ಭಾರತ ಬಂದ್ ಗೆ ವ್ಯಾಪಕ ಬೆಂಬಲ: ದಿಲ್ಲಿ, ಪಂಜಾಬ್, ಕೇರಳ, ಹರ್ಯಾಣದಲ್ಲಿ ಬಂದ್ ಯಶಸ್ವಿ

Update: 2021-09-27 17:39 GMT

ಹೊಸದಿಲ್ಲಿ, ಸೆ.27: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಭಾರತ ಬಂದ್ಗೆ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಂಜಾಬ್, ಹರ್ಯಾಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ರೈತರು ಹೆದ್ದಾರಿ ಹಾಗೂ ರೈಲು ಸಂಚಾರಕ್ಕೆ ತಡೆಯೊಡ್ಡಿದರು. ಚಂಡೀಗಢ, ದಿಲ್ಲಿ ಸಹಿತ ಅನೇಕ ನಗರಗಳಲ್ಲಿ ಮಾರುಕಟ್ಟೆಗಳು ಹಾಗೂ ಕಚೇರಿಗಳು ಮುಚ್ಚಲ್ಪಟ್ಟಿದ್ದವು. ದೇಶಾದ್ಯಂತ ರೈತರು, ಕಾರ್ಮಿಕ ಸಂಘಟನೆಗಳಿಂದ ಬೃಹತ್ ರ‍್ಯಾಲಿಗಳು ನಡೆದವು. ಬಂದ್ ಶಾಂತಿಯುತವಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಸೋಮವಾರ ಬೆಳಗ್ಗೆ 6:00 ಗಂಟೆಯಿಂದ ಸಂಜೆ 4:00 ಗಂಟೆ ವರೆಗೆ ನಡೆದ ಭಾರತ ಬಂದ್ಗೆ ಕಾಂಗ್ರೆಸ್, ಎಡಪಕ್ಷಗಳು, ಅಕಾಲಿದಳ, ವೈಎಸ್ಆರ್ ಕಾಂಗ್ರೆಸ್, ಟಿಎಂಸಿ, ಆಪ್, ಡಿಎಂಕೆ, ಬಿಎಸ್ಪಿ, ಎಸ್ಪಿ, ಆರ್ಜೆಡಿ ಸಹಿತ ಹಲವಾರು ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು. ವಿವಿಧ ಕಾರ್ಮಿಕ ಒಕ್ಕೂಟಗಳು ಕೂಡಾ ಬಂದ್ ನಲ್ಲಿ ಪಾಲ್ಗೊಂಡಿದ್ದವು. ಹೊಸದಿಲ್ಲಿಯ ದಿಲ್ಲಿ-ಮೇರಠ್ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಪ್ರತಿಭಟನಾ ನಿರತ ರೈತರು ರಾಸ್ತಾ ರೋಕೋ ನಡೆಸಿದ್ದರಿಂದ ಆನಂದ್ ವಿಹಾರ ಪ್ರದೇಶದಲ್ಲಿ ವಾಹನ ಸಂಚಾರ ಹಲವು ತಾಸುಗಳವರೆಗೆ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಉಂಟಾಗಿತ್ತೆಂದು ವರದಿಗಳು ತಿಳಿಸಿವೆ.

ದೇಶಾದ್ಯಂತ ಬಂದ್ ಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆಯೆಂದು 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ. ಭಾರತ ಬಂದ್ ಸಂಪೂರ್ಣ ಯಶಸ್ವಿಯಾಗಿದೆಯೆಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ. ‘‘ಪ್ರತಿಭಟನೆ ಸಂದರ್ಭ ಆನ್ಲೈನ್ನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೈತರಿಗೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಬೆಂಬಲವಿದೆ’ ಎಂಬುದನ್ನು ಈ ಬಂದ್ ನಿರೂಪಿಸಿದೆ ಎಂದರು.

ವಿವಾದಾತ್ಮಕ ಕೃಷಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿ, ಒಂದು ವರ್ಷ ತುಂಬಿದ ಸಂದರ್ಭದಲ್ಲೇ ಭಾರತ ಬಂದ್ ಗೆ ಕರೆ ಎಸ್ಕೆಎಂ ಕರೆ ನೀಡಿತ್ತು. ಕಳೆದ ಹತ್ತು ತಿಂಗಳುಗಳಿಂದ ರೈತರು ಬೀದಿಗಳಲ್ಲಿದ್ದಾರೆ.ಆದರೆ ಕುರುಡು ಹಾಗೂ ಕಿವುಡ ಸರಕಾರಕ್ಕೆ ಇದ್ಯಾವುದೂ ಕಾಣಿಸುತ್ತಿಲ್ಲ ಹಾಗೂ ಕೇಳಿಸುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸದೆ ಬೇರೆ ದಾರಿಯೇ ಇಲ್ಲ. ಕಾಯ್ದೆಯನ್ನು ವಾಪಸ್ ತೆಗೆದುಕೊಂಡಲ್ಲಿ ಮಾತ್ರವೇ ನಾವು ಮನೆಗೆ ಮರಳುವೆವು ಎಂದು ತಾನು ಸ್ಪಷ್ಟವಾಗಿ ಹೇಳುವುದಾಗಿ ಅವರು ತಿಳಿಸಿದರು.

ಪಂಜಾಬ್,ಹರ್ಯಾಣ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಭಾರತ ಬಂದ್ಗೆ ವ್ಯಾಪಕ ಬೆಂಬಲ ದೊರೆತಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು. ಯಾವುದೇ ಸಾರ್ವಜನಿಕ ಸಾರಿಗೆ, ಬಸ್ಗಳು ಹಾಗೂ ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ಉಭಯ ರಾಜ್ಯಗಳ ಜಂಟಿ ರಾಜಧಾನಿಯಾದ ಚಂಡೀಗಢದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿತ್ತಾದರೂ, ಹೆಚ್ಚಿನ ಕಡೆಗಳಲ್ಲಿ ಅಂಗಡಿ, ಮುಂಗಟ್ಟುಗಳು ಮುಚ್ಚುಗಡೆಗೊಂಡಿದ್ದವು.

ಉತ್ತರ ರೈಲ್ವೆ ವಲಯಕ್ಕೆ ಸೇರಿದ 20ಕ್ಕೂ ಅಧಿಕ ಸ್ಥಳಗಳಲ್ಲಿ ರೈಲ್ವೆ ಹಳಿಗಳಲ್ಲಿ ರೈತರು ಧರಣಿ ಕುಳಿತು ರೈಲುಸಂಚಾರಕ್ಕೆ ತಡೆಯೊಡ್ಡಿದರು. ಇಂದು ಬೆಳಗ್ಗೆ ಕನಿಷ್ಠ 25 ರೈಲುಗಳ ಸಂಚಾರ ಬಾಧಿತವಾಗಿವೆಯೆಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರ ಹಾಗೂ ಪಶ್ಚಿಮಬಂಗಾಳದ ಕೆಲವೆಡೆಯೂ ರೈಲು ಸಂಚಾರಕ್ಕೆ ತಡೆಯೊಡ್ಡಿರುವ ಬಗ್ಗೆ ವರದಿಗಳು ಬಂದಿವೆ.

ರೈತ ಪ್ರತಿಭಟನೆಯ ಕೇಂದ್ರ ಬಿಂದುವಾದ ದಿಲ್ಲಿಯ ಗಡಿಯಲ್ಲಿರುವ ಗುರುಗ್ರಾಮ ಹಾಗೂ ಗಾಝಿಪುರದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಯಿತು. ಬಂದ್ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದಿಲ್ಲಿಗೆ ತಾಗಿಕೊಂಡಿರುವ ಹರ್ಯಾಣ ಹಾಗೂ ಉತ್ತರಪ್ರದೇಶದ ಗಡಿಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರೈತರನ್ನು ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜಂತರ್ಮಂತರ್ನಲ್ಲಿ ಏಕತಾ ಪ್ರತಿಭಟನೆಯನ್ನು ನಡೆಸಿದವು. ದಕ್ಷಿಣದ ರಾಜ್ಯವಾದ ಕೇರಳದ ಬಹುತೇಕ ಭಾಗಗಳಲ್ಲಿ ಬಂದ್ ಸಂಪೂರ್ಣವಾಗಿತ್ತು. ಅಂಗಡಿಮುಂಗಟ್ಟುಗಳು ಹಲವೆಡೆ ಮುಚ್ಚುಗಡೆಗೊಂಡಿದ್ದು, ಸಾಮಾನ್ಯಜನಜೀವನ ಸ್ತಬ್ಧಗೊಂಡಿತ್ತು. ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಕಾರಣ ಪ್ರತಿಭಟನಾ ಕಾರ್ಯಕ್ರಮಗಳಿಗೆ ಅಡ್ಡಿಯುಂಟಾಯಿತು. ಆಂಧ್ರದಲ್ಲಿ ಆಡಳಿತಾರೂಢ ವೈಎಸ್ಆರ್ಸಿಪಿ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಬಂದ್ಗೆ ಬೆಂಬಲ ನೀಡಿದ್ದವು. ಸರಕಾರಿ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು ಹಾಗೂ ಶಾಲಾ,ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ತಮಿಳುನಾಡಿನಲ್ಲಿಯೂ ವಿವಿಧ ಭಾಗಗಳಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಾಜಧಾನಿ ಕೋಲ್ಕತಾ ಸಹಿತ ಪಶ್ಚಿಮಬಂಗಾಳದ ವಿವಿಧೆಡೆಯೂ ಬಂದ್ಗೆ ಬೆಂಬಲ ವ್ಯಕ್ತವಾಗಿದೆ.

ಒಡಿಶಾ, ಜಾರ್ಖಂಡ್ ನಲ್ಲಿಯೂ ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿಯಲಿಲ್ಲ. ಬಿಹಾರದಲ್ಲಿ ಆರ್ಜೆಡಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಹಾಗೂ ರೈಲುಗಳ ಸಂಚಾರ ತಡೆಯುಂಟು ಮಾಡಿದರು. ರಾಜಸ್ಥಾನದಲ್ಲಿ ವಿವಿಧ ಭಾಗಗಳಲ್ಲಿ ರೈತರು ರ‍್ಯಾಲಿಗಳನ್ನು ನಡೆಸಿದರು. ಆದರೆ ಮುಂಬೈ ಮಹಾನಗರ ಹಾಗೂ ಮಧ್ಯಪ್ರದೇಶ, ಗುಜರಾತ್, ಅಸ್ಸಾಂ ಹಾಗೂ ಅರುಣಾಚಲ ರಾಜ್ಯಗಳಲ್ಲಿ ಭಾರತ್ ಬಂದ್ ಹೆಚ್ಚಿನ ಪರಿಣಾಮವನ್ನು ಬೀರಿಲ್ಲವೆಂದು ವರದಿಗಳು ತಿಳಿಸಿವೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಸಾವಿರಾರು ರೈತರು ದಿಲ್ಲಿಯ ಸಿಂಘುಗಡಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಈ ಕಾಯ್ದೆಗಳು, ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದುಪಡಿಸಲಿದೆ ಮತ್ತು ಬೃಹತ್ ಕಂಪೆನಿಗಳ ಹಂಗಿನಲ್ಲಿ ಬದುಕುವಂತೆ ಮಾಡಲಿದೆಯೆಂಬ ಭೀತಿಯನ್ನು ರೈತರು ಹೊಂದಿದ್ದಾರೆ.

25ಕ್ಕೂ ಅಧಿಕ ರೈಲುಗಳ ಸಂಚಾರ ಬಾಧಿತ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ರೈತರು ನಡೆಸಿದ ಭಾರತ ಬಂದ್ನಿಂದ ಸುಮಾರು 25ಕ್ಕೂ ಅಧಿಕ ರೈಲುಗಳ ಸಂಚಾರ ಬಾಧಿತವಾಗಿವೆಯೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದಿಲ್ಲಿ,ಅಂಬಾಲ ಹಾಗೂ ಫಿರೋಝ್ ಪುರ ವಿಭಾಗಗಳ 20ಕ್ಕೂ ಅಧಿಕ ವಿಭಾಗಗಳಲ್ಲಿ ರೈಲು ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಇದರಿಂದಾಗಿ 25ಕ್ಕೂ ಅಧಿಕ ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆಯೆಂದು ಉತ್ತರ ರೈಲ್ವೆ ವಲಯದ ವಕ್ತಾರರು ತಿಳಿಸಿದ್ದಾರೆ.

 ದಿಲ್ಲಿ-ಅಮೃತಸರ ಶಾನೆ ಪಂಜಾಬ್, ನ್ಯೂಡೆಲ್ಲಿ-ಮೊಗಾ ಎಕ್ಸ್ಪ್ರೆಸ್, ಹಳೆದಿಲ್ಲಿ-ಪೇಹಜೋಟ್ ಎಕ್ಸ್ಪ್ರೆಸ್, ದಿಲ್ಲಿಯಿಂದ ಕತ್ರಾಗೆ ತೆರಳುವ ವಂದೇ ಭಾರತ್ ಎಕ್ಸ್ಪ್ರೆಸ್,ಅಮೃತಸರ ಶತಾಬ್ದಿ ಸಂಚಾರ ಬಾಧಿತಗೊಂಡಿರುವ ರೈಲುಗಳಲ್ಲಿ ಸೇರಿವೆಯೆಂದು ಅವರು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News