ಕೇಂದ್ರದಿಂದ ಶೀಘ್ರದಲ್ಲಿ ನೂತನ ಸಹಕಾರಿ ನೀತಿ: ಗೃಹ ಸಚಿವ ಅಮಿತ್ ಶಾ

Update: 2021-09-25 18:26 GMT

ಹೊಸದಿಲ್ಲಿ, ಸೆ. 25: ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾನಿಲಯದೊಂದಿಗೆ ಸಮಾನ ಸಹಕಾರಿ ಸೇವಾ ಕೇಂದ್ರಗಳು, ರಾಷ್ಟ್ರೀಯ ಡಾಟಾಬೇಸ್ ಅನ್ನು ಸ್ಥಾಪಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಸಹಕಾರಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಪ್ರತಿಪಾದಿಸಿದ ಅಮಿತ್ ಶಾ, ಕೇಂದ್ರ ಸರಕಾರ ಶೀಘ್ರ ನೂತನ ಸಹಕಾರಿ ನೀತಿಯನ್ನು ಹೊರ ತರಲಿದೆ ಹಾಗೂ ಸಹಕಾರಿ ಚಳವಳಿಯನ್ನು ಸುದೃಢಗೊಳಿಸಲು ರಾಜ್ಯಗಳೊಂದಿಗೆ ಸಮನ್ವತೆಯಿಂದ ಕಾರ್ಯ ನಿರ್ವಹಿಸಲಿದೆ ಎಂದರು.

ಮುಂದಿನ ಐದು ವರ್ಷಗಳಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸೊಸೈಟಿಗಳ (ಪಿಎಸಿ) ಸಂಖ್ಯೆಯನ್ನು 3 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಅವರು ಘೋಷಿಸಿದರು. ಪ್ರಸ್ತುತ 65,000 ಪ್ರಾಥಮಿಕ ಕೃಷಿ ಸಹಕಾರಿ ಸೊಸೈಟಿಗಳಿವೆ. ಇಲ್ಲಿ ಮೊದಲ ಸಹಕಾರಿ ಸಂಘಗಳ ಸಮ್ಮೇಳನದಲ್ಲಿ ಮಾತನಾಡಿದ ಅಮಿತ್ ಶಾ ಮಾತನಾಡಿದರು. ಸಹಕಾರಿ ಸಚಿವಾಲಯವನ್ನು ಈ ವರ್ಷ ಜುಲೈಯಲ್ಲಿ ಆರಂಭಿಸಲಾಗಿದೆ. ವಿಭಿನ್ನ ಸಹಕಾರಿ ಸಂಘಗಳ 2,100ಕ್ಕೂ ಅಧಿಕ ಪ್ರತಿನಿಧಿಗಳು ಹಾಗೂ 6 ಕೋಟಿಗೂ ಅಧಿಕ ಆನ್‌ಲೈನ್ ಭಾಗೀದಾರರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸಹಕಾರಿ ರಾಜ್ಯದ ವಿಷಯವಾದುದರಿಂದ ಕೇಂದ್ರ ಸರಕಾರ ಈ ಹೊಸ ಸಚಿವಾಲಯವನ್ನು ಯಾಕೆ ಆರಂಭಿಸಿತು ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News