ಇದು ಬೇರೆಡೆ ಗಮನ ಸೆಳೆಯುವ ತಂತ್ರ

Update: 2021-10-07 18:07 GMT

ಮಾನ್ಯರೇ,

ಈಗ ಮತೀಯ ನೆಪದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ, ದೇವಸ್ಥಾನಗಳನ್ನೂ ಒಡೆಯಲಾಗುತ್ತಿದೆ, ಮಸೀದಿಗಳ ವಿಷಯವೂ ಚರ್ಚೆಗೆ ಬರುತ್ತಿದೆ. ಲವ್ ಜಿಹಾದ್ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ, ತಾಲಿಬಾನ್ ವಿಷಯ ಆಗಾಗ ನಲಿದಾಡುತ್ತಲೂ ಇದೆ. ಅದೇಕೋ ದೇಶದ ಸೈನಿಕರು ಮತ್ತು ಪಾಕಿಸ್ತಾನದ ವಿಷಯ ಈಗ ಹಿಂದೆ ಬಿದ್ದಿರುವಂತೆ ಕಾಣುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಎರಡು ವಿಷಯಗಳೂ ಖಂಡಿತವಾಗಿಯೂ ಮುನ್ನೆಲೆಗೆ ಬರುತ್ತವೆ. ಈ ವಿಷಯಗಳು ಯಾವಾಗಲೂ ಚರ್ಚೆಯಲ್ಲಿರಬೇಕು ಮತ್ತು ತಮ್ಮ ಮತ ಬ್ಯಾಂಕ್ ಕ್ರೋಡೀಕೃತವಾಗಿಯೇ ಇರಬೇಕು ಎಂಬ ಅಜೆಂಡಾದೊಂದಿಗೆ ಸಾಗುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದ ಹುನ್ನಾರಕ್ಕೆ ನಾವು ಬಲಿ ಬೀಳುತ್ತಿದ್ದೇವೆ. ಆಡಳಿತದಲ್ಲಿ ಇರುವ ಬಿಜೆಪಿಯ ತಪ್ಪುಹೆಜ್ಜೆಗಳು, ದುಷ್ಟ ನಿರ್ಧಾರಗಳು ಮತ್ತು ವೈಫಲ್ಯಗಳು ಚರ್ಚೆಯ ವಿಷಯವಾಗುತ್ತದೆಯೋ ಆಗೆಲ್ಲ ಈ ಎಲ್ಲ ವಿಷಯಗಳೂ ಮುನ್ನೆಲೆಗೆ ಬರುತ್ತವೆ. ಈಗ ನಿರುದ್ಯೋಗದ ವಿಷಯ ಚರ್ಚೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಯುವಕರು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ. ಇದೇ ಸಮಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯೂ ವಿಮರ್ಶೆಗೆ ಒಳಪಡುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಮತ್ತು ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಜನರ ನೆಮ್ಮದಿ ಕೆಡಿಸಿದೆ. ಇಂತಹ ಸಂದರ್ಭದಲ್ಲಿ ಜನರು ಸಾರ್ವಜನಿಕವಾಗಿ ಇದೇ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುತ್ತಿದ್ದಾರೆ. ಅಂಧ ಭಕ್ತರು ಎಷ್ಟೇ ಪ್ರಯತ್ನ ಪಟ್ಟರೂ, ಎಷ್ಟೇ ಸುಳ್ಳು ಹೇಳಿದರೂ ಮೋದಿ ಸರಕಾರವನ್ನು ಸಮರ್ಥಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಜನಸಾಮಾನ್ಯರ ಸಾಮಾನ್ಯ ಪ್ರಶ್ನೆಗಳೂ ಭಕ್ತರಿಗೆ ಹೊರೆಯಾಗುತ್ತಿವೆ. ಪರಿಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಗಮನ ಬೇರೆಡೆ ಸೆಳೆಯದೆ ಬೇರೆ ಮಾರ್ಗವೇ ಇಲ್ಲ. ಅದಕ್ಕೆ ಆಯ್ದುಕೊಂಡ ಮಾರ್ಗ ಅನೈತಿಕ ಗೂಂಡಾಗಿರಿ, ಅನ್ಯ ಕೋಮಿನ ಜೋಡಿ ಎಂಬ ನೆಪದಲ್ಲಿ ಹಲ್ಲೆ ನಡೆಯುತ್ತಿದೆ. ಚುನಾವಣೆಯ ಕಾರಣಕ್ಕೆ ಸೈನಿಕರ ಬಲಿದಾನವನ್ನೇ ಬಳಸಿಕೊಳ್ಳುವವರಿಗೆ ಇಂತಹ ವಿಷಯಗಳು ದೊಡ್ಡದಲ್ಲ. ಹಾಗಾಗಿ ಜನರು ಎಚ್ಚರಗೊಳ್ಳಬೇಕಿದೆ.

Writer - -ಅಲಿ ಹಸನ್, ಮಂಗಳೂರು

contributor

Editor - -ಅಲಿ ಹಸನ್, ಮಂಗಳೂರು

contributor

Similar News