×
Ad

ಲಖೀಂಪುರ್ ಖೇರಿ ಘಟನೆ ಖಂಡಿಸಿ ತನಿಖೆಗೆ ಕೋರಿದ್ದ ವರುಣ್ ಗಾಂಧಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಹೊರಕ್ಕೆ

Update: 2021-10-07 15:29 IST

ಹೊಸದಿಲ್ಲಿ: ಬಿಜೆಪಿ ತನ್ನ ಪಿಲ್ಹಿಬಿಟ್ ಸಂಸದ ವರುಣ್ ಗಾಂಧಿ ಹಾಗೂ ಸುಲ್ತಾನ್‍ಪುರ್ ಸಂಸದೆ ಮೇನಕಾ ಗಾಂಧಿ ಅವರನ್ನು ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಇಂದು ಕೈಬಿಟ್ಟಿದೆಯೆನ್ನಲಾಗಿದೆ. ಹಿರಿಯ ನಾಯಕರುಗಳಾದ ವಿನಯ್ ಕಟಿಯಾರ್ ಹಾಗೂ ಸುಬ್ರಮಣಿಯನ್ ಸ್ವಾಮಿ ಅವರನ್ನೂ ಕೈಬಿಡಲಾಗಿದೆಯೆನ್ನಲಾಗಿದೆ.

ಉತ್ತರ ಪ್ರದೇಶದ ಲಖೀಂಪುರ್ ಖೇರಿ ಎಂಬಲ್ಲಿ ರೈತರ ಮೇಲೆ ಎಸ್‍ಯುವಿ ಹರಿದು ನಾಲ್ಕು ಮಂದಿ ಸಾವಿಗೀಡಾದ ಘಟನೆಯನ್ನು ಬಹಿರಂಗವಾಗಿ ವರುಣ್ ಗಾಂಧಿ ಖಂಡಿಸಿದ್ದರಲ್ಲದೆ ಘಟನೆಯ ಹಿಂದಿರುವವರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಪತ್ರ ಬರೆದಿದ್ದ ವರುಣ್ ಗಾಂಧಿ ಈ ಘಟನೆ "ನಾಗರಿಕ ಸಮಾಜದಲ್ಲಿ ಅಸ್ವೀಕಾರಾರ್ಹ" ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಮೃತ ರೈತರನ್ನು ಹುತಾತ್ಮರು ಎಂದು ಪತ್ರದಲ್ಲಿ ಬಣ್ಣಿಸಿದ ವರುಣ್ "ಅವರು ಕೂಡ ನಮ್ಮ ನಾಗರಿಕರು" ಎಂದು ಬರೆದಿದ್ದಾರೆ. ಪ್ರತಿಭಟನಾಕಾರರನ್ನು ನಿಭಾಯಿಸಲು "ಪ್ರಜಾಸತ್ತಾತ್ಮಕ" ಮತ್ತು "ಗಾಂಧೀಜಿಯವರ" ವಿಧಾನಗಳನ್ನು ಅನುಸರಿಸಬೇಕು ಎಂದೂ ಅವರು ಕೋರಿದ್ದರು.

ಘಟನೆಯ ತನಿಖೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಯಬೇಕು ಎಂದು ಕೂಡ ವರುಣ್ ಆಗ್ರಹಿಸಿದ್ದಾರೆ. ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳುವ ಹ್ಯಾಶ್ ಟ್ಯಾಗ್ ಒಂದನ್ನೂ ಅಕ್ಟೋಬರ್ 2ರಂದು ವರುಣ್ ಗಾಂಧಿ ಖಂಡಿಸಿದ ನಂತರ ಅವರು ಬಲಪಂಥಿಯರಿಂದ ಸಾಕಷ್ಟು ಟ್ರೋಲ್‍ಗೊಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News