×
Ad

ವಿಮಾನಗಳಿಗೆ ಅಡ್ಡಿ: ಕೊಲ್ಕತ್ತಾ 'ಬುರ್ಜ್ ಖಲೀಫಾ’ ಲೇಸರ್ ಪ್ರದರ್ಶನ ರದ್ದು

Update: 2021-10-13 11:06 IST
(Photo : Ashok Nath Dey)

ಕೊಲ್ಕತ್ತಾ : ಪೂರ್ವ ಕೊಲ್ಕತ್ತಾದ ಶ್ರೀಭೂವಿು ದುರ್ಗಾಪೂಜೆ ಪೆಂಡಾಲ್‌ನ ಲೇಸರ್ ಪ್ರದರ್ಶನದಿಂದಾಗಿ ವಿಮಾನಗಳ ಲ್ಯಾಂಡಿಂಗ್‌ಗೆ ಕಷ್ಟವಾಗುತ್ತಿದೆ ಎಂದು ವಿಮಾನ ಪೈಲಟ್‌ಗಳು ನಗರದ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ (ಎಟಿಸಿ) ಟವರ್‌ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೇಸರ್ ಶೋ ರದ್ದುಪಡಿಸಲಾಗಿದೆ.

ಈ ದುರ್ಗಾಪೂಜೆ ಪೆಂಡಾಲನ್ನು ಈ ಬಾರಿ ದುಬೈನ ಬುರ್ಜ್ ಖಲೀಫಾ ಗಗನಚುಂಬಿ ಕಟ್ಟಡದ ಪ್ರತಿರೂಪವಾಗಿ ಸಿದ್ಧಪಡಿಸಲಾಗಿತ್ತು. ಕೊಲ್ಕತ್ತಾ ವಿಮಾನ ನಿಲ್ದಾಣ ಈ ಜನಪ್ರಿಯ ದುರ್ಗಾಪೂಜೆ ಪೆಂಡಾಲ್‌ನ ಸಮೀಪದಲ್ಲಿದೆ.

"ಎಟಿಸಿಗೆ ದೂರು ಬಂದ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು ಹಾಗೂ ಆ ಬಳಿಕ ಲೇಸರ್ ಪ್ರದರ್ಶನ ಸ್ಥಗಿತಗೊಳಿಸಲಾಯಿತು. ಆ ಬಳಿಕ ಯಾವುದೇ ಸಮಸ್ಯೆ ಉಂಟಾಗಿಲ್ಲ" ಎಂದು ನೇತಾಜಿ ಸುಭಾಸ್‌ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಗೋಪುರದ ಎತ್ತರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿಗದಿಪಡಿಸಿದ ಮಾನದಂಡಕ್ಕೆ ಸರಿ ಇದ್ದರೂ, ದೇಶಾದ್ಯಂತ ವಿಮಾನ ನಿಲ್ದಾಣಗಳ ಸಮೀಪ ಲೇಸರ್ ಶೋ ನಿಷೇಧಿಸಲಾಗಿದೆ. ಏಕೆಂದರೆ ಪ್ರಬಲ ಲೇಸರ್ ಕಿರಣಗಳ ಬೆಳಕು ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳಿಗೆ ಅಡ್ಡಿಯಾಗುತ್ತದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ರಾಜ್ಯ ಅಗ್ನಿಶಾಮಕ ಸೇವೆಗಳ ಸಚಿವ ಸುಜೀತ್ ಬೋಸ್ ಪೋಷಕತ್ವದಲ್ಲಿ ಶ್ರೀಭೂಮಿಯಲ್ಲಿ ನಡೆಸಲಾಗುವ ಪೂಜೆ ಇಡೀ ಕೊಲ್ಕತ್ತಾದ ಅತ್ಯಂತ ವೈಭವೋಪೇತ ಹಾಗೂ ವಿಶಿಷ್ಟ ಎನಿಸಿದೆ. ಈ ಬಾರಿ ಪೆಂಡಾಲನ್ನು ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಯ ಬುರ್ಜ್ ಖಲೀಫಾ ಟವರ್ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಆದರೆ ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಗುಂಪು ಸೇರುವುದನ್ನು ತಡೆಯಲು ಲೇಸರ್ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.

ಈ ಪೆಂಡಾಲನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಕ್ಟೋಬರ್ 9ರಂದು ಉದ್ಘಾಟಿಸಿದ್ದರು. ಬುರ್ಜ್ ಖಲೀಫಾ ಪ್ರತಿಕೃತಿ ಸಿದ್ಧಪಡಿಸುವ ಸಲುವಾಗಿ ಸಂಘಟಕರು ದುಬೈಗೆ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News