ತಾರತಮ್ಯವನ್ನು ತಗ್ಗಿಸಲು ಸೂಕ್ತವಾದುದನ್ನು ಮಾಡುತ್ತೇವೆ: ಜಾತಿಯಾಧಾರಿತ ಗಣತಿ ಕುರಿತು ಒಡಿಶಾ ಸಿಎಂ

Update: 2021-09-26 16:58 GMT

ಹೊಸದಿಲ್ಲಿ,ಸೆ.26: ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಜಾತಿಯಾಧಾರಿತ ಗಣತಿ ನಡೆಸುವುದನ್ನು ಅಕ್ಷರಶಃ ತಳ್ಳಿಹಾಕಿರುವ ಹಿನ್ನೆಲೆಯಲ್ಲಿ ಒಡಿಶಾದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು,ರಾಜ್ಯದಲ್ಲಿ ತಾರತಮ್ಯವನ್ನು ಕಡಿಮೆ ಮಾಡಲು ತನ್ನ ಜನರಿಗೆ ಸೂಕ್ತವಾಗುವ ಯಾವದೇ ಕ್ರಮವನ್ನು ತನ್ನ ಸರಕಾರವು ತೆಗೆದುಕೊಳ್ಳಲಿದೆ ಎಂದು ರವಿವಾರ ಇಲ್ಲಿ ತಿಳಿಸಿದರು.

 ಗೃಹಸಚಿವ ಅಮಿತ್ ಶಾ ಅವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಗಮಿಸಿದ್ದ ಪಟ್ನಾಯಕ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ,‘ನಮ್ಮ ಜನರಿಗೆ ಯಾವುದು ಸೂಕ್ತವೋ ಅದನ್ನು ನಾವು ಮಾಡುತ್ತೇವೆ. ನಮ್ಮ ಸರಕಾರವು ಅದಕ್ಕೆ ಬದ್ಧವಾಗಿದೆ ಮತ್ತು ನಾವು ಅದಕ್ಕಾಗಿ ಹೋರಾಡುತ್ತಿದ್ದೇವೆ ’ಎಂದು ಹೇಳಿದರು. ಒಡಿಶಾದಲ್ಲಿ ಜಾತಿಯಾಧಾರಿತ ಗಣತಿಯನ್ನು ನಡೆಸುವ ಕುರಿತು ಅವರ ನಡೆಯ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು.
‘ನಮ್ಮ ರಾಜ್ಯದಲ್ಲಿ ಶೇ.94ರಷ್ಟು ಜನರು ಜಾತಿ ತಾರತಮ್ಯದ ಬಲಿಪಶುಗಳಾಗಿದ್ದಾರೆ. ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ನಾವು ಇತರ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದ್ದೇವೆ.ಜನರ ಆಹಾರ ಪದ್ಧತಿ,ಆರೋಗ್ಯ ಮತ್ತು ಶಿಕ್ಷಣ ಮಾನದಂಡಗಳನ್ನು ಕಂಡುಕೊಳ್ಳಲು ನಾವು ನಮ್ಮ ಮಟ್ಟದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದೇವೆ. ಸರಕಾರವು ಅಧಿಕೃತ ದತ್ತಾಂಶಗಳನ್ನು ಒದಗಿಸದಿದ್ದರೆ ಸರ್ವೋಚ್ಚ ನ್ಯಾಯಾಲಯವು ಮೀಸಲಾತಿಯ ಮೇಲಿನ ಶೇ.50ರ ಮಿತಿಯನ್ನು ಸಡಿಲಿಸುವುದಿಲ್ಲ ಎಂದು ಪಟ್ನಾಯಕ್ ಕಳೆದ ತಿಂಗಳು ಹೇಳಿದ್ದರು.
ತಮ್ಮ ರಾಜ್ಯಗಳಲ್ಲಿ ಜಾತಿಯಾಧಾರಿತ ಗಣತಿಗಾಗಿ ಹಲವಾರು ಪ್ರತಿಪಕ್ಷ ನಾಯಕರು ಆಗ್ರಹಿಸಿದ್ದಾರೆ.
ಶನಿವಾರ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಎಸ್ಪಿ ಮುಖ್ಯಸ್ಥ ಅಖಿಲೇಶ ಯಾದವ ಅವರು,ಆಡಳಿತ ಪಕ್ಷವು ಒಬಿಸಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅವರ ಹಕ್ಕುಗಳನ್ನು ನೀಡಲು ಒಲವು ಹೊಂದಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News