ಕೊಲೆ ಕೇಸ್ ದಾಖಲಾಗಿ 24 ಗಂಟೆ ಕಳೆದರೂ ಕೇಂದ್ರ ಸಚಿವರ ಮಗನನ್ನು ಬಂಧಿಸದಿರುವುದಕ್ಕೆ ಕಾರಣ ಮುಂದಿಟ್ಟ ಪೊಲೀಸರು
ಲಕ್ನೊ: ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ರವಿವಾರ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದರೂ ಎಫ್ ಐ ಆರ್ ಸಲ್ಲಿಸಿ 24 ಗಂಟೆಗಳ ನಂತರವೂ ಬಂಧಿಸಲಾಗಿಲ್ಲ. ಆರೋಪಿಯ ವಿರುದ್ಧ ಇನ್ನೂ ಯಾವ ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಪ್ರಮುಖ ಪೊಲೀಸ್ ಅಧಿಕಾರಿಯೊಬ್ಬರು ಇಂದು ನಾವು ಪೋಸ್ಟ್ ಮಾರ್ಟಮ್ ಹಾಗೂ ಅಂತ್ಯಕ್ರಿಯೆ ನಡೆಸುವುದರಲ್ಲಿ ವ್ಯಸ್ತರಾಗಿದ್ದೆವು ಎಂದು ಹೇಳಿದ್ದಾರೆ.
"ನಾವು ಮೊದಲು ರೈತರೊಂದಿಗೆ ಮಾತುಕತೆಯಲ್ಲಿ ನಿರತರಾಗಿದ್ದೆವು. ನಂತರ ಮೃತಪಟ್ಟವರ ಮರಣೋತ್ತರ ಪರೀಕ್ಷೆಗಳಲ್ಲಿ ತೊಡಗಿದ್ದವು. ಆ ನಂತರ ಶವ ಸಂಸ್ಕಾರವನ್ನು ಮಾಡುವುದರಲ್ಲಿ ನಿರತರಾಗಿದ್ದೆವು. ಪ್ರತಿಯೊಂದು ಪ್ರಕರಣದಲ್ಲೂ ನಾವು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ ಹಾಗೂ ನಾವು ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡುತ್ತೇವೆ" ಎಂದು ಲಕ್ನೋದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್. ಎನ್. ಸಬತ್ NDTV ಗೆ ತಿಳಿಸಿದರು.
ಘಟನೆಯಲ್ಲಿ ಪ್ರಮುಖ ವ್ಯಕ್ತಿ ಭಾಗಿಯಾಗದಿದ್ದರೆ ನಿಮ್ಮ ವರ್ತನೆ ಇದೇ ರೀತಿ ಇರುತ್ತಿತ್ತೇ? ಎಂದು NDTV ಮತ್ತೊಮ್ಮೆ ಕೇಳಿದಾಗ "ಪೊಲೀಸರ ವರ್ತನೆ ಬಲಿಪಶುವಿನ ಕಡೆಗೆ ಇರುತ್ತದೆ ಹಾಗೂ ಆರೋಪಿಯ ಕಡೆಗೆ ಇರುವುದಿಲ್ಲ ಎಂದ ಅವರು ಇನ್ನಷ್ಟು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ಎಫ್‌ಐಆರ್‌ನಲ್ಲಿ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಹಾಗೂ ನಿರ್ಲಕ್ಷ್ಯದಿಂದ ಕೊಲೆ ಮಾಡಿರುವ ಆರೋಪ ಹೊರಿಸಲಾಗಿದೆ.