ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ನಿಲುವಿಗೆ ಹಿರಿಯ ಕಾಂಗ್ರೆಸ್ ಮುಖಂಡರ ಬೆಂಬಲ

Update: 2021-10-01 05:34 GMT
ಕಪಿಲ್ ಸಿಬಲ್ (ಫೋಟೊ : PTI)

ಹೊಸದಿಲ್ಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಶೀಘ್ರವೇ ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟಿನ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಏತನ್ಮಧ್ಯೆ ಪಕ್ಷದಲ್ಲಿ ಚುನಾಯಿತ ನಾಯಕತ್ವ ಇಲ್ಲ ಎಂಬ ಕಪಿಲ್ ಸಿಬಲ್ ಅವರ ನಿಲುವಿಗೆ ಹಲವು ಮಂದಿ ಹಿರಿಯ ಕಾಂಗ್ರೆಸ್ ಮುಖಂಡರು ಬೆಂಬಲ ಸೂಚಿಸಿದ್ದಾರೆ.

ಜಿ23 ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ನಿವಾಸದ ಮುಂದೆ ಪಕ್ಷದ ಕಾರ್ಯಕರ್ತರ ಗುಂಪು ಪ್ರತಿಭಟನೆ ನಡೆಸುತ್ತಿರುವುದನ್ನು ಟೀಕಿಸಿದ ಪಕ್ಷದ ಮುತ್ಸದ್ಧಿಗಳಾದ ಗುಲಾಂ ನಬಿ ಆಝಾದ್, ಬಿ.ಎಸ್.ಹೂಡಾ, ಆನಂದ್ ಶರ್ಮಾ ಅವರ ನಿಲುವನ್ನು ಮತ್ತೊಬ್ಬ ಹಿರಿಯ ಮುಖಂಡ ಪಿ.ಚಿದಂಬರಂ ಸಮರ್ಥಿಸಿಕೊಂಡಿದ್ದಾರೆ.

ತಾವು ಬಿಜೆಪಿ ಸೇರುವುದಿಲ್ಲ ಎಂದು ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ ಕ್ಯಾಪ್ಟನ್ ಅವರ ಈ ದಿಢೀರ್ ಘೋಷಣೆ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜ್ಯೋತ್ ಸಿಂಗ್ ಸಿಧು ರಾಜೀನಾಮೆ ಘೋಷಿಸಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. "ನಾನು ಕಾಂಗ್ರೆಸ್‌ನಲ್ಲಿ ಉಳಿಯುವುದಿಲ್ಲ. ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಈ ರೀತಿ ನನ್ನನ್ನು ನಡೆಸಿಕೊಳ್ಳಬಾರದಿತ್ತು" ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಕ್ಯಾಪ್ಟನ್ ಹೇಳಿದ್ದಾರೆ. ಬಳಿಕ ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಿಂದ ಕಾಂಗ್ರೆಸ್ ಎಂಬ ಪದವನ್ನು ಕಿತ್ತುಹಾಕಿದ್ದಾರೆ.

ಪಂಜಾಬ್‌ನಲ್ಲಿ ಹೊಸ ಶಕ್ತಿ ಉದಯವಾಗಲಿದೆ ಎಂಬ ಹೇಳಿಕೆ ನೀಡುವ ಮೂಲಕ ಹೊಸ ಪಕ್ಷಕ್ಕೆ ಚಾಲನೆ ನೀಡುವ ಸುಳಿವು ನೀಡಿದ್ದಾರೆ. ಹಿಂದೆ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ವಿರೋಧಿಸಿ ಪಕ್ಷ ತ್ಯಜಿಸಿದ್ದ ಅವರು ಹೊಸ ಪಕ್ಷ ಕಟ್ಟಿದ್ದರು. ಇದೀಗ ಎರಡನೇ ಬಾರಿ ಅಂಥ ಸಾಧ್ಯತೆ ಕಂಡುಬರುತ್ತಿದೆ.

ಪಂಜಾಬ್ ಸಮಸ್ಯೆಯನ್ನು ರಾಹುಲ್ ಹಾಗೂ ಪ್ರಿಯಾಂಕಾ ನಿಭಾಯಿಸಿದ ಬಗ್ಗೆ ಹಿರಿಯ ಮುಖಂಡ ಪಿ.ಚಿದಂಬರಂ ಟ್ವೀಟ್ ಮೂಲಕ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಪಕ್ಷದ ವೇದಿಕೆಯಲ್ಲಿ ಅರ್ಥಪೂರ್ಣ ಸಂವಾದ ನಡೆಸಲು ಸಾಧ್ಯವಾಗದಿರುವ ಬಗ್ಗೆ ಅಸಹಾಯಕ ಎಂಬ ಭಾವನೆ ನನ್ನಲ್ಲಿದೆ. ಸಹೋದ್ಯೋಗಿ ಮತ್ತು ಸಂಸದನ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಕೂಡಾ ನೋವು ತಂದಿದೆ" ಎಂದು ಹೇಳಿದ್ದಾರೆ. ಮನೀಶ್ ತಿವಾರಿ ಹಾಗೂ ಶಶಿ ತರೂರ್ ಕೂಡಾ ಸಿಬಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News