ಸಿಪಿಐ ಕಚೇರಿಯಲ್ಲಿ ತಾನು ಅಳವಡಿಸಿದ್ದ ಎಸಿಯನ್ನು ತೆಗೆಸಿದ ಕನ್ಹಯ್ಯಾ ಕುಮಾರ್‌

Update: 2021-09-28 10:42 GMT

ಹೊಸದಿಲ್ಲಿ: ಇಂದು ಕಾಂಗ್ರೆಸ್ ಸೇರಲಿರುವ ಕನ್ಹಯ್ಯಾ ಕುಮಾರ್ ಅವರು ಕೆಲ ದಿನಗಳ ಹಿಂದೆ  ಪಾಟ್ನಾದ ಸಿಪಿಐ ನ ರಾಜ್ಯ ಕಚೇರಿಯಲ್ಲಿ ಅಳವಡಿಸಲಾಗಿದ್ದ ಹವಾನಿಯಂತ್ರಣ ವ್ಯವಸ್ಥೆಯನ್ನು ತೆಗೆಸಿದ್ದಾರೆ. ಈ ವಿಚಾರವನ್ನು ದೃಢಪಡಿಸಿದ ಸಿಪಿಐ ಬಿಹಾರ ರಾಜ್ಯ ಕಾರ್ಯದರ್ಶಿ ರಾಮ್ ನರೇಶ್ ಪಾಂಡೆ, ಆ ಎಸಿ ವ್ಯವಸ್ಥೆಯನ್ನು ಕನ್ಹಯ್ಯಾ ಅವರೇ ಹಾಕಿಸಿದ್ದರಿಂದ ಅದನ್ನು ತೆಗೆಯಲು ಅವರಿಗೆ ಅನುಮತಿಸಲಾಯಿತು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸೇರುವ ನಿರ್ಧಾರದಿಂದ ಅವರು ಹಿಂದೆ ಸರಿಯುತ್ತಾರೆಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

"ಕನಯ್ಯಾ ಅವರ ಮನಃಸ್ಥಿತಿ ಕಮ್ಯುನಿಸ್ಟ್ ಆಗಿರುವುದರಿಂದ ಹಾಗೂ ಇಂತಹ ಜನರು ತಮ್ಮ ಸಿದ್ಧಾಂತಕ್ಕೆ ಬಲವಾಗಿ ಅಂಟಿಕೊಳ್ಳುವುದರಿಂದ ಕನ್ಹಯ್ಯಾ ಕಾಂಗ್ರೆಸ್ ಸೇರುವುದಿಲ್ಲ ಎಂದು ನಾನು ಈಗಲೂ ನಂಬಿದ್ದೇನೆ" ಎಂದು ಅವರು ಹೇಳಿದರು.

ಕನ್ಹಯ್ಯಾ ಅವರು ಸೆಪ್ಟೆಂಬರ್ 4 ಹಾಗೂ 5ರಂದು ದಿಲ್ಲಿಯಲ್ಲಿ ನಡೆದ ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೂಡ ಭಾಗವಹಿಸಿದ್ದರು. ಆಗ ಅವರು ಪಕ್ಷ ತೊರೆಯುವ ಬಗ್ಗೆ ಹೇಳಿರಲಿಲ್ಲ ಹಾಗೂ ಯಾವುದೇ ನಿರ್ದಿಷ್ಟ ಹುದ್ದೆಗೂ ಬೇಡಿಕೆ ಸಲ್ಲಿಸಿರಲಿಲ್ಲ, ಎಂದು ಪಾಂಡೆ ಹೇಳಿದರು.

ಜೆಎನ್‍ಯು ವಿದ್ಯಾರ್ಥಿ ಯೂನಿಯನ್‍ನ ಮಾಜಿ ಅಧ್ಯಕ್ಷರಾಗಿರುವ ಕನ್ಹಯ್ಯಾ ಹಾಗೂ ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ ಶಾಸಕ ಜಿಗ್ನೇಶ್ ಮೇವಾನಿ ಇಂದು ಕಾಂಗ್ರೆಸ್ ಸೇರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News