ವರುಣ್ ಗಾಂಧಿಯನ್ನು ಪ್ರಶಂಸಿಸಿ: ಉತ್ತರ ಪ್ರದೇಶದ ರೈತರಿಗೆ ಶಿವಸೇನೆ ಸಂದೇಶ

Update: 2021-10-11 18:22 GMT

ಲಕ್ನೋ, ಅ. 11: ರೈತ ಚಳವಳಿಯನ್ನು ಬೆಂಬಲಿಸುತ್ತಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ಬೆಂಬಲಿಸಿರುವ ಶಿವಸೇನೆ, ರೈತ ಚಳುವಳಿಯ ಕುರಿತ ವರುಣ್ ಗಾಂಧಿ ಅವರ ನಿಲುವನ್ನು ಪ್ರಶಂಸಿಸಿ ಎಲ್ಲ ರೈತ ಸಂಘಟನೆಗಳು ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿದೆ. ಈ ತಿಂಗಳ ಆರಂಭದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಸಂಭವಿಸಿದ ಅಮಾನವೀಯ ಘಟನೆಯನ್ನು ನೋಡಿದ ಬಳಿಕವೂ ಇತರ ಸಂಸದರ ರಕ್ತ ತಣ್ಣಗಾಗಿದೆಯೇ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಶ್ನಿಸಿದೆ.

‘‘ದ್ವೇಷ ಹರಡುವ ಪ್ರಯತ್ನವನ್ನು ದೇಶ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವರುಣ್ ಗಾಂಧಿ ಅವರು ಇಂದಿರಾ ಗಾಂಧಿ ಅವರ ಮೊಮ್ಮಗ ಹಾಗೂ ಸಂಜಯ್ ಗಾಂಧಿ ಅವ ಪುತ್ರ. ಲಖಿಂಪುರ ಖೇರಿ ಘಟನೆ ನೋಡಿ ಅವರ ರಕ್ತ ಕುದಿದಿದೆ. ಅವರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’’ ಎಂದು ‘ಸಾಮ್ನಾ’ದ ಸಂಪಾದಕೀಯ ಹೇಳಿದೆ. ಯಾವುದೇ ಪರಿಣಾಮದ ಬಗ್ಗೆ ಆಲೋಚಿಸದೆ ವರುಣ್ ಗಾಂಧಿ ಅವರು ಧೈರ್ಯ ತೋರಿದ್ದಾರೆ. ರೈತರ ಹತ್ಯೆ ಖಂಡಿಸಿದ್ದಾರೆ ಎಂದು ‘ಸಾಮ್ನಾ’ ಹೇಳಿದೆ. ಲಖಿಂಪುರ ಖೇರಿ ಹಿಂಸಾಚಾರವನ್ನು ಖಂಡಿಸಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸೋಮವಾರ ‘ಮಹಾರಾಷ್ಟ್ರ ಬಂದ್’ಗೆ ಕರೆ ನೀಡಿದೆ ಎಂದು ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News