ಮ್ಯಾನ್ಮಾರ್: ಪ್ರತಿಭಟನಾಕಾರರ ವಿರುದ್ಧ ಸೇನೆಯಿಂದ ವಾಯುದಾಳಿ; ಇಂಟರ್ನೆಟ್ ಸ್ಥಗಿತ

Update: 2021-09-27 15:29 GMT

ಸಾಂದರ್ಭಿಕ ಚಿತ್ರ

ಯಾಂಗಾನ್, ಸೆ.27: ಮ್ಯಾನ್ಮಾರ್ನ ಸಗಾಯಿಂಗ್ ವಲಯದಲ್ಲಿ ಸೇನಾಡಳಿತ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಸೇನೆಯು ವಾಯುದಾಳಿ ನಡೆಸಿದೆ. ಜೊತೆಗೆ ಕೆಲ ಜಿಲ್ಲೆಗಳಲ್ಲಿ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

‌ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿಯ ಮೂಲಕ ಮ್ಯಾನ್ಮಾರ್ನ ಆಡಳಿತವನ್ನು ಸೇನೆ ಕೈವಶ ಮಾಡಿಕೊಂಡಂದಿನಿಂದ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರುಸ್ಥಾಪನೆಗೆ ಆಗ್ರಹಿಸಿ ಮತ್ತು ಸೇನಾಡಳಿತವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಜೊತೆಗೆ ಸೇನೆಯ ವಿರುದ್ಧ ಹೋರಾಡಲು ಪೀಪಲ್ಸ್ ಡಿಫೆನ್ಸ್ ಫೋರ್ಸ್(ಜನತಾ ರಕ್ಷಣಾ ಪಡೆ-ಪಿಡಿಎಫ್) ಅಸ್ತಿತ್ವಕ್ಕೆ ಬಂದಿದೆ.

ಸಗಾಯಿಂಗ್ ಪ್ರದೇಶದ ಪಿನೆಲ್ಬು ಪ್ರದೇಶದಲ್ಲಿ ಪ್ರತಿಭಟನೆಯ ಬಳಿಕ ಸಂಘರ್ಷ ಆರಂಭವಾದಾಗ ಪಿಡಿಎಫ್ ಅನ್ನು ಗುರಿಯಾಗಿಸಿ ಸೇನೆಯಿಂದ ವಾಯುದಾಳಿ ನಡೆದಿದೆ ಎಂದು ಪಿಡಿಎಫ್ ಸದಸ್ಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
  
ಸೇನಾಡಳಿತವನ್ನು ವಿರೋಧಿಸುವವರು ಹಾಗೂ ಅಮಾನತುಗೊಂಡಿರುವ ಸಂಸತ್ ಸದಸ್ಯರು ಸೇರಿಕೊಂಡು ಮ್ಯಾನ್ಮಾರ್ನಲ್ಲಿ ‘ದಿ ನ್ಯಾಷನಲ್ ಯುನಿಟಿ ಗವರ್ನ್ಮೆಂಟ್ (ಎನ್ಯುಜಿ)’ ಎಂಬ ಹೆಸರಿನಲ್ಲಿ ಛಾಯಾ ಆಡಳಿತ ಸ್ಥಾಪಿಸಿದ್ದು ಈ ಆಡಳಿತದ ಬಹುತೇಕ ಪ್ರಮುಖರು ಭೂಗತರಾಗಿದ್ದುಕೊಂಡೇ ಸೇನೆಯ ವಿರುದ್ಧದ ಹೋರಾಟ ತೀವ್ರಗೊಳಿಸಿದ್ದಾರೆ. ಸೇನೆಯ ವಾಯುದಾಳಿಯಿಂದ ಎನ್ಯುಜಿಯ 25ಕ್ಕೂ ಅಧಿಕ ಯೋಧರು ಮೃತರಾಗಿದ್ದಾರೆ. ಆದರೆ ರಾಕೆಟ್ ಮೂಲಕ ಉಡಾಯಿಸಬಹುದಾದ ಗ್ರೆನೇಡ್ಗಳು, ಇತರ ಶಸ್ತ್ರಾಸ್ತ್ರಗಳ ಬೃಹತ್ ದಾಸ್ತಾನನ್ನು ಎನ್ಯುಜಿ ಪಡೆ ವಶಕ್ಕೆ ಪಡೆದಿದೆ ಎಂದು ಎನ್ಯುಜಿ ಮೂಲಗಳು ಹೇಳಿವೆ.


ತೀವ್ರ ಪ್ರತಿಭಟನೆ ನಡೆಯುತ್ತಿರುವ ಚಿನ್ ರಾಜ್ಯ ಮತ್ತು ಮಾಗ್ವೆ ಪ್ರದೇಶದ 11 ಜಿಲ್ಲೆಗಳಲ್ಲಿ ಗುರುವಾರದಿಂದ ಇಂಟರ್ನೆಟ್ ವ್ಯವಸ್ಥೆಯನ್ನು ಸೇನಾಡಳಿತ ಸ್ಥಗಿತಗೊಳಿಸಿದೆ. 


ಮ್ಯಾನ್ಮಾರ್ನಲ್ಲಿ ಸೇನಾ ಕ್ರಾಂತಿಯ ಬಳಿಕ ಇಂಟರ್ನೆಟ್ ಸ್ವಾತಂತ್ರ್ಯ 14 ಅಂಕಗಳಷ್ಟು ಕುಸಿದಿದ್ದು ಇದು ಜಾಗತಿಕವಾಗಿ ಗರಿಷ್ಟ ವಾರ್ಷಿಕ ಕುಸಿತವಾಗಿದೆ ಎಂದು ಅಮೆರಿಕ ಮೂಲದ ಪ್ರಜಾಪ್ರಭುತ್ವ ನಿಗಾ ಸಂಸ್ಥೆ ‘ಫ್ರೀಡಂ ಹೌಸ್’ ಕಳೆದ ವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News