ಹೊಸ ಕೃಷಿ ಕಾಯ್ದೆ ವಿರೋಧಿಸಿ ಇಂದು ರೈತರ ’ಪಾಣಿಪತ್ ಕದನ’

Update: 2021-09-26 04:15 GMT
ಫೈಲ್ ಫೋಟೊ 

ಹೊಸದಿಲ್ಲಿ: ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ರವಿವಾರ ಹರ್ಯಾಣದ ಪಾಣಿಪತ್‌ನಲ್ಲಿ ಬೃಹತ್ ರ್ಯಾಲಿ ಆಯೋಜಿಸಿದ್ದಾರೆ. ರಾಕೇಶ್ ಟಿಕಾಯತ್ ಸೇರಿದಂತೆ ಅಗ್ರ ರೈತ ಮುಖಂಡರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವರು.

ಕರ್ನಲ್ ಮೂಲದ ರೈತ ಮುಖಂಡ ರತನ್ ಮಾನ್ ಈಗಾಗಲೇ ಸಿದ್ಧತೆಗಳನ್ನು ಅವಲೋಕಿಸಿದ್ದು, "ರೈತ ವಿರೋಧಿ ಕಾನೂನುಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಈ ರ್ಯಾಲಿ ಆಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಭಾರತ್ ಬಂದ್ ಹಿನ್ನೆಲೆಯಲ್ಲಿ ಮುಖಂಡರು ಪ್ರಮುಖ ಸಂದೇಶ ನೀಡಲಿದ್ದಾರೆ ಎಂದು ವಿವರಿಸಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಹತ್ತು ತಿಂಗಳು ಪೂರೈಸುವ ಹಿನ್ನೆಲೆಯಲ್ಲಿ ಸೋಮವಾರ (ಸೆಪ್ಟೆಂಬರ್ 27) ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.

ಭಾರತೀಯ ಕಿಸಾನ್ ಯೂನಿಯನ್‌ನ ಹರ್ಯಾಣ ಘಟಕ ರ್ಯಾಲಿ ಆಯೋಜಿಸಿದ್ದು, ಸಂಯುಕ್ತ ಕಿಸಾನ್ ಮೋರ್ಚಾದ ಹಲವು ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರ್ನಲ್‌ನಲ್ಲಿ ಆಗಸ್ಟ್ 28ರಂದು ರೈತರ ಮೇಲೆ ನಡೆಸ ಲಾಠಿಪ್ರಹಾರವನ್ನು ಖಂಡಿಸಿ ಮೂರು ದಿನಗಳ ಪ್ರತಿಭಟನೆಯನ್ನು ಕೈಗೊಂಡ ಬಳಿಕ ಇದು ರೈತರು ಕೈಗೊಳ್ಳುತ್ತಿರುವ ಮೊದಲ ಪ್ರತಿಭಟನೆಯಾಗಿದೆ.

ಸೋಮವಾರ ನಡೆಯುವ ಭಾರತ ಬಂದ್‌ಗೆ ದೇಶದ ಜನತೆ ಕೈಜೋಡಿಸಬೇಕು ಎಂದು ಎಸ್‌ಕೆಎಂ ಮನವಿ ಮಾಡಿದೆ. ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಉಳಿಸಿಕೊಳ್ಳುವ ಸಲುವಾಗಿ ರಾಜಕೀಯ ಪಕ್ಷಗಳು ರೈತರ ನಿಲವುನ್ನು ಬೆಂಬಲಿಸಬೇಕು ಎಂದು ಕರೆ ನೀಡಿದೆ. ಸೋಮವಾರ ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಬಂದ್ ಆಚರಿಸಲು ಎಸ್‌ಕೆಎಂ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News