ದಿಲ್ಲಿ ದಂಗೆಗಳು ಪೂರ್ವಯೋಜಿತವಾಗಿದ್ದವು, ದಿಢೀರ್ ಸಂಭವಿಸಿದ್ದಲ್ಲ: ದಿಲ್ಲಿ ಹೈಕೋರ್ಟ್

Update: 2021-09-28 18:39 GMT

ಹೊಸದಿಲ್ಲಿ,ಸೆ.28: ಕಳೆದ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಭಾರೀ ಪ್ರಮಾಣದ ಕೋಮು ಹಿಂಸಾಚಾರ ದಿಢೀರ್ ಆಗಿ ಸಂಭವಿಸಿದ್ದಲ್ಲ,ಬದಲಿಗೆ ಕಾನೂನು ಮತ್ತು ಸುವ್ಯವಸ್ಥೆಗೆ ವ್ಯತ್ಯಯವನ್ನುಂಟು ಮಾಡಲು ಪೂರ್ವ ಯೋಜಿತವಾಗಿತ್ತು ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ.

ದಂಗೆಗಳ ಸಂದರ್ಭದಲ್ಲಿ ದಿಲ್ಲಿ ಪೊಲೀಸ್‌ನ ಹೆಡ್ ಕಾನ್‌ಸ್ಟೇಬಲ್‌ವೋರ್ವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆದೇಶವನ್ನು ಹೊರಡಿಸುವಾಗ ನ್ಯಾ.ಸುಬ್ರಮಣಿಯಂ ಪ್ರಸಾದ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪ್ರಕರಣದ ಓರ್ವ ಆರೋಪಿಗೆ ಜಾಮೀನು ನೀಡಿದ ನ್ಯಾಯಾಧೀಶರು ಇನ್ನೋರ್ವ ಆರೋಪಿಗೆ ಜಾಮೀನು ನಿರಾಕರಿಸಿದರು.
ಈಶಾನ್ಯ ದಿಲ್ಲಿ ದಂಗೆಗಳಲ್ಲಿ ಹೆಚ್ಚಿನವರು ಮುಸ್ಲಿಮರು ಸೇರಿದಂತೆ ಕನಿಷ್ಠ 53 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.

ಗಲಭೆಯು ಸರಕಾರದ ಕಾರ್ಯ ನಿರ್ವಹಣೆಯನ್ನು ಹಳಿ ತಪ್ಪಿಸಲು ಮತ್ತು ನಗರದಲ್ಲಿ ಸಾಮಾನ್ಯ ಜನಜೀವನವನ್ನು ವ್ಯತ್ಯಯಗೊಳಿಸಲು ನಡೆಸಲಾಗಿದ್ದ ಲೆಕ್ಕಾಚಾರದ ಪ್ರಯತ್ನವಾಗಿತ್ತು ಎನ್ನುವುದನ್ನು ವೀಡಿಯೊ ತುಣುಕಿನಲ್ಲಿ ಕಂಡು ಬಂದಿರುವ ಪ್ರತಿಭಟನಾಕಾರರ ವರ್ತನೆಯು ಸ್ಪಷ್ಟವಾಗಿ ತೋರಿಸುತ್ತಿದೆ. ದಂಗೆಕೋರರು ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿಯನ್ನುಂಟು ಮಾಡಿದ್ದ ಕೃತ್ಯವು ನಗರದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಸುವ್ಯವಸ್ಥಿತ ಮತ್ತು ಪೂರ್ವಯೋಜಿತ ಒಳಸಂಚು ನಡೆದಿತ್ತು ಎನ್ನುವುದನ್ನು ದೃಢಪಡಿಸಿದೆ ಎಂದು ಸೋಮವಾರ ವಿಚಾರಣೆ ಸಂದರ್ಭದಲ್ಲಿ ಹೇಳಿದ ನ್ಯಾಯಾಧೀಶರು, ಅಸಂಖ್ಯಾತ ದಂಗೆಕೋರರು ದೊಣ್ಣೆಗಳು, ಕ್ರಿಕೆಟ್ ಬ್ಯಾಟ್‌ಗಳು ಇತ್ಯಾದಿಗಳೊಂದಿಗೆ ಕಡಿಮೆ ಸಂಖ್ಯೆಯಲ್ಲಿದ್ದ ಅಸಹಾಯಕ ಪೊಲೀಸ್ ಅಧಿಕಾರಿಗಳ ಮೇಲೆ ಎರಗಿದ್ದು ಕೂಡ ದಂಗೆ ಪೂರ್ವಯೋಜಿತವಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.
 
2020,ಫೆ.24ರಂದು ಸಂಭವಿಸಿದ್ದ ಘರ್ಷಣೆಗಳಲ್ಲಿ ಹಿಂಸೆಗಿಳಿದಿದ್ದ ಗುಂಪಿನ ದಾಳಿಯಿಂದ ಹೆಡ್ ಕಾನಸ್ಟೇಬಲ್ ರತನ್ ಲಾಲ, ಶಾಹ್ದಾರಾ ಡಿಸಿಪಿ ಮತ್ತು ಗೋಕುಲಪುರ ಠಾಣೆಯ ಎಸಿಪಿ ಗಾಯಗೊಂಡಿದ್ದರು. ಲಾಲ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು ಎಂದು ದಿಲ್ಲಿ ಪೊಲೀಸರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಆರೋಪಿಗಳ ಪೈಕಿ ಮುಹಮ್ಮದ್ ಇಬ್ರಾಹಿಂ ಖಡ್ಗವನ್ನು ಹಿಡಿದುಕೊಂಡಿದ್ದನ್ನು ಸಿಸಿಟಿವಿ ಕ್ಯಾಮೆರಾ ಫೂಟೇಜ್ ತೋರಿಸಿದೆ ಎಂದು ಹೇಳಿದ ನ್ಯಾಯಾಧೀಶರು ಆತನಿಗೆ ಜಾಮೀನು ನೀಡಲು ನಿರಾಕರಿಸಿದರು.

ಇನ್ನೋರ್ವ ಆರೋಪಿ ಮುಹಮ್ಮದ್ ಸಲೀಂ ಖಾನ್‌ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯವು, ಗುಂಪಿನಲ್ಲಿದ್ದ ಪ್ರತಿಯೊಬ್ಬರ ಮೇಲೂ ಕೊಲೆ ಆರೋಪವನ್ನು ಹೊರಿಸುವಂತಿಲ್ಲ. ಪ್ರಕರಣದ ಆರೋಪಿಗಳ ಪೈಕಿ ಕೆಲವರು ಸ್ಥಳದಲ್ಲಿದ್ದರು ಎನ್ನುವುದನ್ನು ಸಾಬೀತುಗೊಳಿಸುವ ವಿದ್ಯುನ್ಮಾನ ಸಾಕ್ಷಾಧಾರಗಳ ಕೊರತೆಯೂ ಇದೆ ಎಂದು ಹೇಳಿತು.
ಪ್ರಕರಣದಲ್ಲಿಯ ಒಟ್ಟು 11 ಆರೋಪಿಗಳ ಪೈಕಿ ಎಂಟು ಜನರು ಈವರೆಗೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News