ಮುಂಬೈ ಕನ್ನಡಕ್ಕೆ ಮುಸ್ಲಿಮರ ಕೊಡುಗೆ

Update: 2021-09-30 19:30 GMT

ಸಮೀರ್ ಕುಳವೂರು ತನ್ನ ಕಿರಿವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಕಲಾವಿದ. ಪ್ರತಿಷ್ಠಿತ ಜೆ.ಜೆ. ಕಾಲೇಜಿನಲ್ಲಿ ಬಂಗಾರದ ಪದಕದೊಂದಿಗೆ ಸಾಧಕರ ಸಾಲಿಗೆ ಸೇರಿದವರು. ಸಮಕಾಲೀನ ಬದುಕಿಗೆ ಬಣ್ಣ ಬಳಿಯುವ ಇವರ ವರ್ಣಚಿತ್ರಗಳು, ಮ್ಯೂರಲ್ಸ್, ಪ್ರಿಂಟ್ಸ್ ಮತ್ತು ಗ್ರಾಫಿಕ್ ಡಿಸೈನ್ ಇತ್ಯಾದಿ ಕಲಾಕೃತಿಗಳು ಕಲಾಸಕ್ತರ ಮನ ಗೆದ್ದಿವೆ. 2018ರಲ್ಲಿ ನಡೆದ ‘ಎ ಮ್ಯಾನ್ ಆಫ್ ಕ್ರೌಡ್’ ಕುಳವೂರು ಅವರ ಪ್ರಥಮ ಏಕವ್ಯಕ್ತಿ ಪ್ರದರ್ಶನ. ಆನಂತರ ಎಂದೂ ಹಿಂದಿರುಗಿ ನೋಡದ ಸಮೀರ್ ಕುಳವೂರು ಈ ವರ್ಷದ ಪ್ರತಿಷ್ಠಿತ ಕಾಲಾಘೋಡ ಉತ್ಸವದಲ್ಲಿಯೂ ತಮ್ಮ ಆಕರ್ಷಕ ಕಲಾಕೃತಿಗಳ ಮೂಲಕ ಸುದ್ದಿ ಮಾಡಲಿದ್ದಾರೆ.


ಭಾಗ-3

ಮುಂಬೈಯ ತುಳು-ಕನ್ನಡ ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ರಹೀಂ ಸಚ್ಚೇರಿಪೇಟೆ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಪಡೆದು ಬದುಕನ್ನು ಅರಸುತ್ತಾ ಮುಂಬೈಗೆ ಬಂದು ಇಲ್ಲಿ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದವರು. ಮುಂದೆ ಮುಂಬೈ ಮಹಾನಗರದ ಸಾರಿಗೆ ಇಲಾಖೆಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಾ ನಗರದ ಸಂಘ-ಸಂಸ್ಥೆಗಳಲ್ಲಿ ನಿಕಟ ಸಂಬಂಧ ಹೊಂದಿದ್ದಾರೆ. ಬಹುಭಾಷಾ ಕಲಾವಿದ, ರಂಗ ನಿರ್ದೇಶಕ, ಕಂಠದಾನ ಕಲಾವಿದ, ಚಿತ್ರನಟನಾದ ಇವರು ‘ಮಲ್ಲಣ್ಣೆ’, ‘ಗುಡ್ ಬೈ ಕುಡ್ಲ’, ‘ಏರೆಗಾದ್’, ‘ಡೋಲು’, ‘ಏರೆಗ್ ಏರ್ಲಾ ಇಜ್ಜಿ’, ‘ಯಕ್ಷನಿಲಯ’, ‘ತಂಬಿಲ’, ‘ಪದಿನಾಜಿ ಅಗೆಲ್, ‘ತೆಲಿಕೆ ನಲಿಕೆ’ ಇತ್ಯಾದಿ ತುಳು; ‘ಆತ್ಮ’, ‘ಪಬ್ಲಿಕ್ ಪ್ರಾಸಿಕ್ಯೂಟರ್’, ‘ಅಬ್ಬು’ ಮೊದಲಾದ ಕನ್ನಡ ನಾಟಕಗಳಲ್ಲಿ; ‘ಪಾಸಿರೊ ಬಲ್ಲಿ’ ಎಂಬ ಬ್ಯಾರಿ ಭಾಷೆಯ ನಾಟಕ ಹೀಗೆ ಹತ್ತು ಹಲವು ನಾಟಕಗಳಲ್ಲಿ ಪಾತ್ರಗಳಿಗೆ ರಂಗದಲ್ಲಿ ಜೀವತುಂಬಿ ಅತ್ಯುತ್ತಮ ಕಲಾವಿದ ಎನಿಸಿಕೊಂಡಿದ್ದಾರೆ. ದೇವದಾಸ್ ಸಾಲ್ಯಾನ್, ರಮೇಶ್ ಶಿವಪುರ, ಎಂ.ಕೆ. ಮಠ, ಮೋಹನ್ ಶೆಟ್ಟಿ ನಂದಳಿಕೆ, ಜಗದೀಶ್ ಶೆಟ್ಟಿ ಕೆಂಚನಕೆರೆ, ಕರುಣಾಕರ ಕಾಪು, ಉಮೇಶ್ ಹೆಗ್ಡೆ ಕಡ್ತಲ, ನಾಗರಾಜ ಗುರುಪುರ, ಚಂದ್ರಕಾಂತ್ ಸಾಲ್ಯಾನ್ ಮೊದಲಾದವರ ಗರಡಿಯಲ್ಲಿ ಪಳಗಿ ಸಮರ್ಥ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಹೀಂ, ಜಾತಿ, ಮತ ಮೀರಿ ನಿಂತ ಅಪ್ಪಟ ಕಲಾವಿದ. ‘‘ನಿರ್ದೇಶಕರಿಗೆ ಗೌರವ ನೀಡುತ್ತಾ; ಕೊಟ್ಟ ಪಾತ್ರಕ್ಕೆ ಜೀವ ತುಂಬುವ ರಹೀಂ ಓರ್ವ ಒಳ್ಳೆಯ ಕಲಾವಿದ’’ಎಂದು ಮುಂಬೈಯ ರಂಗನಿರ್ದೇಶಕರಲ್ಲಿ ಓರ್ವರಾದ ಮನೋಹರ್ ಶೆಟ್ಟಿ ನಂದಳಿಕೆಯವರ ಮಾತು ಇಲ್ಲಿನ ಎಲ್ಲಾ ನಿರ್ದೇಶಕರ ಮಾತೂ ಹೌದು.

‘ಅಬ್ಬು’ ಬ್ಯಾರಿ ಭಾಷೆಯ ಚಲನಚಿತ್ರದ ಮುಖ್ಯಭೂಮಿಕೆಯಲ್ಲಿ ಪಾತ್ರವಹಿಸಿರುವ ಇವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ನೀಡಿದೆ. ಬಿಲ್ಲವರ ಅಸೋಸಿಯೇಶನ್‌ನಂತಹ ಮುಖ್ಯ ಸಂಘಟನೆಗಳು ಸತ್ಕರಿಸಿ ಗೌರವಿಸಿವೆ.
ಸೋಮಯ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಡಾ. ಸಂಜೀವ ಶೆಟ್ಟಿಯವರ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಓರ್ವರಾಗಿದ್ದ, ಕಂಬಾರರ ‘ಮಹಾಮಾಯಿ’ ನಾಟಕದಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿದ್ದ ಸಮೀನಾ ಶೇಖ್ ಬಹುಮುಖ ಪ್ರತಿಭೆ. ‘ಮುಂಬೈ ನ್ಯೂಸ್’ ಚಾನೆಲ್‌ನಲ್ಲಿ ಕನ್ನಡ ವಾರ್ತೆ ಓದುಗರಾಗಿ, ಕಾರ್ಯನಿರ್ವಾಹಕರಾಗಿ ಅನುಭವ ಪಡೆದು ಮುಂದೆ ಒಳನಾಡಿನ ‘ಟಿವಿ-9’ನಲ್ಲಿ ಸೇರಿಕೊಂಡಿರುವುದು ಮುಂಬೈ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಕಳೆದ ಶತಮಾನದ ನಲವತ್ತರ ದಶಕದಲ್ಲಿ ಹದಿನೈದರ ಬಾಲಕನೋರ್ವ ಕನಸಿನ ನಗರಿ ಮುಂಬೈಗಾಗಮಿಸಿ ಇಲ್ಲಿ ತಮ್ಮ ಮಾವನ ಆಶ್ರಯದಲ್ಲಿ ಬದುಕಿನ ಗುರಿ ಹುಡುಕುತ್ತಾನೆ. ಆ ಬಾಲಕನ ಮಾವನೂ ಪುಟ್ಟ ಬಾಲಕನಾಗಿದ್ದಾಗ ಮುಂಬೈಗೆ ಆಗಮಿಸಿ ಬದುಕು ಕಟ್ಟಿಕೊಂಡು ಪರೋಪಕಾರಿಯಾಗಿ ಒಂಟಿಯಾಗಿಯೇ ಬಾಳಿದವರು. ಆ ಮಾವನ ಆಸರೆಯಲ್ಲಿ ಅವರ ಆದರ್ಶಗಳೊಂದಿಗೆ ಇಲ್ಲಿಗಾಗಮಿಸಿದ ಪೋರ ಮಾರ್ಕು ಬ್ಯಾರಿ ಇಲ್ಲಿ ಹೊಟೇಲ್‌ಗಳಲ್ಲಿ ದುಡಿಯುತ್ತ ಬೆಳೆದವರು. ಹೊಟೇಲ್ ವ್ಯವಹಾರದ ಎಲ್ಲಾ ಆಯಾಮಗಳಲ್ಲಿ ಪರಿಣತಿ ಪಡೆದ ಮಾರ್ಕು ಬ್ಯಾರಿ, ಅಲ್ಲಲ್ಲಿ ಸಣ್ಣ ಪುಟ್ಟ ಹೊಟೇಲ್ ವ್ಯವಹಾರ ನಡೆಸಿ ಕೊನೆಗೆ ಹೊಟೇಲ್‌ಗಳನ್ನು ನಡೆಸುವುದಕ್ಕೆ ತೊಡಗಿಕೊಂಡರು. ಆರ್‌ಬಿಐ ಹತ್ತಿರ ‘ರಿಸರ್ವ್ ರೆಸ್ಟೋರೆಂಟ್’ ನಡೆಸಲು ಪ್ರಾರಂಭಿಸಿದ ಮಾರ್ಕು ಬ್ಯಾರಿ ಮೂಲತ ಸುರತ್ಕಲ್‌ನ ಮುಕ್ಕದವರು. ಮುಂದೆ 2-3 ಬೇರೆ ಬೇರೆ ಹೊಟೇಲ್‌ಗಳಾದ ನಂತರ, ಲಯನ್ ಗೇಟ್‌ನ ಮುಂದುಗಡೆ ಇದ್ದ ಕೋಟ್ಯಾನ್ ಎಂಬ ಆತ್ಮೀಯರೋರ್ವರ ‘ಲಂಚ್‌ಹೋಮ್’ ಅನ್ನು ನಡೆಸಲು ತೊಡಗಿದ್ದರು.

ಒಂದು ಹೊಟೇಲ್‌ನ ಅವಧಿ ಮುಗಿದ ನಂತರ ಇನ್ನೊಂದು.. ಹೀಗೆ ಹೊಟೇಲ್ ವ್ಯವಹಾರದ ಮಧ್ಯೆ ಅವರು ತನ್ನ ಮಾವನ ಬೆನ್ನು ಹಿಡಿದು ಮುಂಬೈಗೆ ಬಂದಂತೆ ಅವರ 8 ವರ್ಷದ ಮಗ ಅಹ್ಮದ್ ಬಾವಾ ಊರಿನಲ್ಲಿ ಮೂರನೇ ತರಗತಿ ಮುಗಿಸಿ, ತಂದೆ ಮಾರ್ಕು ಬ್ಯಾರಿಯವರ ಜತೆ (1957)ಮುಂಬೈಗೆ ಆಗಮಿಸಿದ್ದ. ಇಲ್ಲಿ ತಂದೆಯವರ ಹೊಟೇಲ್‌ಗಳಲ್ಲಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಆ ಎಳೆಯ ಪುಟ್ಟ ಬಾಲಕನಿಗೆ ಶಿಕ್ಷಣ ಪಡೆಯಬೇಕೆಂಬ ತುಡಿತವಿತ್ತು. ಮೋದಿ ಸ್ಟ್ರೀಟ್‌ನಲ್ಲಿದ್ದ ಮನಪಾ ಶಾಲೆಯಲ್ಲಿ ಒಂದೆರಡು ವರ್ಷ ಅಕ್ಷರ ಜ್ಞಾನವನ್ನು ಹೆಚ್ಚಿಸಿಕೊಂಡದ್ದೂ ಆಯಿತು. ಆನಂತರ ಚಿಕ್ಕಪುಟ್ಟ ಕಚೇರಿಗಳಲ್ಲಿ ಕೆಲಸ ಮಾಡುತ್ತಾ ‘ಮದರ್ ಇಂಡಿಯಾ’ ರಾತ್ರಿ ಶಾಲೆಯಲ್ಲಿ ಒಂಭತ್ತನೇ ತರಗತಿ ಪೂರ್ಣಗೊಳಿಸಿದ ಬಾವಾ, ಬಾಂಬೆ ಟೆಕ್ಸ್‌ಟೈಲ್ ಮಿಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ ಅಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ವಿದ್ಯೆಯನ್ನು ನಿಲ್ಲಿಸಬೇಕಾಯಿತು. ಆದರೂ ಕಲಿಯಬೇಕೆಂಬ ತುಡಿತದಿಂದ ಕೊನೆಗೆ ಹದಿನೈದು ವರ್ಷ ದುಡಿದ ಆ ನೌಕರಿ ಬಿಟ್ಟು ಮತ್ತೆ ಯಂಗ್‌ಮೆನ್ಸ್ ರಾತ್ರಿ ಶಾಲೆ ಸೇರಿ ತಮ್ಮ 24ನೇ ವಯಸ್ಸಿನಲ್ಲಿ ಎಸ್.ಎಸ್.ಸಿ. ಪರೀಕ್ಷೆ ಕಟ್ಟಿ ಪಾಸಾದರು. ಬೆಂಡಿ ಬಜಾರ್ ಹತ್ತಿರದ ಪಾಯಿದೋನಿಯಲ್ಲಿ ತಮ್ಮದೇ ಆದ ‘ಬಾವಾ ಟ್ರಾವೆಲ್ಸ್’ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಗಲ್ಫ್ ರಾಷ್ಟ್ರಗಳಿಗೆ ಹಲವಾರು ತುಳು, ಕನ್ನಡಿಗರನ್ನು ರಿಯಾಯಿತಿ ದರದಲ್ಲಿ ಕಳುಹಿಸುತ್ತಿರುವ ಪ್ರಾಮಾಣಿಕ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದಾರೆ. ಶಾಫಿ ವೆಲ್ಫೇರ್ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿಯಲ್ಲಿದ್ದು ಹಲವಾರು ವರ್ಷ ದುಡಿದಿದ್ದಾರೆ. ಹೀಗೆ ಮುಂಬೈ ಹಾಗೂ ಕರಾವಳಿ ಕರ್ನಾಟಕದ ಜನರಿಗೆ ಜಾತಿ, ಮತ ಮರೆತು ಸದಾ ಸಹಕಾರ ನೀಡುತ್ತ ಬಂದವರು ಅಹ್ಮದ್ ಬಾವಾ.

ರಾಷ್ಟ್ರ ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿರುವ ನೇವಿಯಲ್ಲಿ ಉನ್ನತಾಧಿಕಾರಿಯಾಗಿದ್ದ ಬಿ.ಎಚ್. ಸೂರಿಂಜೆ (ಬಾವಾ ಎಚ್. ಸೂರಿಂಜೆ) ಅವರದ್ದು ಶಿಸ್ತುಬದ್ಧವಾದ ಮೇರು ವ್ಯಕ್ತಿತ್ವ. ಹಗಲಿನಲ್ಲಿ ಆಫೀಸಿನಲ್ಲಿ ದುಡಿಯುತ್ತಿದ್ದರೂ ರಾತ್ರಿ ಮದರ್ ಇಂಡಿಯಾ ರಾತ್ರಿಶಾಲೆಯಲ್ಲಿ ಸಂಬಳದ ಹಂಗಿಲ್ಲದೆ ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು. ಈಗ ತಮ್ಮ ನಿವೃತ್ತಿ ಬದುಕನ್ನು ಊರಿನ ಬಜ್ಪೆೆಯಲ್ಲಿ ತಮ್ಮ ಮಗಳ ಜತೆ ನೆಮ್ಮದಿಯಿಂದ ಕಳೆಯುತ್ತಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ವರ್ಷಗಳ ಹಿಂದೆ ಮುಂಬೈಗೆ ಆಗಮಿಸಿ ಇಲ್ಲಿ ತನ್ನ ನೆಲೆ ಕಂಡುಕೊಳ್ಳುತ್ತಿರುವ ಜಮೀಲಾ ಜಬ್ಬರ್ ಹಿಪ್ಪರ್ಗಿ ಮೂಲತಃ ವಿಜಯಪುರದವರು. ಊರಿನಲ್ಲಿ ಸೋಶಿಯಾಲಜಿಯಲ್ಲಿ ಸ್ನಾತಕ ಪದವಿ, ಬಿ.ಎಡ್. ಪದವಿ ಪಡೆದಿರುವ ಇವರು, ಇಲ್ಲಿ ಇದೀಗ ಕನ್ನಡದಲ್ಲಿ ಎಂ.ಎ. ಮಾಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯದಲ್ಲಿ ಒಲವಿರುವ ಇವರು ಈಗ ಸದ್ಯ ಎಂ.ಫಿಲ್. ಮಾಡುವ ತಯಾರಿಯಲ್ಲಿದ್ದಾರೆ.

ಊರಲ್ಲಿ ಹತ್ತನೇ ತರಗತಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದು ಮುಂಬೈಗೆ ಆಗಮಿಸಿದ್ದ ಎ. ಎ. ಕುಳವೂರು (ಅಬ್ದುಲ್ ರೆಹಮಾನ್ ಎ. ಕುಳವೂರು) ಈ ಅಸಂಗತ ನಗರದಲ್ಲಿ ಒಂದು ವರ್ಷ ನೆಲೆಯಿಲ್ಲದೆ ಅಲೆದಾಡಿದವರು. ಆದರೆ ಈ ಮಾಯಾನಗರಿ ಯಾರನ್ನೂ ಹಿಂದಕ್ಕೆ ಎಸೆಯುವುದಿಲ್ಲ. ಒಂದು ಕಡೆ ನೆಲೆ ನಿಂತ ಎ.ಎ. ಕುಳವೂರು, ‘ರೀಡರ್ಸ್ ಡೈಜೆಸ್ಟ್’ನಲ್ಲಿ ಪುಟ್ಟ ಕೆಲಸಕ್ಕೆ ಸೇರಿಕೊಂಡರು. ಕೆಲಸದ ಜೊತೆಜೊತೆಗೆ ಜೈಹಿಂದ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಬಿಎ ಪದವಿ ಪಡೆದು, ಆನಂತರ ಹಿಂದುಜಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮುಗಿಸಿದರು. ತಮ್ಮ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಆ ಮಹಾನ್ ಸಂಸ್ಥೆಯ ಪ್ರಸರಣಾಧಿಕಾರಿಯಾಗಿ ಉನ್ನತ ಮಟ್ಟಕ್ಕೆ ಏರಿ ಇಂದು ನಿವೃತ್ತರಾದರೂ ಸಂಸ್ಥೆಯ ಸಲಹೆಗಾರರಾಗಿರುವುದು ಅವರ ವ್ಯಕ್ತಿತ್ವಕ್ಕೆ ಸಂದ ಗೌರವ. ಅವರ ಹಿರಿಯ ಮಗ ಮುನೀರ್ ಕುಳವೂರು ಎಂಬಿಎ ಮಾಡಿ ಟಾಟಾ ಕೆಮಿಕಲ್ಸ್‌ನಲ್ಲಿ ರೀಜನಲ್ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾರೆ. ಓರ್ವ ಮ್ಯಾರಥಾನ್ ಓಟಗಾರರೂ ಆಗಿರುವ ಮುನೀರ್‌ಗೆ ನ್ಯೂಯಾರ್ಕ್‌ನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಹೆಗ್ಗಳಿಕೆಯಿದೆ.

ಎ.ಎ. ಕುಳವೂರು ಅವರ ಕಿರಿಯ ಮಗ ಸಮೀರ್ ತನ್ನ ಕಿರಿವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಕಲಾವಿದ. ಪ್ರತಿಷ್ಠಿತ ಜೆ.ಜೆ. ಕಾಲೇಜಿನಲ್ಲಿ ಬಂಗಾರದ ಪದಕದೊಂದಿಗೆ ಸಾಧಕರ ಸಾಲಿಗೆ ಸೇರಿದವರು. ಸಮಕಾಲೀನ ಬದುಕಿಗೆ ಬಣ್ಣ ಬಳಿಯುವ ಇವರ ವರ್ಣಚಿತ್ರಗಳು, ಮ್ಯೂರಲ್ಸ್, ಪ್ರಿಂಟ್ಸ್ ಮತ್ತು ಗ್ರಾಫಿಕ್ ಡಿಸೈನ್ ಇತ್ಯಾದಿ ಕಲಾಕೃತಿಗಳು ಕಲಾಸಕ್ತರ ಮನ ಗೆದ್ದಿವೆ. 2018ರಲ್ಲಿ ನಡೆದ ‘ಎ ಮ್ಯಾನ್ ಆಫ್ ಕ್ರೌಡ್’ ಕುಳವೂರು ಅವರ ಪ್ರಥಮ ಏಕವ್ಯಕ್ತಿ ಪ್ರದರ್ಶನ. ಆನಂತರ ಎಂದೂ ಹಿಂದಿರುಗಿ ನೋಡದ ಸಮೀರ್ ಕುಳವೂರು ಈ ವರ್ಷದ ಪ್ರತಿಷ್ಠಿತ ಕಾಲಾಘೋಡ ಉತ್ಸವದಲ್ಲಿಯೂ ತಮ್ಮ ಆಕರ್ಷಕ ಕಲಾಕೃತಿಗಳ ಮೂಲಕ ಸುದ್ದಿ ಮಾಡಲಿದ್ದಾರೆ.

ಮುಂಬೈಯ ದೈನಿಕ ‘ಕರ್ನಾಟಕ ಮಲ್ಲ’ ಆರಂಭದ ಸಂದರ್ಭ ಮಲ್ಲಿಕಾರ್ಜುನ ಅವರ ಹೆಗಲಿಗೆ ಹೆಗಲು ಕೊಟ್ಟು ‘ಕರ್ನಾಟಕ ಮಲ್ಲ’ದ ಉದಯಕ್ಕೆ ಕಾರಣಕರ್ತರಾದವರು ಹತ್ತು ಹಲವು ಮಂದಿ. ಅವರಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಎ.ಆರ್. ಸುಬ್ಬಯ್ಯಕಟ್ಟೆ. (ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ) ಕರ್ನಾಟಕ ಮಲ್ಲದ ಅಸ್ತಿತ್ವಕ್ಕೆ ಗಟ್ಟಿ ಬುನಾದಿ ಹಾಕುವಲ್ಲಿ ನೆರವಾಗಿದ್ದ ಎ.ಆರ್.ಸುಬ್ಬಯ್ಯಕಟ್ಟೆ ಮೂಲತಃ ಕಾಸರಗೋಡಿನವರು. ಸದಾ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸುಬ್ಬಯ್ಯಕಟ್ಟೆ ಈಗ ತನ್ನ ಊರಿನಲ್ಲಿ ನೆಲೆಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತು ಇದರ ಅಧ್ಯಕ್ಷರಾಗಿದ್ದರಲ್ಲದೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂಬೈಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬಂದಿದ್ದ ಬಶೀರ್ ಬಿ. ಎಂ. ಇಲ್ಲಿ ಕನ್ನಡದಲ್ಲಿ ಸ್ನಾತಕ ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕದ ಜತೆ ಪ್ರಥಮ ರ‍್ಯಾಂಕ್ ನೊಂದಿಗೆ ಪಡೆದಿದ್ದರು. ಇಲ್ಲಿ ‘ಕರ್ನಾಟಕ ಮಲ್ಲ’ ಪತ್ರಿಕೆಯ ಮೂಲಕ ಪತ್ರಿಕಾ ರಂಗದ ಪ್ರಾಥಮಿಕ ಅನುಭವ ಪಡೆದಿದ್ದರು. ಮಿತ್ರರ ಜತೆ ಸೇರಿ ‘ಮುಂಬೈ ಚುಕ್ಕಿ ಸಂಕುಲ’ (ಮುಂಚುಸಂ) ಎಂಬ ಲೇಖಕ, ಕಲಾವಿದರ ಸಂಸ್ಥೆ ಕಟ್ಟುವಲ್ಲಿಯೂ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಅವರ ಚೊಚ್ಚಲ ಕವಿತಾ ಸಂಕಲನ ‘ಪ್ರವಾದಿಯ ಕನಸು’ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿದ್ದು, ಇಲ್ಲಿನ ಡಾ. ಜಿ.ಡಿ. ಜೋಶಿಯವರು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಸುರೇಶ್ ಆನಗಳ್ಳಿ ನಿರ್ದೇಶನದ ‘ಸಿರಿಸಂಪಿಗೆ’ ನಾಟಕದಲ್ಲಿ ಅಭಿನಯಿಸಿದ್ದ ಬಶೀರ್, ‘ಮುಂಚುಸಂ’ ಪ್ರಸ್ತುತಪಡಿಸಿದ ‘ಗರ್ಭ’, ‘ಉಬರ್’ ನಾಟಕಗಳಲ್ಲೂ ಪಾತ್ರಕ್ಕೆ ಜೀವ ತುಂಬಿದ್ದರು.

2012-2015ರ ಕಾಲಾವಧಿಯಲ್ಲಿ ಮುಂಬೈಯಲ್ಲಿದ್ದು ರೋನ್ಸ್ ಬಂಟ್ವಾಳ ಅವರ ಗರಡಿಯಲ್ಲಿ ಪಳಗಿದ್ದ ಆರಿಫ್ ಕಲ್ಕಟ್ಟ (ಮುಹಮ್ಮದ್ ಆರಿಫ್) ಇಲ್ಲಿದ್ದು ‘ದೆಹಲಿ ವಾರ್ತೆ’ ಪತ್ರಿಕೆಯ ಜಾಹೀರಾತು, ಪ್ರಸರಣ ವಿಭಾಗಗಳಲ್ಲಿ ಪರಿಣತಿ ಪಡೆದಿದ್ದರು. ಮುಂದೆ ಅನಿವಾರ್ಯ ಕಾರಣಗಳಿಂದ ತಾಯ್ನಿಡಿಗೆ ಮರಳಿದ್ದ ಆರಿಫ್ ವಿ-4 ನ್ಯೂಸ್ ಚಾನೆಲ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ವೀವ್‌ಲೈವ್ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಈಗಾಗಲೇ 3 ಕೋಟಿ ವೀಕ್ಷಕರನ್ನು ಹೊಂದಿದ ದಾಖಲೆ ನಿರ್ಮಿಸಿದ್ದಾರೆ. ಈ ಮೂವರು ಮುಂಬೈಗೆ ತಮ್ಮ ಎಳವೆಯಲ್ಲಿ ಆಗಮಿಸಿ ಇಲ್ಲಿ ವೃತ್ತಿ ಹಾಗೂ ಬದುಕಿನ ಪಾಠಗಳನ್ನು ಕಲಿತು ಅಲ್ಪಾವಧಿಯಲ್ಲಿ ಇಲ್ಲಿಂದ ತೆರಳಿ ತಾಯ್ನೆಲದಲ್ಲಿ ಸಾಧನೆಗೈದಿರುವುದನ್ನು ಮರೆಯಲಾರದು.

ಹೀಗೆ ಮುಂಬೈಯ ಅಂತರಂಗದಲ್ಲಿ ಕನ್ನಡ ಮನಸ್ಸುಗಳು ಮಾಡಿದ-ಮಾಡುತ್ತಿರುವ ಸಾಧನೆ ಮಹತ್ತರವಾದುದು. ಈ ಮೇಲಿನ ಸಾಧಕರಲ್ಲಿ ನಾವು ಗಮನಿಸಬೇಕಾದ ಒಂದು ಮಹತ್ವದ ಅಂಶವೆಂದರೆ ತಮ್ಮ ಹೆಸರಿನ ಜೊತೆ ಇಟ್ಟುಕೊಂಡಿರುವ ಊರಿನ ಹೆಸರು. ಆ ಪ್ರಕ್ರಿಯೆ ಈ ಮನಸ್ಸುಗಳ ತುಡಿತವನ್ನು ಸಾರುತ್ತವೆ. ಬಯೋ ಆನಾಲಿಟಿಕಲ್ ಸೈನ್ಸ್‌ನಲ್ಲಿ ಪಿಎಚ್.ಡಿ. ಅಧ್ಯಯನ ನಿರತ ಸುಹಾನಾ ಕುಳವೂರು, ಜಮೀಲಾ ಮೊದಲಾದವರು ಇಲ್ಲಿ ಪರಂಪರೆ ಮುಂದುವರಿಸುವಲ್ಲಿ ಕಟಿಬದ್ಧರಾಗಿದ್ದಾರೆ. ಖಾಲ್ಸಾ ಕಾಲೇಜಿನಲ್ಲಿ ಅಧ್ಯಾಪನ ಮಾಡುತ್ತಿರುವ ಸುಹಾನಾ ಕನ್ನಡನಾಡಿನ ನಂಟನ್ನು ಬಿಟ್ಟಿಲ್ಲ. ಜಾತಿ, ಮತ, ಧರ್ಮಗಳನ್ನು ಮೀರಿ ನಿಂತ ಇಂತಹ ಸಾಧಕರು ಕನ್ನಡದ ಸಾಧಕರು. ಇವರೆಲ್ಲರಿಗೂ, ಇವರಂತಿರುವ ಎಲ್ಲರಿಗೂ ಶತ ಕೋಟಿ ನಮನ

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News