×
Ad

ಪಾಕ್‌ ಮಾಜಿ ಕ್ರಿಕೆಟ್‌ ಆಟಗಾರ ಇಂಝಮಾಮುಲ್‌ ಹಕ್‌ ಗೆ ಹೃದಯಾಘಾತ

Update: 2021-09-28 13:25 IST
Photo: twitter.com/SmitNayak18

ಇಸ್ಲಾಮಾಬಾದ್:‌ ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದ ನಾಯಕ‌ ಹಾಗೂ ಬ್ಯಾಟ್ಸ್‌ ಮನ್‌ ಆಗಿದ್ದ ಇಂಝಮಾಮುಲ್‌ ಹಕ್ ರವರಿಗೆ ಸೋಮವಾರ ರಾತ್ರಿ ಹೃದಯಾಘಾತವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು indianexpress.com ವರದಿ ಮಾಡಿದೆ. ಅವರಿಗೆ ೫೧ ವರ್ಷ ವಯಸ್ಸಾಗಿದ್ದು, ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕ್ರಿಕೆಟ್‌ ಪಾಕಿಸ್ತಾನದ ವರದಿ ಪ್ರಕಾರ, ಇಂಝಮಾಮುಲ್‌ ಹಕ್‌ ಕಳೆದ ಮೂರು ದಿನಗಳಲ್ಲಿ ಎದೆನೋವು ಇರುವ ಕುರಿತು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ ಆರಂಭಿಕ ಪರೀಕ್ಷೆಗಳು ಯಾವ ಸೂಚನೆಗಳನ್ನೂ ನೀಡಿರಲಿಲ್ಲ. ಆದರೆ ಸೋಮವಾರ ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಲಘು ಹೃದಾಯಾಘಾತವಾಗಿರುವುದು ಕಂಡು ಬಂದಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.

ಇಂಝಮಾಮುಲ್‌ ಹಕ್‌ ಅವರ ಈಗಿನ ಸ್ಥಿತಿ ಸ್ಥಿರವಾಗಿದ್ದು, ಅವರು ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ಅಧಿಕೃತರೋರ್ವರು ಸ್ಪಷ್ಟಪಡಿಸಿದ್ದಾಗಿ ವರದಿಗಳು ತಿಳಿಸಿವೆ. ಅವರು ಶೀಘ್ರ ಗುಣಮುಖರಾಗಲು ಸಾಮಾಜಿಕ ತಾಣದಾದ್ಯಂತ ಜನರು ಹಾರೈಸುತ್ತಿದ್ದು, ಭಾರತೀಯ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಟ್ವೀಟ್‌ ಮಾಡಿ, "ಇಂಝಮಾಮ್‌ ಸಂಪೂರ್ಣ ಚೇತರಿಸಿಕೊಳ್ಳಲಿ" ಎಂದು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News