×
Ad

ಲಸಿಕೆ ನೀಡಿಕೆಯಲ್ಲಿ ಮತ್ತೊಂದು ಮೈಲುಗಲ್ಲು: ನಾಲ್ವರಲ್ಲಿ ಒಬ್ಬರಿಗೆ ಎರಡೂ ಡೋಸ್

Update: 2021-09-29 09:09 IST
Photo Source: PTI

ಹೊಸದಿಲ್ಲಿ, ಸೆ.29: ಭಾರತದಲ್ಲಿ ಕೋವಿಡ್-19 ವಿರುದ್ಧದ ಲಸಿಕಾ ಅಭಿಯಾನ ಮಂಗಳವಾರ ಮತ್ತೊಂದು ಮೈಲುಗಲ್ಲಿನ ಸನಿಹಕ್ಕೆ ಬಂದಿದೆ. ದೇಶದಲ್ಲಿ ಲಸಿಕೆ ಪಡೆಯಲು ಅರ್ಹರಾದ ಒಟ್ಟು ಜನಸಂಖ್ಯೆಯ ಪೈಕಿ ಸುಮಾರು 25ರಷ್ಟು ಮಂದಿ (24.8%) ಎರಡೂ ಲಸಿಕಾ ಡೋಸ್‌ಗಳನ್ನು ಪಡೆದಂತಾಗಿದೆ. ಉಳಿದಂತೆ ಶೇಕಡ 43.5ರಷ್ಟು ಮಂದಿ ಒಂದು ಡೋಸ್ ಪಡೆದಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳುತ್ತವೆ.

ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ 3 ಲಕ್ಷಕ್ಕಿಂತ ಕಡಿಮೆ ಇಳಿದಿರುವ ಹಂತದಲ್ಲೇ ಲಸಿಕೆ ನೀಡಿಕೆಯಲ್ಲಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ.

ಮಂಗಳವಾರ ಸಂಜೆಯ ವೇಳೆಗೆ ಭಾರತದಲ್ಲಿ ಒಟ್ಟು 87.62 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, 64.25 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. 110 ಕೋಟಿ ಮಂದಿಗೆ ಲಸಿಕೆ ನೀಡಿರುವ ಚೀನಾವನ್ನು ಹೊರತುಪಡಿಸಿದರೆ, ಇಡೀ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಲಸಿಕಾ ಡೋಸ್‌ಗಳನ್ನು ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಈ ಪೈಕಿ 23.36 ಕೋಟಿ ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದು, 40.89 ಕೋಟಿ ಮಂದಿಗೆ ಒಂದು ಡೋಸ್ ವಿತರಿಸಲಾಗಿದೆ. ದೇಶದಲ್ಲಿ ಸುಮಾರು 94 ಕೋಟಿ ಮಂದಿ ಲಸಿಕೆ ಪಡೆಯುವ ಅರ್ಹ ವಯೋಮಿತಿಯ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ 18 ವರ್ಷ ಮೇಲ್ಪಟ್ಟ 68.3% ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಂತಾಗಿದೆ. ಈ ಪೈಕಿ 24.8% ಮಂದಿ ಉಭಯ ಡೋಸ್‌ಗಳನ್ನು ಪಡೆದಿದ್ದರೆ, ಭಾಗಶಃ ಲಸಿಕೆ ಪಡೆದವರು 43.5%.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News