ಅಮರಿಂದರ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು 78 ಶಾಸಕರು, ಸೋನಿಯಾ ಗಾಂಧಿಯಲ್ಲ: ಸುರ್ಜೆವಾಲಾ

Update: 2021-10-02 18:18 GMT

ಚಂಡೀಗಢ: ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಕಾರಣರಲ್ಲ.  ಆದರೆ ಪಕ್ಷದ 78 ಶಾಸಕರು ಸಿಂಗ್ ಅವರನ್ನು ತೆಗೆದುಹಾಕಲು ಕೋರಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಶನಿವಾರ ಹೇಳಿದ್ದಾರೆ.

ಕಾಂಗ್ರೆಸ್ ನಾಯಕತ್ವವು ತನ್ನನ್ನು ಅವಮಾನಿಸಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಮರಿಂದರ್ ಸಿಂಗ್ ಆರೋಪಿಸಿದ್ದರಿಂದ ಸುರ್ಜೆವಾಲಾ ಈ ಸ್ಪಷ್ಟನೆ ನೀಡಿದರು.

"ಯಾವುದೇ ಮುಖ್ಯಮಂತ್ರಿಯು ತನ್ನ ಎಲ್ಲ ಶಾಸಕರ ವಿಶ್ವಾಸವನ್ನು ಕಳೆದುಕೊಂಡಾಗ ಅವರು ತಮ್ಮ ಸ್ಥಾನದಲ್ಲಿ ಉಳಿಯಬಾರದು. ಪಂಜಾಬ್ ನಲ್ಲಿ 79 ಶಾಸಕರಲ್ಲಿ 78 ಶಾಸಕರು ಮುಖ್ಯಮಂತ್ರಿ ಬದಲಾವಣೆಗಾಗಿ ಪತ್ರ ಬರೆದಿದ್ದರು. ನಾವು ಸಿಎಂ ಬದಲಿಸದಿದ್ದರೂ ನೀವು ನಮ್ಮನ್ನು ಸರ್ವಾಧಿಕಾರಿ ಎಂದು ಆರೋಪಿಸುತ್ತೀರಿ. ಎಪ್ಪತ್ತೆಂಟು ಶಾಸಕರು ಒಂದು ಕಡೆ ಹಾಗೂ  ಸಿಎಂ ಇನ್ನೊಂದು ಬದಿಯಲ್ಲಿದ್ದರು. ನೀವು ಅವರ ಮಾತನ್ನು ಕೇಳುತ್ತಿರಲಿಲ್ಲ "ಎಂದು ಸುರ್ಜೆವಾಲಾ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು.

"ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದು, ಪಂಜಾಬ್‌ನಲ್ಲಿ ಸಿಎಂ ಬದಲಾವಣೆ ಮಾಡುವ ನಿರ್ಧಾರವನ್ನು ಅವರು ತೆಗೆದುಕೊಂಡಿರಲಿಲ್ಲ. ನಾನು ನಿಮಗೆ ಹೇಳಿದಂತೆ, 78 ಶಾಸಕರು ಪತ್ರ ಬರೆದಿದ್ದಾರೆ. ನಂತರ ನಾವು ಸಿಎಂ ಅನ್ನು ಬದಲಾಯಿಸಿದ್ದೇವೆ'' ಎಂದು ಸುರ್ಜೆವಾಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News