ರೈತರ ಮೇಲೆ ಚಲಾಯಿಸಿದ್ದ ಕಾರನ್ನು ಅಜಯ್ ಮಿಶ್ರಾ ಅವರ ಮಗ ಓಡಿಸುತ್ತಿದ್ದ: ಗಾಯಗೊಂಡ ರೈತನ ಆರೋಪ
ಹೊಸದಿಲ್ಲಿ, ಅ.5: ಉತ್ತರಪ್ರದೇಶ ಲಖೀಂಪುರ ಖೇರಿಯಲ್ಲಿ ರವಿವಾರ ನಡೆದ ಹಿಂಸಾಚಾರದ ವೇಳೆ ರೈತರ ಮೇಲೆ ಹರಿದ ಕಾರನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಚಲಾಯಿಸುತ್ತಿದ್ದನೆಂದು ಘಟನೆಯಲ್ಲಿ ಗಾಯಗೊಂಡಿರುವ ಪ್ರತಿಭಟನಕಾರರೊಬ್ಬರು ಆಪಾದಿಸಿದ್ದಾರೆ.
ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗಾಯಾಳು ತೇಜಿಂದರ್ ವಿರ್ಕ್ ಈ ವಿಷಯವನ್ನು ತಿಳಿಸಿದ್ದು, ಘಟನೆ ನಡೆದು 72 ತಾಸುಗಳು ಕಳೆದರೂ ಆಶೀಷ್ ಮಿಶ್ರಾ ಅವರ ಬಂಧನವಾಗದಿರುವುದು ದುರದೃಷ್ಟಕರವೆಂದು ಹೇಳಿದ್ದಾರೆ.
ಲಖೀಂಪುರ ಕೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಭೇಟಿಯನ್ನು ವಿರೋಧಿಸಿ ವಿರ್ಕ್ ಅವರು ಪ್ರತಿಭಟನೆಯನ್ನು ಆಯೋಜಿಸಿದ್ದರು. ‘‘ ಇದು ನಮ್ಮನ್ನು ಕೊಲ್ಲುವ ಸಂಚಾಗಿತ್ತು. ಲಖಿಂಪುರ ಅಲ್ಲದೆ ಉತ್ತರಪ್ರದೇಶದಲ್ಲಿ ಎಲ್ಲಿಯೂ ರೈತರು ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಅಜಯ್ ಮಿಶ್ರಾ ಹೇಳಿಕೆ ನೀಡಿದ್ದರು. ಅದನ್ನು ವಿರೋಧಿಸಿ ನಾವು ಪ್ರತಿಭಟನೆ ಆಯೋಜಿಸಿದ್ದೆವು. ನಾವು ಪೊಲೀಸರು ಹಾಗೂ ಆಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದ್ದೆವು. ಕೇಂದ್ರ ಸಚಿವರು ಬರುವಾಗ ಅವರೆಡೆಗೆ ಕಪ್ಪುಧ್ವಜಗಳನ್ನು ಬೀಸವುದಕ್ಕಾಗಿ ದಾರಿಯುದ್ದಕ್ಕೂ ನಾವು ನಿಂತುಕೊಂಡಿದ್ದೆವು’’ ಎಂದು ವಿರ್ಕ್ ಎನ್ಡಿಟಿವಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಸಂಜೆ 3 ಗಂಟೆಗೆ ಸಚಿವ ಅಜಯ್ ಮಿಶ್ರಾ ಅವರ ವಾಹನ ತೆರಳುವ ದಾರಿಯನ್ನು ಬದಲಾಯಿಸಲಾಗಿದೆ ಎಂಬ ಮಾಹಿತಿ ದೊರೆಯಿತು. ನಾವು ಶಾಂತಿಯುತವಾಗಿ ವಾಪಸಾಗ ತೊಡಗಿದ್ದೆವು. ಇದಕ್ಕಿದ್ದಂತೆ ವೇಗವಾಗಿ ಧಾವಿಸಿ ಬಂದು ಕಾರುಗಳು ನಮಗೆ ಹಿಂದಿನಿಂದ ಡಿಕ್ಕಿ ಹೊಡೆದಿವೆ. ಕಾರು ತಾಸಿಗೆ ನೂರು ಕಿ.ಮೀ. ವೇಗದಲ್ಲಿದ್ದವು. ಅವು ನಮಗೆ ಉದ್ದೇಶಪೂರ್ವಕವಾಗಿಯೇ ಡಿಕ್ಕಿಹೊಡೆದಿವೆ.ಅಜಯ್ ಮಿಶ್ರಾರ ಪುತ್ರ ಹಾಗೂ ಆತನ ಮಂದಿ ಕಾರಿನಲ್ಲಿದ್ದರು. ಆನಂತರ ನಾನು ಪ್ರಜ್ಞೆಯನ್ನು ಕಳೆದುಕೊಂಡೆ’’ ಎಂದರು.
ಆನಂತರ ಉದ್ರಿಕ್ತ ಗೊಂಡ ಗುಂಪು ಸಚಿವರ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಿದೆಯೆಂದು ವಿರ್ಕ್ ಹೇಳಿದ್ದಾರೆ. ಆಗ ನಮ್ಮ ಜನರು ದಾಳಿಗೆ ಗುರಿಯಾದ ಜನರನ್ನು ರಕ್ಷಿಸಿದರು ಮತ್ತು ಪೊಲೀಸರಿಗೆ ಒಪ್ಪಿಸಿದು ಎಂದು ವಿರ್ಕ್ ಹೇಳಿದರು. ಈ ಘಟನೆಗೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ಕೈಬಿಡಬೇಕೆಂದು ವಿರ್ಕ್ ಆಗ್ರಹಿಸಿದರು.
ಆದಿತ್ಯನಾಥ್ ಸರಕಾರವು ದಾಳಿಕೋರರಿಗೆ ನೆರವಾಗುತ್ತಿದೆಯೆಂದು ವಿರ್ಕ್ ಆಪಾದಿಸಿದರು.
ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಇನ್ನೋರ್ವ ರೈತ ಸಿಮ್ರಾನ್ಜಿತ್ ಸಿಂಗ್ ಅವರು, ಬೆಂಗಾವಲು ವಾಹನಗಳಲ್ಲಿದ್ದ ಜನರು ತಮ್ಮ ಕಾರುಗಳನ್ನು ತೊರೆದು ಬಂದು ಜನರತ್ತ ಗುಂಡು ಹಾರಿಸಿ ಓಡುತ್ತಿರುವುದನ್ನು ಕಂಡಿದ್ದಾಗಿ ಸಿಮ್ರಾನ್ ಜಿತ್ ಸಿಂಗ್ ತಿಳಿಸಿದ್ದಾರೆ. ಪ್ರತಿಭಟನಕಾರರ ಮೇಲೆ ಡಿಕ್ಕಿ ಹೊಡೆದ ಎಸ್ಯುವಿ ವಾಹನವನ್ನು ಯಾರು ಓಡಿಸಿದ್ದಾರೆಂಬುದನ್ನು ತಾನು ಕಂಡಿಲ್ಲವೆಂದು ಆತ ಹೇಳಿದ್ದಾರೆ.