ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಯ ವಾರ್ ರೂಮ್ ಸಭೆ, ಮುಂಬರುವ ಚುನಾವಣೆಯ ಕುರಿತು ಚರ್ಚೆ

Update: 2021-10-13 14:13 GMT

ಹೊಸದಿಲ್ಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಪಂಚ ರಾಜ್ಯಗಳ ಚುನಾವಣೆಗಳ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ, ಬಿಜೆಪಿ ತನ್ನ ದಿಲ್ಲಿಯ ವಾರ್ ರೂಂನಲ್ಲಿ ಸಭೆ ನಡೆಸಿದೆ ಎಂದು NDTV ವರದಿ ಮಾಡಿದೆ.

ಐದು ರಾಜ್ಯಗಳಾದ ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ ಹಾಗೂ  ಉತ್ತರ ಪ್ರದೇಶದಲ್ಲಿ ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ವಿಧಾನಸಭೆ ಚುನಾವಣೆಗಳನ್ನು ನಿರೀಕ್ಷಿಸಲಾಗಿದೆ.

ಬಿಜೆಪಿ ಪಕ್ಷವು ಈಗಾಗಲೇ ಪಂಜಾಬ್ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಹಾಗೂ  ಕನಿಷ್ಠ ಮೂರು ರಾಜ್ಯಗಳಲ್ಲಿ ಸುಲಭವಾಗಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಸಂಭವನೀಯ ಸವಾಲು ಮಾತ್ರ ನಿರೀಕ್ಷಿಸಲಾಗಿದೆ.

ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಪಕ್ಷದೊಳಗೆ ಉಂಟಾಗಿದ್ದ ಅಸಮಾಧಾನವನ್ನು ಪಕ್ಷದ ಹೈಕಮಾಂಡ್ ಸರಿಪಡಿಸಿತ್ತು. ಆದರೆ ಅ.3ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನೇ ರೈತರ ಗುಂಪಿನ ಮೇಲೆ ಕಾರು ಹರಿಸಿ ಹತ್ಯೆಗೈದಿರುವುದು ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಎರಡು ದಿನಗಳ ಹಿಂದೆ ಉತ್ತರಪ್ರದೇಶದ ಕೆಲವು ಹಿರಿಯ ನಾಯಕರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ದಿಲ್ಲಿಯಲ್ಲಿ ಭೇಟಿಯಾಗಿ 4 ಗಂಟೆ ಕಾಲ ಲಖಿಂಪುರ ಖೇರಿ ಘಟನೆಯ ಕುರಿತು ಚರ್ಚಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News