ತೆರಿಗೆ ದುಡ್ಡಲ್ಲಿ ದಸರಾ: ಕಾರ್ಯಕ್ರಮದ ಮಾಹಿತಿ ನೀಡದ ಶಿವಮೊಗ್ಗ ಮನಪಾ

Update: 2021-10-09 07:26 GMT

ಶಿವಮೊಗ್ಗ, ಅ.9: ವೈಭವದ ದಸರಾ ಆಚರಣೆಯಲ್ಲಿ ರಾಜ್ಯದಲ್ಲಿ ಮೈಸೂರು, ಮಡಿಕೇರಿ ನಂತರದ ಸ್ಥಾನವನ್ನು ಮಲೆನಾಡು ಶಿವಮೊಗ್ಗ ತುಂಬುತ್ತದೆ. ಆದರೆ ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ನಾಡಹಬ್ಬದ ಬಗ್ಗೆ, ಮಹಾನಗರ ಪಾಲಿಕೆ ಜನರಿಗೇ ಮಾಹಿತಿ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು-ಮಡಿಕೇರಿ ಬಿಟ್ಟರೆ ವೈಭವದ ದಸರಾ ನಡೆಯುವುದು ಮಲೆನಾಡು ಶಿವಮೊಗ್ಗದಲ್ಲಿಯೇ. ಸಾರ್ವಜನಿಕರ ತೆರಿಗೆ ಹಣದಲ್ಲಿ ಅದ್ದೂರಿ, ವೈಭವದ ದಸರಾ ಆಚರಣೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿ ಶಿವಮೊಗ್ಗದಲ್ಲಿ ದಸರಾ ಆಚರಣೆ ನಡೆಯುತ್ತಿದಿಯಾ ಎಂಬ ಅನುಮಾನ ಕಾಣುತ್ತಿದೆ. ನಾಡಹಬ್ಬದ ಬಗ್ಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದ ಕಾರಣ ಹಬ್ಬದ ಸಡಗರ ಕಳೆಗುಂದಿದೆ.

► ಜನರ ತೆರಿಗೆ ಹಣದ ಆಚರಣೆಯಲ್ಲಿ ಜನರೇ ಇಲ್ಲ: ಪ್ರತಿ ವರ್ಷದಂತೆ ಈ ಬಾರಿಯೂ ಎರಡು ಕೋಟಿ ರೂ. ವೆಚ್ಚದಲ್ಲಿ ದಸರಾ ಆಚರಣೆಗೆ ನಿರ್ಧರಿಸಲಾಗಿದೆ. ಜನರ ತೆರಿಗೆ ಹಣದಲ್ಲಿ ಈ ಹಬ್ಬ ಮಾಡಲಾಗುತ್ತಿದೆ. ಆದರೆ ಜನರ ಸಹಭಾಗಿತ್ವವೇ ಇಲ್ಲವಾಗಿದೆ. ಮಹಿಳಾ ದಸರಾ, ಮಕ್ಕಳ ದಸರಾ, ಆಹಾರ ದಸರಾ, ಚಲನಚಿತ್ರೋತ್ಸವ ಸೇರಿದಂತೆ ಬಹುತೇಕ ಯಾವುದೆ ಕಾರ್ಯಕ್ರಮದಲ್ಲೂ ಜನ ಕಾಣಿಸುವುದಿಲ್ಲ. ಪ್ರಚಾರವನ್ನೇ ಮಾಡದೆ, ಜನರಿಗೆ ಮಾಹಿತಿಯನ್ನೇ ಒದಗಿಸದೆ ಆಚರಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಪಾಲಿಕೆ ಆಡಳಿತದ ಕ್ರಮಕ್ಕೆ ಮಹಾನಗರ ಪಾಲಿಕೆಯ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದೆ.

► ಆಮಂತ್ರಣ ಪತ್ರಿಕೆಯೂ ಇಲ್ಲ: ಪ್ರತಿ ವರ್ಷ ದಸರಾ ಆಚರಣೆಗೂ ಮುನ್ನ ಮೇಯರ್, ಉಪಮೇಯರ್, ಕಮಿಷನರ್, ಪಾಲಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸಿ ದಸರಾ ಆಚರಣೆ ಸಲುವಾಗಿ ಪೂರ್ಣ ಮಾಹಿತಿ ಒದಗಿಸುತ್ತಿದ್ದರು. ಆದರೆ ಈ ಬಾರಿ ಇವೆಲ್ಲಕ್ಕೂ ಬ್ರೇಕ್ ಬಿದ್ದಿದೆ. ಆಮಂತ್ರಣ ಪತ್ರಿಕೆಯನ್ನೂ ಒದಗಿಸದೆ ನಾಡಹಬ್ಬ ಆಚರಣೆ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ಯಾವುದೇ ಮಾಹಿತಿ ಇಲ್ಲದೆ ದಸರಾ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

► ಕೋವಿಡ್ ನೆಪ: ಕೊರೋನ ಸಂಪೂರ್ಣ ತಗ್ಗಿಲ್ಲ. ಈಗಲೂ ಹಲವರು ಕೋವಿಡ್‌ಗೆ ತುತ್ತಾಗುತ್ತಿದ್ದಾರೆ. ಜಿಲ್ಲೆಯಲ್ಲಿ ವಾರಕ್ಕೊಬ್ಬರಾದರೂ ಕೋವಿಡ್‌ಗೆ ಬಲಿಯಾಗುತ್ತಿದ್ದಾರೆ. ಇದೇ ಕಾರಣಕ್ಕೆ ಅದ್ದೂರಿ ದಸರಾಗೆ ಬ್ರೇಕ್ ಹಾಕಲಾಗಿದೆ ಎಂದು ಪಾಲಿಕೆ ಸಬೂಬು ಹೇಳುತ್ತಿದೆ. ಚಲನಚಿತ್ರೋತ್ಸವದ ಉದ್ಘಾಟನೆ ವೇಳೆಯೂ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪಅವರು ಇದನ್ನೇ ಹೇಳಿದ್ದಾರೆ. ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಸೇರಿಸಲು ಆಗಿಲ್ಲ. ಜನ ಸೇರಿ ಒಂದು ವೇಳೆ ಹೆಚ್ಚು ಕಡಿಮೆಯಾದರೆ ಪಾಲಿಕೆಯನ್ನೇ ಹೊಣೆ ಮಾಡಲಾಗುತ್ತದೆ ಎಂದಿದ್ದಾರೆ.

► ಯಾಕಾಗಿ ನಡೆಯುತ್ತಿದೆ ಕಾರ್ಯಕ್ರಮ?: ಈ ಬಾರಿ ಶಿವಮೊಗ್ಗ ದಸರಾದಲ್ಲಿ ಮಹಿಳಾ, ಆಹಾರ, ಪರಿಸ ರ ಹಾಗೂ ರೈತ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆದರೆ ಜನರು ಪಾಲ್ಗೊಳ್ಳುವಂತಿಲ್ಲ. ಹೆಚ್ಚು ಜನರನ್ನು ಸೇರುವಂತಿಲ್ಲ ಎಂಬ ಸ್ವಯಂ ನಿಬಂಧನೆಗೆ ಪಾಲಿಕೆಗೆ ಒಳಗಾಗಿದೆ. ಹಾಗಿದ್ದಾಗ ಇಷ್ಟೊಂದು ಕಾರ್ಯಕ್ರಮಗಳನ್ನು ನಡೆಸುತ್ತಿರುವುದೇಕೆ? ಕೋಟಿ ಕೋಟಿ ರೂ.ಖರ್ಚು ಮಾಡುತ್ತಿರುವುದೇಕೆ ಅನ್ನುವುದು ಜನರ ಪ್ರಶ್ನೆಯಾಗಿದೆ.

ಈ ಬಾರಿ ಶಿವಮೊಗ್ಗ ದಸರಾ ಅತಿಥಿಗಳು, ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಇವರ ಪರಿಚಿತರಿಗೆ ಸೀಮಿತವಾಗಿದೆ. ಬಹುತೇಕ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಯಲ್ಲಿ ಇವರಷ್ಟೇ ಕಾಣ ಸಿಗುತ್ತಾರೆ. ಕೋವಿಡ್ ನೆಪದಲ್ಲಿ ಜನರ ಹಣದಲ್ಲಿ ಜನರೇ ಇಲ್ಲದೆ ನಾಡಹಬ್ಬ ಆಚರಿಸುತ್ತಿರುವುದು ಜನರ ಬೇಸರಕ್ಕೂ ಕಾರಣವಾಗಿದೆ.

Writer - ಶರತ್ ಪುರದಾಳ್

contributor

Editor - ಶರತ್ ಪುರದಾಳ್

contributor

Similar News