡಿ-ಮುಂಗಟ್ಟುಗಳ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.

ಲೋಕಯ್ಯ, ಯತೀಶ್ ಬೇಲ್‌ಪುರಿ ಅಂಗಡಿ ಮಾಲಕ, ನೆಕ್ಕಿಲಾಡಿ

ಮುಹಮ್ಮದ್ ರಫೀಕ್ ಖಾನ್ ಆತ್ಮೀಯ ಸ್ನೇಹಿತ. ಸುಮಾರು ಎರಡೂವರೆ ವರ್ಷದಿಂದ ನೇರ ಸಂಪರ್ಕದಲ್ಲಿದ್ದರು. ಇವರ ಬಗ್ಗೆ ಮಾಧ್ಯಮಗಳಲ್ಲಿ ಉಗ್ರರೊಂದಿಗೆ ನಂಟು ಎಂಬುದಾಗಿ ಸುದ್ದಿ ಬಂದಿತ್ತು. ಇದರಿಂದ ನಮಗೂ ಭಯವಾಯಿತು. ಕೆಲವರು ರಫೀಕ್ ಬಗ್ಗೆ ವಿಚಾರಿಸುತ್ತಿದ್ದರು. ಅವರು ಒಳ್ಳೆಯ ವ್ಯಕ್ತಿತ್ವದವರು ಎಂದು ಹೇಳುತ್ತಿದ್ದೆ. ಇದರ ಬೆನ್ನಲ್ಲೇ ಎಸ್ಪಿಯ ಹೇಳಿಕೆ ಸಮಾಧಾನ ತರಿಸಿತು. ಆದರೆ ಸುಳ್ಳು ಸುದ್ದಿ ಪ್ರಕಟವಾದದ್ದರಿಂದ ಅವರ ಕುಟುಂಬ ತೀವ್ರ ನೊಂದಿದೆ. ಇದು ನಮಗೂ ಬೇಸರ ತಂದಿದೆ.

ಅನೂಪ್ ಸಿಂಗ್, ರಾಜಸ್ಥಾನ ಗ್ರಾನೈಟ್ಸ್- ಮಾರ್ಬಲ್ಸ್ ಮಳಿಗೆ ಮಾಲಕ, ನೆಕ್ಕಿಲಾಡಿ

ನಾಲ್ಕು ದಿನಗಳ ಹಿಂದೆ ದಿಲ್ಲಿಯಲ್ಲಿ ನಾಲ್ವರು ಉಗ್ರರ ಬಂಧನ ಅಂತ ಸುದ್ದಿಯೊಂದು ಪ್ರಕಟವಾಗಿತ್ತು. ಆ ಸುದ್ದಿ ಪ್ರಕಟಗೊಂಡ ಮರುದಿನ ಕೆಲವು ಪತ್ರಿಕೆಗಳಲ್ಲಿ ದಿಲ್ಲಿಯಲ್ಲಿ ಬಂಧಿತ ಉಗ್ರರಲ್ಲಿ ನೆಕ್ಕಿಲಾಡಿಯಿಂದ ನಾಪತ್ತೆಯಾಗಿರುವ ರಫೀಕ್ ಖಾನ್ ಕೂಡಾ ಇದ್ದಾರೆ ಎಂದು ಪ್ರಕಟಿಸಿದವು. ಆದರೆ ರಫೀಕ್ ಬಗ್ಗೆ ಗ್ಯಾರೇಜಿನಲ್ಲಿ ನೋಡಿದ್ದ ನನಗೆ ಈ ವರದಿಯ ಬಗ್ಗೆ ಸಂಶಯ ಮೂಡಿತ್ತು. ಅಲ್ಲದೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ದಿಲ್ಲಿಯಲ್ಲಿ ಬಂಧಿತರ ಫೋಟೊಗೂ ರಫೀಕ್ ಖಾನ್‌ಗೂ ತಾಳೆ ಆಗದಿರುವುದನ್ನು ಗಮನಿಸಿದೆ. ಈ ಹಿನ್ನೆಲೆಯಲ್ಲಿ ನಾನು ಈ ಸುದ್ದಿಯ ಬೆನ್ನು ಬಿದ್ದೆ. ಪೊಲೀಸರನ್ನು ಸಂಪರ್ಕಿಸಿದಾಗ ಬಂಧಿತ ಉಗ್ರರಲ್ಲಿ ರಫೀಕ್ ಖಾನ್ ಇರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಬಂದಿಲ್ಲ. ಪತ್ರಿಕೆಗಳ ವರದಿಯ ಹಿನ್ನೆಲೆಯಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಡಿವೈಎಸ್ಪಿ ಹೇಳಿದರು. ಈ ನಡುವೆ ರಫೀಕ್ ಖಾನ್ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಬೇರೊಂದು ಪ್ರಕರಣದಲ್ಲಿ ಬಂಧಿತರಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ಮರುದಿನ ಮತ್ತೆ ಸುದ್ದಿ ಪ್ರಕಟವಾಯಿತು. ಈ ಬಗ್ಗೆಯೂ ವಿಚಾರಿಸಿದಾಗ ರಫೀಕ್ ತಮ್ಮ ಊರಿಗೆ ತೆರಳಿದ್ದು, ಬಂಧನ ಕ್ಕೊಳಗಾಗಿಲ್ಲ ಎಂದು ತಿಳಿದುಬಂತು. ಪತ್ರಿಕೆಗಳು ಕೂಲಂಕಷವಾಗಿ ಪರಿಶೀಲಿಸದೆ ಮಾಡಿರುವ ವರದಿಯಿಂದಾಗಿ ಅಮಾಯಕ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಇಂತಹ ವರದಿಗಳಿಂದಾಗಿ ಮಾಧ್ಯಮಗಳ ಬಗ್ಗೆ ಜನರು ಅನುಮಾನದಿಂದ ನೋಡುವಂತಾಗಿದೆ.

ಸಿದ್ದೀಕ್ ನೀರಾಜೆ, ಪತ್ರಕರ್ತರು

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News