ದ.ಕ.: ನೆಲಕಚ್ಚಿದ ತುಳು ನಾಟಕ, ಸಿನೆಮಾ ಕ್ಷೇತ್ರ

Update: 2021-10-03 06:09 GMT

► ಲಾಕ್ ಡೌನ್ ಅನಂ(ವಾಂ)ತರ..!

ಮಂಗಳೂರು, ಅ.3: ದ.ಕ. ಜಿಲ್ಲೆಯು ಸಾಂಸ್ಕೃತಿಕ ವೈವಿಧ್ಯತೆಯ ತಾಣ ಎಂದೇ ಕರೆಯಲ್ಪಡುತ್ತದೆ. ನಾಟಕ, ಯಕ್ಷಗಾನ, ನೃತ್ಯ, ಸಂಗೀತ ಮಾತ್ರವಲ್ಲದೆ ತುಳು ಸಿನೆಮಾ ಅದೆಷ್ಟೋ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ. ಈ ಕ್ಷೇತ್ರಗಳನ್ನು ನಂಬಿಕೊಂಡ ಅದೆಷ್ಟೋ ಕುಟುಂಬಗಳ ಜೀವನಾಧಾರವಾಗಿದೆ. ಆದರೆ ಕೊರೋನ ಒಂದನೇ ಅಲೆಯ ಬಳಿಕ ಸರಿ ಸುಮಾರು ಎರಡು ವರ್ಷಗಳಿಂದ ಸ್ತಬ್ಧವಾಗಿರುವ ದ.ಕ. ಜಿಲ್ಲೆಯ ಈ ಸಾಂಸ್ಕೃತಿಕ ರಂಗ ಇನ್ನೂ ಚೇತರಿಸಿಕೊಳ್ಳದೆ ಇದನ್ನು ನಂಬಿದವರನ್ನು ಕೇಳುವವರೇ ಇಲ್ಲವಾಗಿದೆ.

ರಾಜ್ಯಾದ್ಯಂತ ಕೊರೋನ 2ನೇ ಅಲೆಯ ಅನ್‌ಲಾಕ್ ಬಳಿಕ ಬಹುತೇಕ ಜಿಲ್ಲೆಗಳಲ್ಲಿ ಶೇ. 50 ಆಸನಗಳೊಂದಿಗೆ ಕಾರ್ಯಾಚರಿಸುತ್ತಿದ್ದ ಸಿನೆಮಾ ಥಿಯೇಟರ್‌ಗಳನ್ನು (ಅಕ್ಟೋಬರ್ 1ರಿಂದ) ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ನಿರ್ದೇಶನ ದೊರಕಿದೆ. ಇದೇ ವೇಳೆ ಇತರ ಸಾಂಸ್ಕೃತಿಕ ಚಟುವಟಿಕೆಗಳೂ ನಿಧಾನಗತಿಯಲ್ಲಿ ಆರಂಭಗೊಳ್ಳುವ ಆಶಾವಾದ ವ್ಯಕ್ತವಾಗಿದೆ. ಹಾಗಿದ್ದರೂ ಸಾಂಸ್ಕೃತಿಕ ರಂಗದಲ್ಲಿ ತೊಡಗಿಕೊಂಡ ವೃತ್ತಿಪರ ಕಲಾವಿದರು, ಹವ್ಯಾಸಿ ಕಲಾವಿದರ ಜತೆ ಸಾಂಸ್ಕೃತಿಕ ರಂಗಕ್ಕೆ ಪೂರಕವಾದ ಲೈಟಿಂಗ್, ಮ್ಯೂಸಿಕ್, ಹಿನ್ನೆಲೆ ಗಾಯಕರು, ಮೇಕಪ್ ಕಲಾವಿದರು ಸೇರಿದಂತೆ ಸಾಂಸ್ಕೃತಿಕ ರಂಗವನ್ನೇ ಆಶ್ರಯಿಸಿಕೊಂಡಿರುವ ವಿವಿಧ ವಿಭಾಗಗಳಲ್ಲಿ ದುಡಿಯುವವರು ಕಂಗಾಲಾಗಿದ್ದಾರೆ.

ದ.ಕ. ಜಿಲ್ಲೆಯಲ್ಲೂ ಅಂದಾಜಿನ ಪ್ರಕಾರ ತುಳು ರಂಗ ಭೂಮಿ, ಸಿನೆಮಾ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ವಿಭಾಗಗಳಲ್ಲಿನ ಕಲಾವಿದರು ಸೇರಿದಂತೆ ದುಡಿಯುವ, ಉದ್ಯೋಗದಲ್ಲಿರುವ 10,000ಕ್ಕೂ ಅಧಿಕ ಮಂದಿ ಇದ್ದಾರೆ. ದ.ಕ. ಜಿಲ್ಲೆಯಲ್ಲಿ ಇನ್ನೂ ಕೊರೋನ ಶೇ.1ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದಾಖಲಾಗುತ್ತಿರುವುದರಿಂದ ಸಿನೆಮಾ ಥಿಯೇಟರ್‌ಗಳು ಶೇ.50ರಷ್ಟು ಆಸನದೊಂದಿಗೆ ಕಾರ್ಯಾಚರಿಸುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ಸಿನೆಮಾ ಥಿಯೇಟರ್‌ಗಳತ್ತ ಚಲನಚಿತ್ರ ಪ್ರೇಮಿಗಳೂ ಆಸಕ್ತಿ ತೋರುತ್ತಿಲ್ಲ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಸಿನೆಮಾ ತಯಾರಿಸಿ ಬಿಡುಗಡೆಗೆ ಮುಂದಾಗಿರುವ ತುಳು ಚಲನಚಿತ್ರ ನಿರ್ಮಾಪಕರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಜಿಲ್ಲೆಯ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಈಗಾಗಲೇ ಬಾಗಿಲು ಮುಚ್ಚಿದ್ದು, ಇನ್ನೂ ಕೆಲವು ಬಾಗಿಲು ಮುಚ್ಚುವ ಹಂತದಲ್ಲಿವೆ. ಇದು ಮುಂದುವರಿದಲ್ಲಿ ಪ್ರಾದೇಶಿಕ ಭಾಷಾ ಚಲನಚಿತ್ರಗಳು ತೆರೆಕಾಣಲು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕ ತುಳು ಸಿನೆಮಾ ನಿರ್ದೇಶಕ, ನಿರ್ಮಾಪಕರದ್ದಾಗಿದೆ.

ನಗರದ ನಾಟಕ ಪ್ರದರ್ಶನದ ಪ್ರಮುಖ ತಾಣಗಳಾದ ಪುರಭವನ, ಡಾನ್‌ಬಾಸ್ಕೋ ಹಾಲ್ ಸೇರಿದಂತೆ ಹಲವು ರಂಗಮಂದಿರಗಳೂ ಸ್ತಬ್ಧಗೊಂಡು ಕಲಾವಿದರ ಶೋಚನೀಯ ಬದುಕನ್ನು ಅಣಕಿಸುತ್ತಿವೆ. ಸಾಂಸ್ಕೃತಿಕ ರಂಗ ಸ್ತಬ್ಧವಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಆದಾಯ ಕೂಡಾ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಮಾತ್ರವಲ್ಲದೆ ಜಿಲ್ಲೆಯಲ್ಲೂ ಸದ್ಯ ರಾಜಕೀಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆರಂಭವಾಗಿವೆ. ಆದರೆ ನಾಟಕ, ಯಕ್ಷಗಾನ, ಸಿನೆಮಾ, ಸಂಗೀತಕ್ಕೆ ಮಾತ್ರ ಅವಕಾಶ ನೀಡುತ್ತಿಲ್ಲ. ಕೊರೋನ ಎರಡನೇ ಅಲೆಯ ಅನ್‌ಲಾಕ್ ಬಳಿಕ ಎಲ್ಲಾ ಕ್ಷೇತ್ರಗಳು ಸಹಜ ಸ್ಥಿತಿಯತ್ತ ಮರಳಲು ಪ್ರಯತ್ನಿಸುತ್ತಿವೆ. ಆದರೆ ಕಲಾವಿದರ ಬದುಕು ಇನ್ನೂ ಸ್ತಬ್ಧವಾಗಿದೆ. ಕಲಾವಿದರು ಎರಡು ವರ್ಷಗಳಿಂದ ಪಡುತ್ತಿರುವ ಕಷ್ಟ ಅವರಿಗೆ ಮಾತ್ರ ತಿಳಿದಿದೆ. ಸರಕಾರದಿಂದ ನಾವೇನೂ ಅಂಗಲಾಚುತ್ತಿಲ್ಲ. ಕಲಾವಿದರಾದ ನಾವು ಸ್ವಾಭಿಮಾನದಿಂದಲೇ ಬದುಕುತ್ತಿದ್ದೇವೆ. ನಮಗೆ ಬದುಕಲು ಬಿಡಿ, ನಮಗೆ ಕೆಲಸ ಮಾಡಲು, ಮನರಂಜನೆ ನೀಲು ಅವಕಾಶ ಕೊಡಿ.

ದೇವದಾಸ ಕಾಪಿಕಾಡ್, ಹಿರಿಯ ರಂಗಭೂಮಿ, ಚಲನಚಿತ್ರ ನಟ- ನಿರ್ದೇಶಕರು

ಸುಮಾರು ನಾಲ್ಕು ಸಾವಿರದಷ್ಟು ಕಲಾವಿದರು ರಂಗಭೂಮಿಯನ್ನೇ ಅವಲಂಬಿಸಿ ಬದುಕುವವರಿದ್ದಾರೆ. ಕಲಾವಿದರ ಸ್ಥಿತಿ ಶೋಚನೀಯವಾಗಿದೆ. ಚಿತ್ರ ಮಂದಿರಗಳನ್ನು ಶೇ.100 ಆಸನಗಳೊಂದಿಗೆ ತೆರೆಯಲು ಅವಕಾಶ ನೀಡಬೇಕು. ಸುಮಾರು 20ರಿಂದ 25ರಷ್ಟು ಸಿನೆಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಎಷ್ಟೋ ಸಿನೆಮಾಗಳು ಅರ್ಧದಲ್ಲೇ ನಿಂತಿವೆ. ಬೆಳವಣಿಗೆಯ ಹಂತದಲ್ಲಿದ್ದ ತುಳು ಸಿನೆಮಾ ಕ್ಷೇತ್ರ ಕೋವಿಡ್ ಬಳಿಕ ಕಮರಿ ಹೋಗಿದೆ. ಇನ್ನಾದರೂ ಕೋವಿಡ್ ನಿಯಮಗಳೊಂದಿಗೆ ನಾಟಕ, ಭರತನಾಟ್ಯ, ಸಿನೆಮಾ ಸೇರಿದಂತೆ ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಆರಂಭಿಲು ಸರಕಾರ ಆದೇಶ ನೀಡಬೇಕು.

ವಿಜಯ ಕುಮಾರ್ ಕೊಡಿಯಾಲಬೈಲ್, ತುಳು ನಾಟಕ, ಸಿನೆಮಾ ನಿರ್ದೇಶಕ

ದ.ಕ. ಜಿಲ್ಲೆಯಲ್ಲಿ ವೃತ್ತಿಪರ ನಾಟಕ ಕಲಾವಿದರು ಕಳೆದ 2 ವರ್ಷಗಳಿಂದ ಪ್ರದರ್ಶನವಿಲ್ಲದೆ ಸಮಸ್ಯೆ ಎದು ರಿಸುತ್ತಿದ್ದಾರೆ. 45 ವರ್ಷಗಳಿಂದ ಕಲಾ ಸೇವೆ ಮಾಡಿದವರು ಇಂದು ಆತಂಕದಲ್ಲಿದ್ದಾರೆ. ನಾಟಕ ಕಲಾವಿದರ ಜತೆಗೆ ಅವರನ್ನು ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟದಲ್ಲಿವೆ. ಇದೀಗ ದಸರಾ ಮಹೋತ್ಸವ ಆರಂಭವಾಗಲಿದೆ. ಆ ಸಂದರ್ಭದಲ್ಲಿ ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡುವ ಮೂಲಕ ಕಲಾವಿದರ ಜತೆಗೆ ಕಲಾ ಕ್ಷೇತ್ರವನ್ನು ನಂಬಿಕೊಂಡಿರುವ ಇತರ ವಿಭಾಗಗಳ ವೃತ್ತಿಪರರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕೆಂಬುದು ಸರಕಾರಕ್ಕೆ ನಮ್ಮ ಮನವಿ.

ಕಿಶೋರ್ ಡಿ. ಶೆಟ್ಟಿ, ಚಲನಚಿತ್ರ ನಿರ್ಮಾಪಕರು

ಈಗಾಗಲೇ ಕೊರೋನ ಲಾಕ್‌ಡೌನ್‌ನಿಂದ ಸಿನೆಮಾ ಕ್ಷೇತ್ರ ಸೇರಿದಂತೆ ಕರಾವಳಿಯ ಸಾಂಸ್ಕೃತಿಕ ನಗರಿ ನಲುಗಿ ಹೋಗಿದೆ. ಶೇ.50 ಸೀಟು ನಿಯಮದಿಂದಾಗಿ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿಲ್ಲ. ಹೀಗಾಗಿ ಸಿನೆಮಾ ಮಾಡಿದವರು ಆತಂಕದಲ್ಲಿದ್ದಾರೆ. ಜತೆಗೆ ಸಿನೆಮಾ, ನಾಟಕ ನಂಬಿರುವ ಕಲಾವಿದರು ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಸರಕಾರ ಇದನ್ನು ಅರ್ಥಮಾಡಿಕೊಂಡು ಅನುಮತಿ ನೀಡಬೇಕು.

ಪ್ರಕಾಶ್ ಪಾಂಡೇಶ್ವರ, ಚಲನಚಿತ್ರ ನಿರ್ಮಾಪಕರು

ಪ್ರಸಕ್ತ ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇ.1ರೊಳಗೆ ಇದೆ. ಅದು ಇನ್ನೂ ಕಡಿಮೆಯಾಗಬೇಕಿದೆ. ಮುಂದಿನ ವಾರದಿಂದ ಕೋವಿಡ್ ಪ್ರಮಾಣ ಒಂದಕ್ಕಿಂತ ಕೆಳಕ್ಕೆ ಇಳಿಯುವ ಎಲ್ಲಾ ಲಕ್ಷಣಗಳಿವೆ. ಹಾಗಾಗಿ ದಸರಾ ರಜೆ ಮುಗಿದ ಬಳಿಕ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ನಾಟಕ, ಯಕ್ಷಗಾನ ಆರಂಭಿಸುವುದು ಹಾಗೂ ಚಲನಚಿತ್ರ ಥಿಯೇಟರ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು. ದಸರಾ ಸಂದರ್ಭದಲ್ಲಿಯೂ ದೇವಸ್ಥಾನಗಳಲ್ಲಿ ಹಮ್ಮಿಕೊಳ್ಳಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಕ್ರಮ ವಹಿಸಿ ಜನ ಹೆಚ್ಚು ಸೇರುವುದನ್ನು ತಪ್ಪಿಸುವಂತೆ ದೇವಸ್ಥಾನ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News