ಉ.ಪ್ರ: ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳ ತಟ್ಟೆಯನ್ನು ಪ್ರತ್ಯೇಕವಾಗಿರಿಸುತ್ತಿದ್ದ ಮುಖ್ಯಶಿಕ್ಷಕಿ, ಸಿಬ್ಬಂದಿ ಅಮಾನತು

Update: 2021-09-26 09:36 GMT

ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳು ಊಟ ಮಾಡಿದ ತಟ್ಟೆಗಳನ್ನು ಪ್ರತ್ಯೇಕವಾಗಿ ಇರಿಸಲು ಆದೇಶ ನೀಡಿ ಅದರಂತೆ ನಡೆಸಿಕೊಂಡು ಬರುತ್ತಿದ್ದ ಪ್ರಥಮಿಕ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶಾಲೆಯ ಕೆಲಸಗಾರರು ಅವರು ತಿಂದ ತಟ್ಟೆಗಳನ್ನು ಮುಟ್ಟಲು ಹಿಂಜರಿಯುತ್ತಿದ್ದರು ಎಂದು indianexpress.com ವರದಿ ಮಾಡಿದೆ.

ಉತ್ತರಪ್ರದೇಶದ ಮಣಿಪುರಿ ಜಿಲ್ಲೆಯ ದೌಡಾಪುರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಅಲ್ಲಿಲ್ಲಿ ಕಲಿಯುತ್ತಿರುವ ಒಟ್ಟು ೮೦ ಮಕ್ಕಳಲ್ಲಿ ೬೦ ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಈ ಶಾಲೆಯದ್ದೆನ್ನಲಾದ ವೀಡಿಯೊವೊಂದು ಕೆಲ ದಿನಗಳಿಂದ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. 

ಬಹುತೇಕ ವಿದ್ಯಾರ್ಥಿಗಳು ಬಳಸಿದ ಪಾತ್ರೆಗಳನ್ನು ನಾವು ಮುಟ್ಟುವುದಿಲ್ಲ ಎಂದು ಹೇಳಿದ ಇಬ್ಬರು ಅಡುಗೆಯವರನ್ನೂ ಸೇವೆಯಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನೂತನವಾಗಿ ಆಯ್ಕೆಯಾದ ಸರಪಂಚ್‌ ಮಂಜುದೇವಿ ಎಂಬವರ ಪತಿ ಸಹಾಬ್‌ ಸಿಂಗ್‌ ಎಂಬವರು ಈ ಬಗ್ಗೆ ತಿಂಗಳಾರಂಭದಲ್ಲೇ ಅಧಿಕೃತರಿಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಜಾತಿ ತಾರತಮ್ಯದ ಕುರಿತು ಹಲವು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಅಧಿಕೃತರಿಗೆ ದೂರು ಸಲ್ಲಿಸಲಾಗಿತ್ತು.

ಮುಖ್ಯ ಅಭಿವೃದ್ಧಿ ಅಧಿಕಾರಿ ಕಮಲ್‌ ಸಿಂಗ್‌  ಹಾಗೂ ಇನ್ನಿತರ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿಗಳ ಪಾತ್ರಗಳನ್ನು ಮುಟ್ಟಲು ನಿರಾಕರಿಸುತ್ತಿರುವುದು ಹಾಗೂ ಜಾತಿ ನಿಂದನೆ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News