'ಸ್ಯಾಫ್‌' ಫುಟ್ಬಾಲ್ ಚಾಂಪಿಯನ್‌ ಶಿಪ್‌ : ಭಾರತ ಫೈನಲ್‌ಗೆ

Update: 2021-10-14 04:43 GMT
ಸುನೀಲ್ ಚೆಟ್ರಿ  (Photo - Twitter/@IndianFootball)

ಮಾಲೆ: ಅಂತಿಮ ಲೀಗ್ ಪಂದ್ಯದಲ್ಲಿ ನಾಯಕ ಸುನೀಲ್ ಚೆಟ್ರಿ ಅವರ ಎರಡು ಗೋಲುಗಳ ನೆರವಿನಿಂದ ಅತಿಥೇಯ ಮಾಲ್ಡೀವ್ಸ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದ ಭಾರತ 'ಸ್ಯಾಫ್' ಚಾಂಪಿಯನ್‌ ಶಿಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಚೆಟ್ರಿ 62 ಹಾಗೂ 71ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದಕ್ಕೂ ಮುನ್ನ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ತಂಡಕ್ಕೆ ಮನ್ವೀರ್ ಸಿಂಗ್ 33ನೇ ನಿಮಿಷದಲ್ಲಿ ಮುನ್ನಡೆ ದೊರಕಿಸಿಕೊಟ್ಟಿದ್ದರು. ಆದರೆ ಅಲಿ ಅಶ್ಫಕ್ 45ನೇ ನಿಮಿಷದಲ್ಲಿ ಸ್ಪಾಟ್ ಕಿಕ್ ಮೂಲಕ ಮಾಲ್ಡೀವ್ಸ್ ಸಮಬಲ ಸಾಧಿಸಲು ನೆರವಾದರು.

ತಮ್ಮ ವೃತ್ತಿ ಜೀವನದ 124ನೇ ಅಂತರರಾಷ್ಟ್ರೀಯ ಪಂದ್ಯ ಆಡುತ್ತಿರುವ 37 ವರ್ಷದ ಚೆಟ್ರಿ, ಅಂತರರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿರುವ ಅರ್ಜೆಂಟೀನಾದ ಲಿಯೊನಲ್ ಮೆಸ್ಸಿ ಅವರ ಸಾಧನೆಯನ್ನು ಸರಿಗಟ್ಟಲು ಕೇವಲ ಒಂದು ಗೋಲಿನಿಂದಷ್ಟೇ ಹಿಂದಿದ್ದಾರೆ. ಪೋರ್ಚುಗಲ್ ಸೂಪರ್‌ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ (115) ಅತ್ಯಧಿಕ ಗೋಲು ಗಳಿಸಿದವರ ಪೈಕಿ ಒಂದನೇ ಸ್ಥಾನದಲ್ಲಿದ್ದಾರೆ.

ಏಳು ಬಾರಿಯ ಚಾಂಪಿಯನ್ ಭಾರತ ಐದು ತಂಡಗಳ ಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಲೀಗ್ ಹಂತವನ್ನು ಕೊನೆಗೊಳಿಸಿತು. ಅಕ್ಟೋಬರ್ 16ರಂದು ನಡೆಯುವ ಫೈನಲ್‌ನಲ್ಲಿ ಭಾರತ ನೇಪಾಳದ ಸವಾಲು ಎದುರಿಸಲಿದೆ.

ಬುಧವಾರ ನಡೆದ ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿದ ನೇಪಾಳ ರೌಂಡ್‌ ರಾಬಿನ್ ಲೀಗ್‌ನಲ್ಲಿ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಭಾರತ ನೇಪಾಳ ವಿರುದ್ಧ 1-0 ಅಂತರದ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News