ಮಹಾರಾಷ್ಟ್ರ: ರಾಜ್ಯಸಭಾ ಉಪ-ಚುನಾವಣೆಯಿಂದ ಹಿಂದೆ ಸರಿದ ಬಿಜೆಪಿ; ಕಾಂಗ್ರೆಸ್‌ ಅಭ್ಯರ್ಥಿ ಅವಿರೋಧ ಗೆಲುವಿಗೆ ದಾರಿ

Update: 2021-09-28 08:11 GMT
Photo: Twitter@rajanipatil_in

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ ಸೋಮವಾರ ತನ್ನ ಅಭ್ಯರ್ಥಿ ಸಂಜಯ್ ಉಪಾಧ್ಯಾಯರನ್ನು ಅಕ್ಟೋಬರ್ 4 ರಂದು ನಡೆಯಲಿದ್ದ ಮಹಾರಾಷ್ಟ್ರ ರಾಜ್ಯಸಭಾ ಉಪಚುನಾವಣೆಯಿಂದ ಹಿಂತೆಗೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ರಜನಿ ಪಾಟೀಲ್ ಅವರ ಅವಿರೋಧ ಗೆಲುವಿಗೆ ದಾರಿ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ.

ಹಾಲಿ ಸಂಸದ ರಾಜೀವ್ ಸತಾವ್ ನಿಧನದಿಂದಾಗಿ ಉಪಚುನಾವಣೆ ಅನಿವಾರ್ಯವಾಗಿತ್ತು.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆ ನಿವಾಸಿಯಾಗಿದ್ದ ಕಾಂಗ್ರೆಸ್ ಮುಖಂಡ ಸತಾವ್, ಕೋವಿಡ್ ಕಾರಣಗಳಿಂದಾಗಿ ಈ ವರ್ಷ ಮೇ ತಿಂಗಳಲ್ಲಿ ನಿಧನರಾದರು. ಅವರ ಅವಧಿ ಏಪ್ರಿಲ್ 2, 2026 ಕ್ಕೆ ಕೊನೆಗೊಳ್ಳಬೇಕಿತ್ತು. ಪಾಟೀಲರನ್ನು ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಎಂದು ಕಾಂಗ್ರೆಸ್ ಬಿಂಬಿಸಿತ್ತು.

ರಾಜ್ಯಸಭಾ ಸ್ಥಾನಕ್ಕೆ ಅಕ್ಟೋಬರ್ 4 ರಂದು ಮತದಾನ ನಡೆಯಬೇಕಿತ್ತು ಮತ್ತು ಅದೇ ದಿನ ಮತ ಎಣಿಕೆ ನಡೆಯಲಿತ್ತು.

ಆದಾಗ್ಯೂ, ಬಿಜೆಪಿ ತನ್ನ ಕಾರ್ಯಕಾರಿಣಿ ಸಭೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಸೋಮವಾರ ನಿರ್ಧರಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಈ ನಿರ್ಧಾರವನ್ನು ಘೋಷಿಸಿದ್ದಾರೆ. "ಪಕ್ಷದ ನಿರ್ಧಾರವು ಅತ್ಯುನ್ನತವಾಗಿದೆ. ಪಕ್ಷವು ನನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದರೆ, ನಾನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ನಾನು ವಿಧೇಯ ಕೆಲಸಗಾರ ಮಾತ್ರ"ಎಂದು ಉಪಾಧ್ಯಾಯ ಪತ್ರಿಕೆಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾನಾ ಪಟೋಲೆ ಮತ್ತು ಮಹಾ ವಿಕಾಸ ಅಘಾಡಿ ಸರ್ಕಾರದ ಹಿರಿಯ ಸಚಿವರಾದ ಬಾಲಾಸಾಹೆನ್ ಥೋರಟ್ ಅವರು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ಕೆಲ ದಿನಗಳ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

"ಪಟೋಲೆ ಮತ್ತು ಥೋರಟ್‌ ನನ್ನನ್ನು ಭೇಟಿಯಾಗಿದ್ದು, ರಾಜೀವ್‌ ಸತಾವ್‌ ಗೆ ಗೌರವ ಸಲ್ಲಿಸುವ ಸಲುವಾಗಿ ಒಮ್ಮತದ ಅಭ್ಯರ್ಥಿಯ ಪರಿಗಣನೆಗೆ ಮನವಿ ಮಾಡಿದರು. ಅದರ ಪ್ರಕಾರ, ಇದನ್ನು ಪರಿಗಣಿಸುತ್ತೇವೆಂದು ನಾವು ಅವರಿಗೆ ಭರವಸೆ ನೀಡಿದ್ದೆವು. ಆದ್ದರಿಂದ ಈಂದು ನಾವು ತೀರ್ಮಾನ ಕೈಗೊಂಡಿದ್ದೇವೆ ಎಂದು ಫಡ್ನವೀಸ್‌ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News