×
Ad

ಬಿಜೆಪಿ ವಿರೋಧಿ ಕೂಟಕ್ಕೆ ಮಮತಾ ಬ್ಯಾನರ್ಜಿ ಸಾರಥ್ಯ ಸಾಧ್ಯತೆ

Update: 2021-10-04 09:56 IST
ಮಮತಾ ಬ್ಯಾನರ್ಜಿ (Photo source: PTI)

ಹೊಸದಿಲ್ಲಿ, ಅ.4: ಮುಂದಿನ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷದ ವಿಸ್ತರಣೆ ಪ್ರಕ್ರಿಯೆ ವೇಗ ಪಡೆದಿದ್ದು, ಪಕ್ಷದ ನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2024ರ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಕೂಟದ ನಾಯಕತ್ವ ವಹಿಸುವ ಸಾಧ್ಯತೆ ನಿಚ್ಚಳವಾಗಿದೆ.

ಪಕ್ಷಕ್ಕೆ ಈಗಾಗಲೇ ಮಾಜಿ ಕಾಂಗ್ರೆಸ್ ಮುಖಂಡರಾದ ಸುಮಿತ್ರಾ ದೇವ್ ಮತ್ತು ಗೋವಾದ ಮಾಜಿ ಸಿಎಂ ಲೂಝಿನೊ ಫೆಲೆರಿಯೊ ಸೇರ್ಪಡೆಯಾಗಿದ್ದು, ಮೇಘಾಲಯದ ಮಾಜಿ ಸಿಎಂ ಮುಕುಲ್ ಸಂಗ್ಮಾ ಕೂಡಾ ಪಕ್ಷ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾದ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಕೂಡಾ ಈಗಾಗಲೇ ಮಮತಾ ಅವರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಟಿಎಂಸಿ ವಿಸ್ತರಣೆ ಮತ್ತಷ್ಟು ದೊಡ್ಡ ರಾಜಕೀಯ ಪರಿಣಾಮ ಬೀರಲಿದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಯಾವುದೇ ಮೈತ್ರಿಕೂಟ ರಚನೆಗೆ ಹಿರಿಯ ಟಿಎಂಸಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಬಿಜೆಪಿಯೇತರ ಕೂಟಕ್ಕೆ ನೇತೃತ್ವ ವಹಿಸಲು ಮಮತಾ ಅವರೊಬ್ಬರೇ ಪರ್ಯಾಯ ಎಂಬ ಹೇಳಿಕೆ ನೀಡಿದ್ದಾರೆ.

ತೃಣಮೂಲ ಸಂಸದ ಸುದೀಪ್ ಬಂಡೋಪಾಧ್ಯಾಯ ಈ ಬಗ್ಗೆ ಮಾತನಾಡಿ, "ವಿರೋಧ ಪಕ್ಷಗಳ ಸಾಧನೆಯನ್ನು ನೋಡಿದರೆ, 2024ರ ಚುನಾವಣೆಯಲ್ಲಿ ಬಿಜೆಪಿಯೇತರ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ಮಾತ್ರವೇ ನಾಯಕತ್ವ ವಹಿಸಬಲ್ಲರು. ಕಾಂಗ್ರೆಸ್ ಪಕ್ಷ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಸವಾಲು ಒಡ್ಡಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊಂದಿರುವ ಎಲ್ಲ ಇತರ ಪಕ್ಷಗಳ ಮುಖಂಡರಿಗೆ ಮಮತಾ ಮಾತ್ರವೇ ಸರ್ವಸಮ್ಮತ ನಾಯಕಿ" ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರ ಅಳಿಯ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇತ್ತೀಚೆಗೆ ಹೇಳಿಕೆ ನೀಡಿ, "ಕಳೆದ ಏಳು ವರ್ಷಗಳಲ್ಲಿ ನಾವಷ್ಟೇ ಬಿಜೆಪಿಯನ್ನು ಸೋಲಿಸಿದ್ದೇವೆ. ಕಾಂಗ್ರೆಸ್ ಪಕ್ಷ ಬಿಜೆಪಿ ಎದುರು ಸೋಲುತ್ತಾ ಬಂದಿದೆ. ನಾವು ಬಿಜೆಪಿಯನ್ನು ಸೋಲಿಸಲು ಬಯಸಿದ್ದೇವೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News