ಮಾವೋವಾದಿ ನಾಯಕ ರಾಮಕೃಷ್ಣ ಮೃತ್ಯು : ವರದಿ

Update: 2021-10-15 05:15 GMT

ವಿಶಾಖಪಟ್ಟಣಂ: ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಮುಖಂಡ ಅಕ್ಕಿರಾಜು ಹರಗೀಪಾಲ್ ಅಲಿಯಾಸ್ ರಾಮಕೃಷ್ಣ ಛತ್ತೀಸ್‌ಗಢ ಅರಣ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇವರ ಬಗ್ಗೆ ಸುಳಿವು ನೀಡಿದವರಿಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು.

ಆರ್ಕೆ ಎಂದು ಪರಿಚಿತರಾಗಿದ್ದ ರಾಮಕೃಷ್ಣ ಮತ್ತು ಸಾಕೇತ್ ಕೆಲ ಸಮಯದಿಂದ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಆದರೆ 2004ರಲ್ಲಿ ಅವಿಭಜಿತ ಆಂಧ್ರಪ್ರದೇಶ ಸರ್ಕಾರದ ಜತೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸಿದ್ದ ಇವರು ಯಾವಾಗ ಮೃತಪಟ್ಟಿದ್ದಾರೆ ಎನ್ನುವುದು ಖಚಿತವಾಗಿ ತಿಳಿದು ಬಂದಿಲ್ಲ. ಆದರೆ ಮಾವೋವಾದಿ ಸಂಘಟನೆ ಈ ಸಾವನ್ನು ದೃಢಪಡಿಸಿಲ್ಲ.

ಆರ್ಕೆ ನಾಯಕತ್ವದ ನಕ್ಸಲ್ ತಂಡ 2004ರ ಸೆಪ್ಟೆಂಬರ್‌ನಲ್ಲಿ ಆಂಧ್ರಪ್ರದೇಶ ಸರ್ಕಾರದ ಜತೆಗೆ ನಲ್ಲಮಲ ಅರಣ್ಯದಲ್ಲಿ ಶಾಂತಿ ಮಾತುಕತೆಯಲ್ಲಿ ಭಾಗವಹಿಸಿತ್ತು. ಗುಂಟೂರು ಜಿಲ್ಲೆಯ ತುಮ್ರುಪೇಟೆ ಮೂಲದ ಆರ್ಕೆ, ಒಡಿಶಾ- ಆಂಧ್ರ ಗಡಿಪ್ರದೇಶದಲ್ಲಿ ಕೆಂಪು ಬಂಡುಕೋರ ಸಂಘಟನೆಯ ಪ್ರಮುಖ ಮಾರ್ಗದರ್ಶಕರಾಗಿದ್ದರು ಹಾಗೂ ಆಂಧ್ರ ಹಾಗೂ ಒಡಿಶಾದ ಭದ್ರತಾ ಪಡೆಗಳ ಮುಖ್ಯ ’ಬೇಟೆ’ಯಾಗಿದ್ದರು.

ನಿಷೇಧಿತ ಸಂಘಟನೆ ಎರಡೂ ರಾಜ್ಯಗಳಲ್ಲಿ ನಡೆಸುತ್ತಿದ್ದ ಹತ್ಯೆ ಮತ್ತು ದಾಳಿ ಘಟನೆಯ ಸೂತ್ರಧಾರ ಎನಿಸಿದ್ದರು. ಮಾವೋವಾದಿ ಸಂಘಟನೆಯ ಆಂಧ್ರ, ಒಡಿಶಾ ಮತ್ತು ಛತ್ತೀಸ್‌ಗಢ ಆಯಕಟ್ಟಿನ ಪ್ರದೇಶದ ಮುಖ್ಯಸ್ಥರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಪಿಡಬ್ಲ್ಯುಜಿ ಮತ್ತು ಎಂಸಿಸಿಐ ವಿಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News