ಅಧಿಕಾರದ ಆಟದಲ್ಲಿ ಯುವವೈದ್ಯರನ್ನು ಫುಟ್ ಬಾಲ್ ನಂತೆ ನೋಡಬೇಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2021-09-27 16:39 GMT

ಹೊಸದಿಲ್ಲಿ,ಸೆ.27: ಸ್ನಾತಕೋತ್ತರ ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳ ಪ್ರವೇಶಕ್ಕಾಗಿ ನೀಟ್-ಎಸ್ಎಸ್ 2021ರ ಪರೀಕ್ಷಾ ಮಾದರಿಯಲ್ಲಿ ಕೊನೇಕ್ಷಣದ ಬದಲಾವಣೆಗಳನ್ನು ಮಾಡಿರುವುದಕ್ಕಾಗಿ ಸೋಮವಾರ ಕೇಂದ್ರವನ್ನು ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ಅಧಿಕಾರದ ಆಟದಲ್ಲಿ ಯುವವೈದ್ಯರನ್ನು ಕಾಲ್ಚೆಂಡುಗಳಂತೆ ನಡೆಸಿಕೊಳ್ಳಬೇಡಿ ಎಂದು ಹೇಳಿದೆ. 

ಸಂಬಂಧಿತ ಅಧಿಕಾರಿಗಳ ಸಭೆಯನ್ನು ನಡೆಸುವಂತೆ ಮತ್ತು ಬದಲಾವಣೆಗಳ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗೆ ಅ.4ರಂದು ಉತ್ತರವನ್ನು ಸಲ್ಲಿಸುವಂತೆ ಅದು ಸರಕಾರಕ್ಕೆ ಸೂಚಿಸಿದೆ.

ಅವಸರದ ಬದಲಾವಣೆಗಳನ್ನು ಪ್ರಶ್ನಿಸಿ 41 ಸ್ನಾತಕೋತ್ತರ ವೈದ್ಯರು ಸಲ್ಲಿಸಿರುವ ಅರ್ಜಿಯು,ಈ ಬದಲಾವಣೆಗಳನ್ನು ಜನರಲ್ ಮೆಡಿಸಿನ್ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ವಾದಿಸಿದೆ. 2018ರಲ್ಲಿ ನೀಟ್ ಎಸ್ಎಸ್ ಜನರಲ್ ಮೆಡಿಸಿನ್ ಗೆ ಸಂಬಂಧಿಸಿದ ಶೇ.40 ಮತ್ತು ಸೂಪರ್ ಸ್ಪೆಷಾಲಿಟಿಗೆ ಸಂಬಂಧಿಸಿದ ಶೇ.60 ಪ್ರಶ್ನೆಗಳನ್ನು ಒಳಗೊಂಡಿತ್ತು. ಆದರೆ ಈ ಸಲ ಎಲ್ಲ ಪ್ರಶ್ನೆಗಳೂ ಜನರಲ್ ಮೆಡಿಸಿನ್ ಗೆ ಸಂಬಂಧಿಸಿವೆ.

   ನೀಟ್-ಎಸ್ಎಸ್ 2021ನ್ನು 2021ನ.13 ಮತ್ತು 14ರಂದು ನಡೆಸಲಾಗುವುದು ಎಂದು 2021,ಜು.23ರಂದು ಪ್ರಕಟಿಸಲಾಗಿತ್ತು,ಆದರೆ ಮಾದರಿಯಲ್ಲಿ ಬದಲಾವಣೆಗಳನ್ನು ಒಂದು ತಿಂಗಳಿಗೂ ಹೆಚ್ಚಿನ ಅವಧಿಯ ಬಳಿಕ ಆ.31ರಂದು ಪರೀಕ್ಷಗೆ ಕೇವಲ ಎರಡು ತಿಂಗಳುಗಳು ಬಾಕಿಯಿದ್ದಾಗ ಬಹಿರಂಗಗೊಳಿಸಲಾಗಿತ್ತು ಎಂದು ತಿಳಿಸಿರುವ ಅರ್ಜಿಯು, ಆಕಾಂಕ್ಷಿಗಳು ಕಳೆದ ಮೂರು ವರ್ಷಗಳಿಂದಲೂ ಹಳೆಯ ಮಾದರಿಗಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದೆ.

ಸೋಮವಾರ ವಿಚಾರಣೆ ಸಂದರ್ಭದಲ್ಲಿ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಗಳನ್ನು ತರುವ ಅಂತಹ ತುರ್ತು ಅಗತ್ಯವೇನಿತ್ತು ಎಂದು ನ್ಯಾಯಮೂರ್ತಿಗಳಾದ ಡಿ.ವಿ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ಸರಕಾರವನ್ನು ಪ್ರಶ್ನಿಸಿತು.

‘ಈ ಯುವವೈದ್ಯರನ್ನು ಅಧಿಕಾರದ ಆಟದಲ್ಲಿ ಕಾಲ್ಚೆಂಡುಗಳಂತೆ ನಡೆಸಿಕೊಳ್ಳಬೇಡಿ. ನಾವು ಈ ವೈದ್ಯರನ್ನು ಸಂವೇದನಾರಹಿತ ಅಧಿಕಾರಿಗಳ ಅಧೀನರನ್ನಾಗಿಸಲು ಸಾಧ್ಯವಿಲ್ಲ. ನಿಮ್ಮನ್ನು ನೀವು ತಿದ್ದಿಕೊಳ್ಳಿ. ಯಾರೋ ಅಧಿಕಾರದಲ್ಲಿದ್ದಾರೆ ಎಂಬ ಮಾತ್ರಕ್ಕೆ ಬೇಕಾಬಿಟ್ಟಿಯಾಗಿ ಅಧಿಕಾರವನ್ನು ಚಲಾಯಿಸುವಂತಿಲ್ಲ ’ ಎಂದು ನ್ಯಾ.ಚಂದ್ರಚೂಡ್ ಹೇಳಿದರು.

ರಾಷ್ಟ್ರೀಯ ವೈದ್ಯಕೀಯ ಆಯೋಗವೇನು ಮಾಡುತ್ತಿದೆ ಎಂದು ಪ್ರಶ್ನಿಸಿದ ನ್ಯಾಯಾಲಯವು,ಈ ವಿಷಯದಲ್ಲಿ ವೈದ್ಯರ ಬದುಕಿನ ಪ್ರಶ್ನೆಯಿದೆ ಎಂದು ಹೇಳಿತು.
ಅವರ ವೃತ್ತಿಜೀವನಕ್ಕೆ ಇದು ಮಹತ್ವದ್ದಾಗಿದೆ. ನೀವು ಕೊನೇಕ್ಷಣದಲ್ಲಿ ಬದಲಾವಣೆಗಳನ್ನು ತರುವಂತಿಲ್ಲ. ಈ ಬದಲಾವಣೆಗಳಿಂದ ಈ ಯುವವೈದ್ಯರು ಗೊಂದಲಕ್ಕೊಳಗಾಗಬಹುದು ಎಂದು ನ್ಯಾ.ನಾಗರತ್ನಾ ಹೇಳಿದರು.

ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಿಂಗಳುಗಳಿಂದಲೇ ಸಿದ್ಧತೆಯಲ್ಲಿ ತೊಡಗಿರುತ್ತಾರೆ ಎಂದು ಹೇಳಿದ ನ್ಯಾಯಾಲಯವು,ಬದಲಾವಣೆಗಳನ್ನು ಈಗಲೇ ಜಾರಿಗೊಳಿಸುವ ಬದಲು ಮುಂದಿನ ವರ್ಷ ಏಕಾಗುವುದಿಲ್ಲ ಎಂದು ಪ್ರಶ್ನಿಸಿತು.
ಯುವವೈದ್ಯರೊಂದಿಗೆ ಪ್ರಜ್ಞಾಪೂರ್ವಕವಾಗಿ ವ್ಯವಹರಿಸಿ ಎಂದು ನ್ಯಾ.ಚಂದ್ರಚೂಡ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News