​ಭಾರತದಿಂದ ಬರುವ ವಿಮಾನಗಳಿಗೆ ಕೆನಡಾ ನಿರ್ಬಂಧ ತೆರವು

Update: 2021-09-26 03:33 GMT

ಹೊಸದಿಲ್ಲಿ: ಜೆಸ್ಟಿನ್ ಟ್ರುಡೇವ್ ನೇತೃತ್ವದ ಕೆನಡಾ ಸರ್ಕಾರ, ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳಿಗೆ ಹೇರಿದ್ದ ಒಂದು ತಿಂಗಳ ಅವಧಿಯ ನಿಷೇಧವನ್ನು ರವಿವಾರ ತೆರವುಗೊಳಿಸಿದೆ.

ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಕೊರೋನ ವೈರಸ್ ಸೋಂಕಿನ ಶಿಷ್ಟಾಚಾರಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಇದಕ್ಕೂ ಮುನ್ನ ಭಾರತದಿಂದ ಆಗಮಿಸುವ ಎಲ್ಲ ವಾಣಿಜ್ಯ ವಿಮಾನಗಳಿಗೆ ಸೆಪ್ಟೆಂಬರ್ 26ವರೆಗೆ ನಿಷೇಧ ಹೇರಲಾಗಿತ್ತು. ಇದೀಗ ಪ್ರಮಾಣಿತ ಪ್ರಯೋಗಾಲಯದಿಂದ ಕೋವಿಡ್-19 ನೆಗೆಟಿವ್ ವರದಿಯನ್ನು ಹೊಂದಿರುವುದು ಸೇರಿದಂತೆ ಕೆಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಭಾರತದಿಂದ ಪ್ರಯಾಣಿಕರು ಆಗಮಿಸಬಹುದಾಗಿದೆ. 

ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಏರ್ ಕೆನಡಾ ಭಾರತಕ್ಕೆ ವಿಮಾನಯಾನ ಸೇವೆಯನ್ನು ಸೆಪ್ಟೆಂಬರ್ 27 (ಸೋಮವಾರ) ಆರಂಭಿಸುವ ನಿರೀಕ್ಷೆ ಇದೆ. ಏರ್ ಇಂಡಿಯಾ ಸೆಪ್ಟೆಂಬರ್ 30ರಂದು ಕೆನಡಾಗೆ ವಿಮಾನಯಾನ ಸೇವೆ ಆರಂಭಿಸಲಿದೆ ಎಂದು ತಿಳಿದುಬಂದಿದೆ.

ಕೆನಡಾ ತನ್ನ ನಿರ್ಬಂಧ ಹೇರುವ ಮುನ್ನ "ಅಪಾಯ ಸಾಧ್ಯತೆ ಆಧರಿತ ಮತ್ತು ಅವಲೋಕನ ದೃಷ್ಟಿಕೋನ" ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳುವುದಾಗಿ ಹೇಳಿತ್ತು. ಇದಕ್ಕೂ ಮುನ್ನ ಉಭಯ ಏರ್‌ಲೈನ್‌ಗಳು, ಏರ್‌ಬಬುಲ್ ಒಪ್ಪಂದದ ಅನ್ವಯ ಪ್ರತಿದಿನ ಉಭಯ ದೇಶಗಳ ನಡುವೆ ವಿಮಾನಯಾನ ಸೇವೆ ಒದಗಿಸುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News