ಕೊರೋನ ಸಮಸ್ಯೆ ಬಳಿಕ ವಿಶ್ವದಾದ್ಯಂತ 50% ಶಾಲೆಗಳು ಮಾತ್ರ ಪುನರಾರಂಭ

Update: 2021-10-11 17:32 GMT

ಲಂಡನ್, ಅ.11: ಕೊರೋನ ಸೋಂಕಿನಿಂದಾಗಿ ವಿಶ್ವದಾದ್ಯಂತ ಶಾಲೆಗಳನ್ನು ಮುಚ್ಚುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಸುಮಾರು 19 ತಿಂಗಳ ಬಳಿಕ ಮುಚ್ಚಿರುವ ಶಾಲೆಗಳಲ್ಲಿ 50% ಮಾತ್ರ ತರಗತಿಯ ಪಾಠ ಆರಂಭಿಸಿದ್ದು 34% ಶಾಲೆಗಳು ಇನ್ನೂ ಆನ್ಲೈನ್ ತರಗತಿಯನ್ನೇ ಮುಂದುವರಿಸಿವೆ ಎಂದು ಕೋವಿಡ್-19 ಜಾಗತಿಕ ಶಿಕ್ಷಣ ಚೇತರಿಕೆಕುರಿತ ಸಮೀಕ್ಷೆಯ ವರದಿ ಹೇಳಿದೆ.

200ಕ್ಕೂ ಅಧಿಕ ದೇಶಗಳಲ್ಲಿ ಕೊರೋನದಿಂದ ಚೇತರಿಸಿಕೊಂಡು ಶಿಕ್ಷಣ ವ್ಯವಸ್ಥೆಯ ಮರು ಆರಂಭಕ್ಕೆ ನಡೆಸಿರುವ ಪ್ರಯತ್ನಗಳ ಅಧ್ಯಯನ ನಡೆಸಿ ಶಾಲೆಗಳ ಪುನರಾರಂಭದ ಬಗ್ಗೆ ದೇಶಗಳಿಗೆ ಸಲಹೆ ನೀಡುವ ಉದ್ದೇಶದಿಂದ ಜಾನ್ ಹಾಪ್ಕಿನ್ಸನ್ ವಿವಿ, ವಿಶ್ವಬ್ಯಾಂಕ್ ಮತ್ತು ಯುನಿಸೆಫ್ ಈ ಸಮೀಕ್ಷೆಯನ್ನು ಜಂಟಿಯಾಗಿ ನಡೆಸಿವೆ. ಸಮೀಕ್ಷೆಯ ವರದಿ ಪ್ರಕಾರ, ವಿಶ್ವದಾದ್ಯಂತದ 80% ಶಾಲೆಗಳು ಕ್ರಮಬದ್ಧವಾಗಿ ಕಾರ್ಯ ಮುಂದುವರಿಸಿವೆ. ಇದರಲ್ಲಿ 54%ದಷ್ಟು ಶಾಲೆಗಳು ತರಗತಿಯ ಪಾಠ ಆರಂಭಿಸಿದ್ದರೆ, 34% ಶಾಲೆಗಳು ಆನ್ಲೈನ್ ಪಠ್ಯಕ್ರಮ ಅಥವಾ ಆನ್ಲೈನ್- ತರಗತಿ ಮಿಶ್ರ ಪಠ್ಯಕ್ರಮದಲ್ಲಿವೆ. 10% ಶಾಲೆಗಳು ಆನ್ಲೈನ್ ಮಾತ್ರ ಮುಂದುವರಿಸಿದ್ದರೆ, 2% ಶಾಲೆಗಳು ಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿವೆ.
ಕೇವಲ 53% ಶಾಲೆಗಳು ಮಾತ್ರ ಶಿಕ್ಷಕರಿಗೆ ಲಸಿಕೀಕರಣಕ್ಕೆ ಆದ್ಯತೆ ನೀಡುತ್ತಿವೆ ಎಂದೂ ವರದಿ ಹೇಳಿದೆ. ಶಾಲೆಯ ಎಲ್ಲಾ ಶಿಕ್ಷಕರಿಗೂ ಲಸಿಕೀಕರಣ ಪೂರ್ಣಗೊಳ್ಳುವವರೆಗೆ ಶಾಲೆ ಆರಂಭಿಸುವುದನ್ನು ಮುಂದೂಡಬಾರದು ಎಂದುಯ ವಿಶ್ವಬ್ಯಾಂಕ್ ಸಲಹೆ ನೀಡಿದೆ.
ಶಿಕ್ಷಣ ವ್ಯವಸ್ಥೆಯ ಪುನಶ್ಚೇತನಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಲಸಿಕೀಕರಣಕ್ಕೆ ಶಿಕ್ಷಕರಿಗೆ ಆದ್ಯತೆ ನೀಡಬೇಕು. ಆದರೆ ಕೊರೋನ ಸೋಂಕಿನಿಂದ ಸುರಕ್ಷಿತವಾಗಿ ಶಾಲೆಗಳನ್ನು ಪುನರಾರಂಭಿಸಲು ಇನ್ನೂ ಕೆಲವು ಸುರಕ್ಷಾ ಕ್ರಮಗಳಿವೆ ಎಂಬುದನ್ನು ಮರೆಯಬಾರದು ಎಂದು ವಿಶ್ವಬ್ಯಾಂಕ್ ಹೇಳಿದೆ. ಮಾಸ್ಕ್ ಧಾರಣೆ, ವಾತಾಯನ ವ್ಯವಸ್ಥೆ ಹೆಚ್ಚಿಸುವುದು, ಸುರಕ್ಷಿತ ಅಂತರ ಪಾಲನೆ ಮುಂತಾದ ಕ್ರಮಗಳನ್ನು ಪಾಲಿಸಬಹುದು. ಸಿಬಂದಿಗಳೆಲ್ಲರಿಗೂ ಲಸಿಕೀಕರಣ ಪೂರ್ಣಗೊಳ್ಳುವವರೆಗೆ ಕಾಯುವುದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ವಿಶ್ವಬ್ಯಾಂಕ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News