ಪ್ಯಾಂಡೋರಾ ಪೇಪರ್ಸ್‍ ಲೀಕ್: ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್‌ ಅಂಬಾನಿ, ಶಕೀರಾ ಹೆಸರುಗಳು

Update: 2021-10-04 17:55 GMT

ಹೊಸದಿಲ್ಲಿ,ಅ.4: ಸರಕಾರದ ಕಣ್ಣಿನಿಂದ ತಮ್ಮ ಸಂಪತ್ತನ್ನು ಮರೆಮಾಚಲು ಜಾಗತಿಕ ತೆರಿಗೆ ಸ್ವರ್ಗಗಳನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿರುವ ಜಾಗತಿಕ ನಾಯಕರು,ಸರಕಾರಿ ಅಧಿಕಾರಿಗಳು ಮತ್ತು ಗಣ್ಯರ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಅನಿಲ ಅಂಬಾನಿ ಮತ್ತು ಕಿರಣ ಮಝಮ್ದಾರ್ ಶಾ ಹಾಗೂ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರು ಸೇರಿದ್ದಾರೆ.

ಇಂತಹ ತೆರಿಗೆ ಸ್ವರ್ಗಗಳನ್ನು ಬಳಸಿಕೊಂಡಿರುವ ಜಾಗತಿಕ ಖ್ಯಾತಿಯ ವ್ಯಕ್ತಿಗಳಲ್ಲಿ ಪಾಕಿಸ್ತಾನದ ಹಣಕಾಸು ಸಚಿವ ಶೌಕತ್ ತರಿನ್,ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ ಮತ್ತು ಪಾಪ್ ಗಾಯಕಿ ಶಕೀರಾ ಅವರೂ ಒಳಗೊಂಡಿದ್ದಾರೆ.

ಅಂತರ್ಜಾಲದಲ್ಲಿ ಬಹಿರಂಗಗೊಳಿಸಲಾಗಿರುವ ಈ ಸ್ಫೋಟಕ ಮಾಹಿತಿಗಳು ತಮ್ಮ ಹಣಕಾಸು ಚಟುವಟಿಕೆಗಳನ್ನು ರಹಸ್ಯವಾಗಿಡಲು ಬಯಸಿದ್ದ ಗ್ರಾಹಕರಿಗಾಗಿ ಮುಖವಾಡ ಕಂಪನಿಗಳನ್ನು ಸ್ಥಾಪಿಸಿದ್ದ 14 ವಿದೇಶಿ ಸೇವಾ ಸಂಸ್ಥೆಗಳ 1.19 ಕೋಟಿಗೂ ಅಧಿಕ ದಾಖಲೆಗಳನ್ನು ಆಧರಿಸಿವೆ.

ವಾಷಿಂಗ್ಟನ್ ಮೂಲದ ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ)ಕ್ಕೆ ಈ ದಾಖಲೆಗಳನ್ನು ಸೋರಿಕೆ ಮಾಡಲಾಗಿದ್ದು,ಬೃಹತ್ ಜಾಗತಿಕ ತನಿಖೆಯ ಭಾಗವಾಗಿ ಅದು ಈ ದಾಖಲೆಗಳನ್ನು ದಿ ಗಾರ್ಡಿಯನ್,ಬಿಬಿಸಿ ಪನೋರಮಾ ಮತ್ತು ದಿ ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಹಲವಾರು ಮಾಧ್ಯಮ ಪಾಲುದಾರರೊಂದಿಗೆ ಹಂಚಿಕೊಂಡಿತ್ತು. ಭಾರತದಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ತನಿಖೆಯನ್ನು ಕೈಗೊಂಡಿತ್ತು.
   
 ಐಸಿಐಜೆ ತನ್ನ ತನಿಖೆಯನ್ನು ಪ್ಯಾಂಡೋರಾ ಪೇಪರ್ಸ್ ಎಂದು ಕರೆದಿದೆ. ಎಲ್ಲ ವಿದೇಶಿ ಸಂಸ್ಥೆಗಳೂ ಕಾನೂನುಬಾಹಿರವಲ್ಲ. ಆದರೆ ತೆರಿಗೆ ವಂಚಕರು,ದಗಾಕೋರರು ಮತ್ತು ಅಕ್ರಮ ಹಣ ವಹಿವಾಟು ನಡೆಸುವವರು ಹೆಚ್ಚಾಗಿ ಗೌಪ್ಯತೆಯನ್ನು ಕಾಯ್ದುಕೊಳ್ಳುವ ತೆರಿಗೆ ಸ್ವರ್ಗಗಳನ್ನೇ ಬಳಸುತ್ತಾರೆ. 2013ರಿಂದ ಹಣಕಾಸು ದತ್ತಾಂಶಗಳ ಸರಣಿ ಸೋರಿಕೆಗಳು ವಿದೇಶಗಳನ್ನು ತಲ್ಲಣಗೊಳಿಸಿವೆ. ಪಂಡೋರಾ ಪೇಪರ್ಸ್ ಈ ಸರಣಿಯಲ್ಲಿ ಇತ್ತೀಚಿನದಾಗಿದ್ದು,ಅತ್ಯಂತ ಹೆಚ್ಚಿನ ದಾಖಲೆಗಳನ್ನು ಒಳಗೊಂಡಿದೆ.
 
ರಿಲಯನ್ಸ್ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ ನ ಅನಿಲ ಅಂಬಾನಿ ಮತ್ತು ಅವರ ಪ್ರತಿನಿಧಿಗಳು ಜರ್ಸಿ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಸೈಪ್ರಸ್ಗಳಲ್ಲಿ ಕನಿಷ್ಠ 14 ವಿದೇಶಿ ಕಂಪನಿಗಳನ್ನು ಹೊಂದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ ಪ್ರೆಸ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ. ಈ ಪೈಕಿ ಏಳು ಕಂಪನಿಗಳು ಕನಿಷ್ಠ 1.3 ಶತಕೋಟಿ ಡಾ.(ಸುಮಾರು 9,649 ರೂ.)ಗಳನ್ನು ಸಾಲವಾಗಿ ಪಡೆದುಕೊಂಡು ಹೂಡಿಕೆ ಮಾಡಿವೆ ಎನ್ನಲಾಗಿದೆ.

ಆದಾಗ್ಯೂ ಅನಿಲ್ ಅಂಬಾನಿ2020,ಫೆಬ್ರವರಿಯಲ್ಲಿ ತಾನು ದಿವಾಳಿಯಾಗಿದ್ದೇನೆ ಮತ್ತು ತನ್ನ ನಿವ್ವಳ ಮೌಲ್ಯ ಝೀರೊ ಆಗಿದೆ ಎಂದು ಲಂಡನ್ನಲ್ಲಿಯ ನ್ಯಾಯಾಲಯವೊಂದಕ್ಕೆ ತಿಳಿಸಿದ್ದರು. ಆದರೆ,ಅಂಬಾನಿಯವರು ವಿದೇಶಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆಗಳಿವೆ ಎಂದು ನ್ಯಾಯಾಲಯವು ಹೇಳಿತ್ತು. ಬಳಿಕ ನ್ಯಾಯಾಲಯವು ಮೂರು ಚೀನಿ ಬ್ಯಾಂಕುಗಳಿಗೆ 716 ಮಿ.ಡಾ.(ಸುಮಾರು 5,315 ಕೋ.ರೂ.)ಗಳನ್ನು ಪಾವತಿಸುವಂತೆ ಅನಿಲ ಅಂಬಾನಿಯವರಿಗೆ ಆದೇಶಿಸಿತ್ತಾದರೂ ಅದನ್ನು ಅವರು ಪಾಲಿಸಿರಲಿಲ್ಲ.
    
ಹೂಡಿಕೆ ಬ್ಯಾಂಕ್ ಅಲೆಗ್ರೋ ಕ್ಯಾಪಿಟಲ್ನಲ್ಲಿ ಹೆಚ್ಚಿನ ಪಾಲು ಬಂಡವಾಳವನ್ನು ಹೊಂದಿರುವ ಕುನಾಲ್ ಕಶ್ಯಪ ಅವರು ಮಾರಿಷಸ್ ಮೂಲದ ಕಂಪನಿ ಗ್ಲೆಂಟೆಕ್ ಇಂಟರ್ನ್ಯಾಷನಲ್ 2015ರಲ್ಲಿ ನ್ಯೂಜಿಲ್ಯಾಂಡ್ನಲ್ಲಿ ಸ್ಥಾಪಿಸಿದ್ದ ದಿ ಡೀನ್ಸ್ಟೋನ್ ಟ್ರಸ್ಟ್ ನ  ʼರಕ್ಷಕʼ ರಾಗಿದ್ದಾರೆ ಎನ್ನುವುದನ್ನು ‌ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ತನ್ನ ತನಿಖೆಯಲ್ಲಿ ಪತ್ತೆ ಹಚ್ಚಿದೆ.

ಬಯೊಕಾನ್ ನ ಕಾರ್ಯಾಧ್ಯಕ್ಷೆ ಕಿರಣ ಮಝುಮ್ದಾರ್ ಶಾ ಅವರ ಪತಿ ಮ್ಯಾಕ್ಲಂ ಮಾರ್ಶಲ್ ಶಾ ಅವರು ಗ್ಲೆಂಟೆಕ್ನಲ್ಲಿ ಶೇ.99ರಷ್ಟು ಒಡೆತನವನ್ನು ಹೊಂದಿದ್ದಾರೆ ಎನ್ನಲಾಗಿದೆ. ಜ.8ರಂದು ಸೆಬಿ ಬಯೊಕಾನ್ ಶೇರುಗಳಲ್ಲಿ ಇನ್ಸೈಡರ್ ಟ್ರೇಡಿಂಗ್ಗಾಗಿ ಅಲೆಗ್ರೋ ಕ್ಯಾಪಿಟಲ್ ಮತ್ತು ಕಶ್ಯಪ ಅವರು ಶೇರು ಮಾರುಕಟ್ಟೆಗಳಲ್ಲಿ ವ್ಯವಹರಿಸುವುದನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿತ್ತು.

ಕಶ್ಯಪ್ ಅವರು ಹಣಕಾಸು ಸಲಹಾ ಸೇವೆಯನ್ನು ನಡೆಸುತ್ತಿದ್ದು ಬಯೊಕಾನ್ ಮತ್ತು ಗ್ಲೆಂಟೆಕ್ ಅದನ್ನು ಬಳಸಿಕೊಂಡಿವೆ ಎಂದು ಕಿರಣ ಮಝುಮ್ದಾರ್ ಶಾ ಅವರು ಮಾಧ್ಯಮಗಳಿಗೆ ತಿಳಿಸಿದ್ದರು. ಪಂಡೋರಾ ಪೇಪರ್ಸ್ ಬಹಿರಂಗಗೊಳಿಸಿರುವಂತೆ ಸಚಿನ್ ತೆಂಡುಲ್ಕರ್ ಮತ್ತು ಅವರ ಕುಟುಂಬದ ಸದಸ್ಯರು 2016ರಲ್ಲಿ ಸಮಾಪನಗೊಂಡಿದ್ದ ವಿದೇಶಿ ಸಂಸ್ಥೆಯ ಲಾಭದಾಯಕ ಒಡೆತನವನ್ನು ಹೊಂದಿದ್ದರು. ತೆಂಡುಲ್ಕರ್,‌ ಅವರ ಪತ್ನಿ ಅಂಜಲಿ ಮತ್ತು ಮಾವ ಆನಂದ ಮೆಹ್ತಾ ಅವರನ್ನು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ನ ಸಾಸ್ ಇಂಟರ್ನ್ಯಾಶನಲ್ ಲಿ.ನ ಲಾಭದಾಯಕ ಮಾಲಿಕರು ಮತ್ತು ನಿರ್ದೇಶಕರು ಎಂದು ಹೆಸರಿಸಲಾಗಿದೆ. ಪನಾಮಾ ದಾಖಲೆಗಳು ಬಹಿರಂಗಗೊಂಡ ಬಳಿಕ ಮೂರು ತಿಂಗಳುಗಳಲ್ಲಿ ಕಂಪನಿಯನ್ನು ಸಮಾಪನಗೊಳಿಸಲಾಗಿತ್ತು ಎನ್ನಲಾಗಿದೆ.
 
ಹೂಡಿಕೆಗಳು ಶಾಸನಬದ್ಧವಾಗಿದ್ದವು ಮತ್ತು ತೆಂಡುಲ್ಕರ್ ಅವರ ಆದಾಯ ತೆರಿಗೆ ರಿಟರ್ನ್ ಗಳಲ್ಲಿ ಅವುಗಳನ್ನು ಘೋಷಿಸಲಾಗಿತ್ತು. ಅವರು ಅಕ್ರಮ ಹಣ ವಹಿವಾಟು ಅಥವಾ ತೆರಿಗೆ ವಂಚನೆಯಲ್ಲಿ ತೊಡಗಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಚಿನ್ ತೆಂಡುಲ್ಕರ್ ಪ್ರತಿಷ್ಠಾನದ ನಿರ್ದೇಶಕ ಮೃಣ್ಮಯ ಮುಖರ್ಜಿ ಹೇಳಿದ್ದಾರೆ.

ಸರಕಾರದಿಂದ ತನಿಖೆ ಪ್ರಕಟ

ಪಂಡೋರಾ ಪೇಪರ್ಸ್ ಸೋರಿಕೆಯ ಬಗ್ಗೆ ತನಿಖೆಯನ್ನು ನಡೆಸುವುದಾಗಿ ಕೇಂದ್ರವು ಸೋಮವಾರ ಪ್ರಕಟಿಸಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯ ಅಧ್ಯಕ್ಷರ ನೇತೃತ್ವದ ಜಾರಿ ನಿರ್ದೇಶನಾಲಯ,ಆರ್ಬಿಐ ಮತ್ತು ಹಣಕಾಸು ಗುಪ್ತಚರ ಘಟಕದ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದು ಪಂಡೋರಾ ಪೇಪರ್ಸ್ ಕುರಿತು ವರದಿಗಳನ್ನು ಪರಿಶೀಲಿಸಲಿದೆ ಮತ್ತು ಸಂಬಂಧಿತ ಸುಳಿವುಗಳ ಬೆನ್ನತ್ತಲಿದೆ. ಈ ಪ್ರಕರಣಗಳಲ್ಲಿ ಕಾನೂನಿನಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News