ಪೆಟ್ರೋಲ್‌ ದರ ಹೆಚ್ಚಾದರೆ ಬೈಕ್‌ ನಲ್ಲಿ ʼಮೂವರುʼ ಸಂಚರಿಸಿ: ಅಸ್ಸಾಂ ಬಿಜೆಪಿ ಅಧ್ಯಕ್ಷನಿಂದ ಜನರಿಗೆ ʼಕಿವಿಮಾತುʼ

Update: 2021-10-11 08:08 GMT
Photo: Twitter

ಗುವಾಹಟಿ: ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ತೈಲ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಸ್ಸಾಂ ಬಿಜೆಪಿ ಅಧ್ಯಕ್ಷ ಭಬೇಶ್‌ ಕಲಿಟಾ, ಪೆಟ್ರೋಲ್‌ ದರ ಹೆಚ್ಚಾಗಿದ್ದಕ್ಕೆ ಚಿಂತಿಸಬೇಡಿ. ಒಂದೇ ಬೈಕ್‌ ನಲ್ಲಿ ಮೂವರು ಸಂಚರಿಸಿ ಎಂಬ ಅಸಹಜ ಉತ್ತರ ನೀಡಿದ್ದಾರೆ. 

"ದೊಡ್ಡ ದೊಡ್ಡ ಕಾರುಗಳ ಅಗತ್ಯವೇನು? ಸೈಕಲ್‌ ನಲ್ಲಿ ಪ್ರಯಾಣಿಸಿ. ಒಂದೇ ಬೈಕ್‌ ನಲ್ಲಿ ಮೂವರಿಗೂ ಸಂಚರಿಸಬಹುದು. ಸರಕಾರದಿಂದ ಇದಕ್ಕಾಗಿ ಲೈಸೆನ್ಸ್‌ ಪಡೆದುಕೊಳ್ಳಿ" ಎಂದು ಅವರು ಹೇಳಿದ್ದಾರೆ. ತೈಲ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳೇ ಕಾರಣ. ಅಸ್ಸಾಂ ಸರಕಾರಕ್ಕೆ ಇದರ ನಿಯಂತ್ರಣವಿಲ್ಲ. ಹಲವಾರು ಮಂದಿ ದೊಡ್ಡ ವಾಹನಗಳನ್ನು ಕೊಂಡುಕೊಳ್ಳುವುದನ್ನು ನಾನು ಇತ್ತೀಚೆಗೆ ಗಮನಿಸುತ್ತಿದ್ದೇನೆ. ಎಲ್ಲರೂ ವಾಹನಗಳನ್ನು ಕೊಳ್ಳುವುದು ಬಿಟ್ಟರೆ ಪೆಟ್ರೋಲ್‌ ದರ ತನ್ನಿಂತಾನೇ ಕಡಿಮೆಯಾಗುತ್ತದೆ" ಎಂದು ಅವರು ಹೇಳಿದ್ದಾರೆ.

"ಮಾರ್ಕೆಟ್‌ ಗೆ ಸಾಮಗ್ರಿಗಳನ್ನು ಖರೀದಿಸಲು ತೆರಳುವಾಗ ವಾಹನವನ್ನು ಅವಲಂಬಿಸುವುದನ್ನು ಬಿಟ್ಟು ನಡೆದುಕೊಂಡೇ ಹೋಗಿ ಎಂದು ಅವರು ಸಲಹೆ ನೀಡಿದ್ದಾರೆ. "ಕೆಲವು ಸಂದರ್ಭಗಳಲ್ಲಿ ನಾವು ತ್ಯಾಗ ಮಾಡಬೇಕಾಗುತ್ತದೆ. ಬೆಲೆಯೇರಿಕೆಯು ಪ್ರಕೃತಿದತ್ತವಾದದ್ದು. ಅದು ಎಲ್ಲರಿಗೂ ತಿಳಿದಿದೆ" ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಯನ್ನು ವಿರೋಧಿಸಿದ ಕಾಂಗ್ರೆಸ್‌ ಪಕ್ಷವು ʼಟ್ರಿಪಲ್‌ ರೈಡ್‌ʼ ಬೈಕ್‌ ರ್ಯಾಲಿ ನಡೆಸುವ ಮೂಲಕ ಪ್ರತಿಭಟಿಸಿದೆ ಎಂದು ಪತ್ರಕರ್ತರೋರ್ವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News