ಆಂಧ್ರ, ಒಡಿಶಾ ಕರಾವಳಿಯತ್ತ ಗುಲಾಬ್ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭ

Update: 2021-09-26 18:18 GMT

 ಹೊಸದಿಲ್ಲಿ,ಸೆ. 27: ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿ ಪ್ರದೇಶಗಳ ಮೇಲೆ ಗುಲಾಬ್ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭಗೊಂಡಿದೆಯೆಂದು ಹವಾಮಾನ ಇಲಾಖೆ ರವಿವಾರ ಸಂಜೆ ಟ್ವೀಟ್ ಮಾಡಿದೆ. ಮುಂದಿನ ಮೂರು ತಾಸುಗಳಲ್ಲಿ ತಾಸಿಗೆ 96 ಕಿ.ಮೀ. ವೇಗದಲ್ಲಿ ಚಂಡಮಾರುತವು ಆಂಧ್ರದ ಕಳಿಂಗಪಟ್ಟಣಂ ಹಾಗೂ ಒಡಿಶಾದ ಗೋಪಾಲಪುರದ ಕರಾವಳಿಯನ್ನು ಹಾದುಹೋಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಣೆಯೊಂದರಲ್ಲಿ ತಿಳಿಸಿದೆ. ರವಿವಾರ ಮಧ್ಯರಾತ್ರಿಯ ವೇಳೆಗೆ ಗುಲಾಬ್ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.

‘‘ ಆಂಧ್ರದ ಉತ್ತರ ಕರಾವಳಿ ಹಾಗೂ ಅದಕ್ಕೆ ತಾಗಿಕೊಂಡಿರುವ ಒಡಿಶಾದ ದಕ್ಷಿಣ ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭಗೊಂಡಿದೆ ’’ ಎಂದು ಅದು ಹೇಳಿದೆ.
 
ಕಳೆದ ಮೇ ತಿಂಗಳಲ್ಲಿ ಭಾರೀ ವಿನಾಶವನ್ನು ಸೃಷ್ಟಿಸಿದ ಯಾಸ್ ಚಂಡಮಾರುತದ ಬಳಿಕ ಒಡಿಶಾ ಕರಾವಳಿಗೆ ಅಪ್ಪಳಿಸಲಿರುವ ಎರಡನೆ ಚಂಡಮಾರುತ ಗುಲಾಬ್ ಆಗಲಿದೆ. ಚಂಡಮಾರುತಕ್ಕೆ ತುತ್ತಾಗುವ ಅತ್ಯಧಿಕ ಅಪಾಯವಿರುವ ಗಂಜಾಂ, ಗಜಪತಿ, ಕಂಧಮಾಲ್, ಕೋರಾಪುಟ್, ರಾಯಗಢ,ನಬರಂಗಪುರ ಹಾಗೂ ಮಲ್ಕಾನ್ಗಿರಿ ಜಿಲ್ಲೆಗಳಲ್ಲಿ ಯಾವುದೇ ಸಾವು,ಹಾನಿ ಸಂಭವಿಸದಂತೆ ಮಾಡಲು ಭಾರೀ ಪ್ರಯತ್ನಗಳನ್ನು ನಡೆಸಲಾಗುತ್ತಿದೆಯೆಂದು ಅವರು ತಿಳಿಸಿದರು.

ಉತ್ತರ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಸಮುದ್ರದಲ್ಲಿ ಆರು ಮಂದಿ ಮೀನುಗಾರರಿದ್ದ ದೋಣಿಯೊಂದು ಭಾರೀ ಅಲೆಗಳ ನಡುವೆ ಸಮತೋಲನ ಕಳೆದುಕೊಂಡು ಬುಡಮೇಲಾಗಿದೆ. ಘಟನೆಯಲ್ಲಿ ಇಬ್ಬರು ಬೆಸ್ತರು ಸಮುದ್ರಪಾಲಾಗಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾನೆ. ಉಳಿದ ಮೂವರು ಮೀನುಗಾರರು ಸುರಕ್ಷಿತವಾಗಿ ಈಜಿ ತೀರವನ್ನು ತಲುಪಿದ್ದಾರೆ. ಒಡಿಶಾದ ವಿಕೋಪ ಕ್ಷಿಪ್ರ ಕಾರ್ಯಪಡೆಯ 42 ತಂಡಗಳು ಹಾಗೂ ರಾಷ್ಟ್ರೀಯ ವಿಕೋಪ ಪ್ರತಿಕ್ರಿಯಾ ತಂಡದ 24 ಸ್ಕ್ವಾಡ್ಗಳು ಮತ್ತು ಅಗ್ನಿಶಾಮಕದಳದ 100ಕ್ಕೂ ಅಧಿಕ ತಂಡಗಳನ್ನು ಈ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಚಂಡಮಾರುವು ಪ್ರದೇಶದಿಂದ ಹಾದುಹೋಗುವುದರಿಂದ ಜನರು ರವಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 10:00 ಗಂಟೆಯವರಗೆ ಮನೆಯೊಳಗೆ ಉಳಿದುಕೊಳ್ಳಬೇಕೆಂದು ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ಜನತೆಗೆ ಮನವಿ ಮಾಡಿದ್ದಾರೆಂದು ವಿಶೇಷ ಪರಿಹಾರ ಕಾರ್ಯಾಚರಣೆಗಳ ಆಯುಕ್ತ ಪಿ.ಕೆ. ಜೇನಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ಮೂರು ದಿನಗಳವರೆಗೆ ಸಮುದ್ರಪ್ರದೇಶವು ಅತ್ಯಂತ ಪ್ರಕ್ಷುಬ್ಧವಾಗಿರುವುದರಿಂದ ಒಡಿಶಾ, ಪಶ್ಚಿಮಬಂಗಾಳ ಹಾಗೂ ಆಂಧ್ರಪ್ರದೇಶದ ಮೀನುಗಾರರು ಬಂಗಾಳಕೊಲ್ಲಿ ಹಾಗೂ ಆಂಡಮಾನ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಂಡಮಾರುತದ ಪರಿಣಾಮವಾಗಿ ಭಾರೀ ಮಳೆ ಸುರಿಯುತ್ತಿದ್ದು ಭಾರತೀಯ ಹವಾಮಾನ ಇಲಾಖೆಯು ರವಿವಾರ ಬೆಳಗ್ಗೆ ಆಂಧ್ರ ಹಾಗೂ ಒಡಿಶಾದ ಕರಾವಳಿಗಳಲ್ಲಿ ರೆಡ್ ಆಲರ್ಟ್ ಜಾರಿಗೊಳಿಸಿತ್ತು.

ಚಂಡಮಾರುತದಿಂದ ಸಂಭಾವ್ಯ ಹಾನಿಯನ್ನು ತಪ್ಪಿಸಲು ಒಜಿಶಾ ಸರಕಾರವು ಈಗಾಗಲೇ ಭಾರೀ ಸಂಖ್ಯೆಯಲ್ಲಿ ರಕ್ಷಣಾ ಕಾರ್ಯಾಚರಣಾ ಸಿಬ್ಬಂದಿಯನ್ನು ನಿಯೋಜಿಸಿದೆ. ರಾಜ್ಯದ ದಕ್ಷಿಣ ಭಾಗದ ಕರಾವಳಿ ಜಿಲ್ಲೆಗಳಲ್ಲಿನ ಸಮುದ್ರ ತೀರ ಪ್ರದೇಶಗಳಿಂದ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯ ಬಗ್ಗೆ ನಿಗಾವಿರಿಸಿದ್ದು, ಚಂಡಮಾರುತದ ಹಾನಿ ತಪ್ಪಿಲು ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಂಧ್ರ ಹಾಗೂ ಒಡಿಶಾದ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ. ಪರಿಹಾರ ಕಾರ್ಯಾಚರಣೆಗೆ ಎಲ್ಲಾ ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News