ಪುಣೆ ಸೇನಾ ತರಬೇತಿ ಸಂಸ್ಥೆಯಲ್ಲಿ ಮಹಿಳಾ ಸೇನಾಧಿಕಾರಿ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

Update: 2021-10-13 17:38 GMT

ಪುಣೆ, ಅ. 13: ಭಾರತೀಯ ಸೇನಾ ಪಡೆಯ ಮಹಿಳಾ ಅಧಿಕಾರಿ (43)ಯ ಮೃತದೇಹ ಮಹಾರಾಷ್ಟ್ರದ ಪುಣೆಯ ಮಿಲಿಟರಿ ಇಂಟಲಿಜೆನ್ಸ್ ಟ್ರೈನಿಂಗ್ ಸ್ಕೂಲ್ ಆ್ಯಂಡ್ ಡಿಪೋ (ಎಂಐಎನ್‌ಟಿಎಸ್‌ಡಿ)ದ ಆವರಣದಲ್ಲಿರುವ ಅಧಿಕೃತ ನಿವಾಸದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಸೇನೆ ಹಾಗೂ ಪೊಲೀಸರು ಶಂಕಿಸಿದ್ದಾರೆ.

ಸಿಬ್ಬಂದಿಯೋರ್ವರು ಬೆಳಗ್ಗೆ ಚಹಾ ನೀಡಲು ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಮಹಿಳಾ ಅಧಿಕಾರಿಯ ನಿವಾಸಕ್ಕೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂತು. ಅವರು ದುಪ್ಪಟ್ಟದಿಂದ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಅವರು ಇಲ್ಲಿಗೆ(ಎಂಐಎನ್‌ಟಿಎಸ್‌ಡಿ) ತರಬೇತಿಗೆ ಆಗಮಿಸಿದ್ದರು. ಅವರಿಗೆ ಕೆಲವು ಕೌಟುಂಬಿಕ ಸಮಸ್ಯೆಗಳು ಇದ್ದುವು. ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಪೊಲೀಸ್ ಉಪ ಆಯುಕ್ತ (ವಲಯ 5) ನಮ್ರತಾ ಪಾಟೀಲ್ ಅವರು ಹೇಳಿದ್ದಾರೆ. ಸಾವಿನ ಕುರಿತು ನಾವು ತನಿಖೆ ಆರಂಭಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಎಂಐಎನ್‌ಟಿಎಸ್‌ಡಿ ಆವರಣದಲ್ಲಿರುವ ಅಧಿಕೃತ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಅವರು ಇಲ್ಲಿನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News