ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಚರ್ಚಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್
ಹೊಸದಿಲ್ಲಿ: ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವಾಗಲೇ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬುಧವಾರ ದಿಲ್ಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ 45 ನಿಮಿಷಗಳ ಕಾಲ ಚರ್ಚೆ ನಡೆಸಿದರು ಎಂದು NDTV ವರದಿ ಮಾಡಿದೆ.
ಬಿಜೆಪಿಗೆ ಸೇರುವ ಪ್ರಶ್ನೆಗಳಿಗೆ ಉತ್ತರಿಸಲು ಸಿಂಗ್ ನಿರಾಕರಿಸಿದ್ದರು. ಆದರೆ ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಆಯ್ಕೆಗಳನ್ನು ಪರಿಶೀಲಿಸುವ ಬಗ್ಗೆ ಮಾತನಾಡಿದ್ದರು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬಿಜೆಪಿ ಸೇರುವ ಪ್ರಸ್ತಾಪವನ್ನು ಪರಿಗಣಿಸಬಹುದು ಎಂದು ಊಹಾಪೋಹಗಳು ಹರಿದಾಡುತ್ತಿವೆ.
ಆದಾಗ್ಯೂ, ಅಮಿತ್ ಶಾ ನಿವಾಸದಲ್ಲಿ ನಡೆಯುತ್ತಿರುವ ಸಭೆಯ ಕಾರ್ಯಸೂಚಿಯ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಲಾಗಿಲ್ಲ.
ಸಿಂಗ್ ಪರ ಬೆಂಬಲಿಗರು ಇದನ್ನು 'ಸೌಜನ್ಯದ ಭೇಟಿ' ಎಂದು ಕರೆದಿದ್ದಾರೆ. ಸಿಂಗ್ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ್ದಾರೆ.
"ಕ್ಯಾಪ್ಟನ್ ಅಮರಿಂದರ್ ಅವರ ದಿಲ್ಲಿ ಭೇಟಿಯ ಕುರಿತು ತುಂಬಾ ಚರ್ಚೆ ಆಗುತ್ತಿದೆ. ಅವರು ವೈಯಕ್ತಿಕ ಭೇಟಿಯಲ್ಲಿದ್ದಾರೆ. ಈ ಸಮಯದಲ್ಲಿ ಅವರು ಕೆಲವು ಸ್ನೇಹಿತರನ್ನು ಭೇಟಿಯಾಗುತ್ತಾರೆ ಹಾಗೂ ಕಪುರ್ತಲಾ ಹೌಸ್ (ರಾಷ್ಟ್ರ ರಾಜಧಾನಿಯಲ್ಲಿರುವ ಪಂಜಾಬ್ ಮುಖ್ಯಮಂತ್ರಿಯ ನಿವಾಸ) ಖಾಲಿ ಮಾಡುತ್ತಾರೆ ... ಅನಗತ್ಯ ಊಹಾಪೋಹಗಳ ಅಗತ್ಯವಿಲ್ಲ" ಎಂದು ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್ ಮಂಗಳವಾರ ಹೇಳಿದ್ದರು.