'ನೀಟ್' ಪರೀಕ್ಷೆ ರದ್ದಾಗುವಂತಾಗಲು ಸಹಕರಿಸುವಂತೆ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸ್ಟಾಲಿನ್

Update: 2021-10-05 09:50 GMT

ಚೆನ್ನೈ : ನೀಟ್ ರದ್ದುಗೊಂಡು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರಕಾರಗಳಿಗೆ ಹೆಚ್ಚಿನ ಅಧಿಕಾರ ದೊರೆಯುವಂತಾಗುವ ಉದ್ದೇಶದಿಂದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು 11 ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಹಾಗೂ ಗೋವಾ ಸೀಎಂಗೆ ಪತ್ರ ಬರೆದಿದ್ದಾರೆ.

ಅಕ್ಟೋಬರ್ 11 ದಿನಾಂಕ ನಮೂದಿತವಾಗಿರುವ ಅರೆ-ಔಪಚಾರಿಕ ಪತ್ರವನ್ನು ಸ್ಟಾಲಿನ್ ಅವರು ಆಂಧ್ರ ಪ್ರದೇಶ, ಛತ್ತೀಸಗಢ, ದಿಲ್ಲಿ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗೋವಾ ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ. "ನಮ್ಮ ಸಂವಿಧಾನದಲ್ಲಿ ಅಡಕವಾಗಿರುವಂತೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರವಿರುವಂತೆ ಮಾಡಲು ನಾವು ಜತೆಯಾಗಿ ಹೋರಾಟ ನಡೆಸಬೇಕಿದೆ" ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗೆ ನೀಟ್ ಹೇಗೆ ಅಡ್ಡಿಯಾಗುತ್ತಿದೆ ಎಂದು ತಿಳಿಸುವ ಜಸ್ಟಿಸ್ ಎ ಕೆ ರಾಜನ್ ಸಮಿತಿ ವರದಿಯನ್ನೂ ತಮ್ಮ ಪತ್ರದ ಜತೆಗೆ ಲಗತ್ತಿಸಿದ್ದಾರೆ. ತಮಿಳುನಾಡು ಸರಕಾರ ಈ ಸಮಿತಿಯ ಶಿಫಾರಸುಗಳ ಆಧಾರದಲ್ಲಿಯೇ ರಾಜ್ಯದ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗೆ ನೀಟ್  ರದ್ದುಗೊಳಿಸಿ ನಿರ್ಣಯ ಅಂಗೀಕರಿಸಿತ್ತು. ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಇನ್ನಷ್ಟೇ ದೊರಕಬೇಕಿದೆ.

"ರಾಜ್ಯಗಳು ಸ್ಥಾಪಿಸಿ ನಡೆಸುತ್ತಿರುವ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ಕುರಿತು ನಿರ್ಧರಿಸುವ ಹಕ್ಕುಗಳನ್ನು ಮೊಟಕುಗೊಳಿಸುವುದು ಅಧಿಕಾರಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ತಮ್ಮ ರಾಜ್ಯದ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿ ಕುರಿತಂತೆ ರಾಜ್ಯಗಳೇ ನಿರ್ಧರಿಸುವಂತಾಗಬೇಕು. ಆದುದರಿಂದ ರಾಜ್ಯಗಳ ವಿದ್ಯಾರ್ಥಿಗಳು ಪ್ರಮುಖವಾಗಿ ಗ್ರಾಮೀಣ ಭಾಗಗಳು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿ ದೊರೆಯುವ ಸಂದರ್ಭ ಕಷ್ಟಗಳೆದುರಾಗದಂತೆ ನೋಡಿಕೊಳ್ಳಬೇಕು" ಎಂದು ಸ್ಟಾಲಿನ್ ಅವರ ಪತ್ರದಲ್ಲಿ ವಿವರಿಸಲಾಗಿದೆ.

ಜಸ್ಟಿಸ್ ರಾಜನ್ ಸಮಿತಿ ವರದಿಯ ಅನುವಾದಿತ ಪ್ರತಿಯನ್ನು ಆಯಾಯ ರಾಜ್ಯ ಸರಕಾರಗಳಿಗೆ ಖುದ್ದಾಗಿ ನೀಡುವಂತೆ ಡಿಎಂಕೆ ಸಂಸದರಿಗೆ ತಿಳಿಸಿರುವುದಾಗಿಯೂ ಸ್ಟಾಲಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News