×
Ad

ಲಖಿಂಪುರ ಖೇರಿ ಹಿಂಸಾಚಾರ:ದೇಶಾದ್ಯಂತ ಕಾಂಗ್ರೆಸ್ 'ಮೌನ ವೃತ',ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯ

Update: 2021-10-11 17:36 IST
photo: ANI

ಹೊಸದಿಲ್ಲಿ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರನ್ನುಹರಿಸಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಸೋಮವಾರ ದೇಶಾದ್ಯಂತ ಮೌನ ವೃತ ಹಮ್ಮಿಕೊಂಡಿತು. ಕೃತ್ಯದಲ್ಲಿ ಕೇಂದ್ರ ಸಚಿವರ ಪುತ್ರ ಭಾಗಿಯಾಗಿರುವ ಕಾರಣ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಲಾಯಿತು.

ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಇತರ ನಾಯಕರು ಲಕ್ನೋದಲ್ಲಿ 'ಮೌನ ವೃತ' ಆಚರಿಸಿದರು.

ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆ ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ನೇತೃತ್ವದಲ್ಲಿ ಸೋಮವಾರ ಗೋವಾದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

  ಲಖಿಂಪುರ ಖೇರಿ ಹಿಂಸಾಚಾರವನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜಮ್ಮುವಿನ ರಾಜಭವನದ ಹೊರಗೆ 'ಮೌನ ಪ್ರದರ್ಶನ' ಆಯೋಜಿಸಿದರು.

ಲಖಿಂಪುರ ಖೇರಿ ಹಿಂಸಾಚಾರವನ್ನು ವಿರೋಧಿಸಿ ಹಾಗೂ  ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ದಿಲ್ಲಿ ಕಾಂಗ್ರೆಸ್ ನಾಯಕರು ಹಾಗೂ  ಕಾರ್ಯಕರ್ತರು ಲೆಫ್ಟಿನೆಂಟ್ ಗವರ್ನರ್ ಕಚೇರಿ ಬಳಿ ಸೋಮವಾರ ಮೌನ ವ್ರತ ನಡೆಸಿದರು. ಪ್ರತಿಭಟನೆಯಲ್ಲಿ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ಮಾಜಿ ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್ ಮತ್ತು ಕೃಷ್ಣ ತೀರಥ್ ಭಾಗವಹಿಸಿದ್ದರು.

ಲಖಿಂಪುರ ಖೇರಿ ಹಿಂಸಾಚಾರವನ್ನು ಖಂಡಿಸಿ ಅಸ್ಸಾಂನಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸೋಮವಾರ ಮೌನ ವ್ರತ ವನ್ನು ಆಚರಿಸಿತು ಹಾಗೂ  ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಕೆಳಗಿಳಿಸಲು ಕೋರಿತು. ಜೊತೆಗೆ ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವರ ಮಗ ಆಶೀಶ್ ಗೆ ಅನುಕರಣೀಯ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಲಾಗಿದೆ.  ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಪಿಸಿಸಿ) ಅಧ್ಯಕ್ಷ ಭೂಪೇನ್ ಕುಮಾರ್ ಬೋರಹ್ ಪ್ರತಿಭಟನೆಯಲ್ಲಿ ಭಾಗಿಯಾದರು.  

ಲಖಿಂಪುರ ಖೇರಿ ಹಿಂಸಾಚಾರದ ವಿರುದ್ಧ ಮತ್ತು ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಸೋಮವಾರ ಜೈಪುರದ ಸಿವಿಲ್ ಲೈನ್ಸ್ ರೈಲ್ವೆ ಕ್ರಾಸಿಂಗ್ ಬಳಿ ಮೌನ ಪ್ರತಿಭಟನೆ ನಡೆಸಿದರು. 'ಮೌನ ವ್ರತ' ಪ್ರತಿಭಟನೆಯ ನೇತೃತ್ವವನ್ನು ಪಿಸಿಸಿ ಮುಖ್ಯಸ್ಥ ಗೋವಿಂದ ಸಿಂಗ್ ದೋಟಾಸ್ರಾ ವಹಿಸಿದ್ದರು, ಇದರಲ್ಲಿ ಸಾರಿಗೆ ಸಚಿವ ಪ್ರತಾಪಸಿಂಹ ಖಚರಿಯವಾಸ್ ಹಾಗೂ  ಮುಖ್ಯ ಸಚೇತಕ ಮಹೇಶ್ ಜೋಶಿ ಭಾಗವಹಿಸಿದ್ದರು.

"ಘಟನೆಯ ಕುರಿತು ಕೇಂದ್ರ ಸಚಿವರನ್ನು ವಜಾಗೊಳಿಸಲು ಪಕ್ಷವು ಒತ್ತಾಯಿಸುತ್ತಿದೆ. ಎಐಸಿಸಿಯ ನಿರ್ದೇಶನದಂತೆ 'ಮೌನ ವ್ರತ' ಆಚರಿಸಲಾಯಿತು" ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News